ಕೋಲಾರ: 7,187 ಯುವ ಮತದಾರರ ನೋಂದಣಿ

7
ಸಭೆಯಲ್ಲಿ ಮತದಾರರ ಪಟ್ಟಿ ವೀಕ್ಷಕ ಉಮಾಶಂಕರ್ ಹೇಳಿಕೆ

ಕೋಲಾರ: 7,187 ಯುವ ಮತದಾರರ ನೋಂದಣಿ

Published:
Updated:
Prajavani

ಕೋಲಾರ: ‘ಜಿಲ್ಲೆಯಲ್ಲಿ 2019ರ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು, ಹೊಸದಾಗಿ 7,187 ಯುವ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ’ ಎಂದು ಮತದಾರರ ಪಟ್ಟಿ ವೀಕ್ಷಕ ಮತ್ತು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ತಿಳಿಸಿದರು.

ಇಲ್ಲಿ ಸೋಮವಾರ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಜ.1ಕ್ಕೆ ಮತದಾರರ ಪಟ್ಟಿ ಪರಿಷ್ಕರಣೆ ಪೂರ್ಣಗೊಂಡಿದ್ದು, ಒಟ್ಟಾರೆ 11,99,087 ಮತದಾರರಿದ್ದಾರೆ’ ಎಂದರು.

‘ಕೇಂದ್ರ ಚುನಾವಣಾ ಆಯೋಗದ ಸೂಚನೆಯನ್ವಯ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಡೆಸಲಾಗಿದೆ. ಜನವರಿ 1ಕ್ಕೆ 18 ವರ್ಷ ತುಂಬಿದ ಯುವಕ, ಯುವತಿಯರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಹಾಗೂ ಪಟ್ಟಿಯಲ್ಲಿನ ಲೋಪದೋಷ ಪರಿಷ್ಕರಣೆ ಅಂತಿಮಗೊಂಡಿದೆ. ಜ.16ಕ್ಕೆ ಮತದಾರರ ಪಟ್ಟಿಯ ಅಂತಿಮ ಕರಡು ಪ್ರಕಟಿಸಿ ಎಲ್ಲಾ ನೋಂದಾಯಿತ ರಾಜಕೀಯ ಪಕ್ಷಗಳಿಗೆ ಎರಡು ಪ್ರತಿ ಒದಗಿಸಲಾಗುವುದು’ ಎಂದು ಹೇಳಿದರು.

ಮುಂಚೂಣಿಯಲ್ಲಿ ಜಿಲ್ಲೆ: ‘ಜಿಲ್ಲೆಯಲ್ಲಿ 6,02,306 ಪುರುಷ ಮತ್ತು 5,96,781 ಮಹಿಳಾ ಮತದಾರರಿದ್ದಾರೆ. ಒಟ್ಟಾರೆ ಜನಸಂಖ್ಯೆಯಲ್ಲಿ ಶೇ 71.23ರಷ್ಟು ಮಂದಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಉಳಿದವರು 18 ವರ್ಷಕ್ಕಿಂತ ಕೆಳಗಿನವರು. ಸೇರ್ಪಡೆಯಲ್ಲಿ ರಾಜ್ಯದ ಸರಾಸರಿ ಶೇ 71.5ರಷ್ಟಿದ್ದರೆ ಜಿಲ್ಲೆಯ ಪ್ರಮಾಣ ಶೇ 0.23ರಷ್ಟು ಹೆಚ್ಚಿದೆ’ ಎಂದು ವಿವರಿಸಿದರು.

‘ದಕ್ಷಿಣ ಕನ್ನಡ ಜಿಲ್ಲೆ ಬಿಟ್ಟರೆ ಮಹಿಳಾ ಮತದಾರರ ಸೇರ್ಪಡೆಯಲ್ಲೂ 1 ಸಾವಿರ ಪುರುಷ ಮತದಾರರಿಗೆ 991 ಮಂದಿ ಮಹಿಳೆಯರು ಸೇರ್ಪಡೆಯಾಗುವ ಮೂಲಕ ಕೋಲಾರ ಜಿಲ್ಲೆಯು ಮುಂಚೂಣಿಯಲ್ಲಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಕೆಲ ಅಂಶಗಳಿಗೆ ಒತ್ತು ನೀಡಲಾಗಿತ್ತು. ಮುಖ್ಯವಾಗಿ ಅಂಗವಿಕಲ ಮತದಾರರು ಮತಗಟ್ಟೆಗೆ ಆಗಮಿಸಿ ಯಾವುದೇ ಸಮಸ್ಯೆಯಿಲ್ಲದೆ ಮತ ಚಲಾಯಿಸಲು ಅವಶ್ಯವಿರುವ ಸೌಲಭ್ಯಗಳನ್ನು ಆಯಾ ಮತಗಟ್ಟೆಗೆ ಕಲ್ಪಿಸುವ ದಿಸೆಯಲ್ಲಿ ಅಂಗವಿಕಲರನ್ನು ಪಟ್ಟಿಯಲ್ಲಿ ಗುರುತಿಸಲಾಗಿದೆ. ಜಿಲ್ಲೆಯ 45 ಸಾವಿರ ಅಂಗವಿಕಲರಲ್ಲಿ 43 ಸಾವಿರ ಮಂದಿಯ ಮಾಹಿತಿ ಸಂಗ್ರಹಿಸಲಾಗಿದೆ. ಇವರಲ್ಲಿ 12,956 ಮಂದಿ ಮತದಾರರಾಗಿದ್ದಾರೆ’ ಎಂದು ಮಾಹಿತಿ ನೀಡಿದರು.

ದೂರು ಬಂದಿಲ್ಲ: ‘ಹೊಸದಾಗಿ ಹೆಸರು ನೋಂದಾಯಿಸಿರುವ ಮತದಾರರಿಗೆ ಎಪಿಕ್ ಕಾರ್ಡ್ ನೀಡಲು ಕ್ರಮ ಕೈಗೊಳ್ಳಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ರಾಜಕೀಯ ಪಕ್ಷಗಳಿಂದ ಯಾವುದೇ ದೂರು ಬಂದಿಲ್ಲ. ಕೆಲ ವೈಯಕ್ತಿಕ ದೂರು ಬಂದಿದ್ದು, ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ ಮಟ್ಟದವರೆಗೂ 4 ಹಂತದಲ್ಲಿ ಪರಿಶೀಲಿಸಿ ಪರಿಹರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್, ಉಪ ವಿಭಾಗಾಧಿಕಾರಿ ಕೆ.ಶುಭಾ ಕಲ್ಯಾಣ್, ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಬೈಚಪ್ಪ, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವೆಂಕಟತಪೆಪ್ಪ, ಸಿಪಿಎಂ ಮುಖಂಡ ಎಸ್.ಆರ್.ಶ್ರೀರಾಮ್ ಹಾಜರಿದ್ದರು.

ಜಿಲ್ಲೆಯಲ್ಲಿರುವ ಮತದಾರರು
ಪುರುಷ ಮಹಿಳೆ ಅಂಗವಿಕಲರು
6,02,306 5,96,781 12,956
ಒಟ್ಟು 11,99,087

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !