ಒತ್ತುವರಿ: ದೇವಾಲಯದ ತಡೆಗೋಡೆ ತೆರವು

7
ಜಿಲ್ಲಾ ಕ್ರೀಡಾಂಗಣದ ಜಾಗ ಸುಬ್ರಹ್ಮಣ್ಯೇಶ್ವರ, ಶನೈಶ್ವರ, ಶಿರಡಿ ಸಾಯಿಬಾಬಾ ಮಂದಿರ ಟ್ರಸ್ಟ್‌ನಿಂದ ಅತಿಕ್ರಮಣ, ಒತ್ತುವರಿ ತೆರವಿಗೆ ಜಿಲ್ಲಾಧಿಕಾರಿ ಆದೇಶ

ಒತ್ತುವರಿ: ದೇವಾಲಯದ ತಡೆಗೋಡೆ ತೆರವು

Published:
Updated:
Prajavani

ಚಿಕ್ಕಬಳ್ಳಾಪುರ: ನಗರದ ಎಚ್‌.ಎಸ್.ಗಾರ್ಡನ್‌ನಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸುಬ್ರಹ್ಮಣ್ಯೇಶ್ವರ, ಶನೈಶ್ವರ, ಶಿರಡಿ ಸಾಯಿಬಾಬಾ ಮಂದಿರದ ಟ್ರಸ್ಟ್‌ನಿಂದ ಒತ್ತುವರಿ ಮಾಡಿಕೊಂಡು ಹಾಕಿದ್ದ ಕಲ್ಲಿನ ತಡೆಗೋಡೆಯನ್ನು ಬುಧವಾರ ಕಂದಾಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಿ, ಒತ್ತುವರಿ ಜಾಗವನ್ನು ವಶಕ್ಕೆ ಪಡೆದರು.

ಮಧ್ಯಾಹ್ನ ತಹಶೀಲ್ದಾರ್ ನರಸಿಂಹಮೂರ್ತಿ, ಕಸಬಾ ಹೋಬಳಿ ಕಂದಾಯ ನಿರೀಕ್ಷಕ ಹನುಮೇಗೌಡ ಅವರ ನೇತೃತ್ವದ ಅಧಿಕಾರಿಗಳ ತಂಡ ಕ್ರೀಡಾಂಗಣದ ಒಳಗೆ ದೇವಾಲಯದವರು ನಿರ್ಮಿಸಿದ್ದ ತಡೆಬೇಲಿಯನ್ನು ಜೆಸಿಬಿ ಬಳಸಿ ತೆರವುಗೊಳಿಸಿದರು. ಈ ವೇಳೆ ದೇವಾಲಯದ ಟ್ರಸ್ಟ್ ಸದಸ್ಯರು, ಅರ್ಚಕರು, ಭಕ್ತರು ತಡೆಗೋಡೆ ತೆರವುಗೊಳಿಸದಂತೆ ಮಾಡಿಕೊಂಡ ಮನವಿಗೆ ಅಧಿಕಾರಿಗಳು ಒಪ್ಪದೆ, ಜಿಲ್ಲಾಧಿಕಾರಿ ಅವರ ಆದೇಶದಂತೆ ಕಾರ್ಯಾಚರಣೆ ನಡೆಸಿದರು.

ಈ ವೇಳೆ ಟ್ರಸ್ಟ್ ಪದಾಧಿಕಾರಿಗಳನ್ನು ಉದ್ದೇಶಿಸಿ ತಹಶೀಲ್ದಾರ್ ಕೆ.ನರಸಿಂಹಮೂರ್ತಿ, ‘ದೇವಾಲಯ ರೈಲ್ವೆ ಇಲಾಖೆಯ ಜಾಗದಲ್ಲಿದೆ. ಆದರೆ ಟ್ರಸ್ಟ್‌ನವರು ಕ್ರೀಡಾಂಗಣಕ್ಕೆ ಸೇರಿದ ಜಾಗಕ್ಕೆ ಬೇಲಿ ಹಾಕಿಕೊಂಡಿದ್ದಾರೆ. ದೇವಾಲಯ ಹೊರತುಪಡಿಸಿದಂತೆ ಉಳಿದೆಲ್ಲವನ್ನು ತೆರವು ಮಾಡಲಾಗುತ್ತದೆ. ಇಲ್ಲಿ ಯಾರನ್ನು ಅನಧಿಕೃತವಾಗಿ ಇರಲು ಬಿಡುವುದಿಲ್ಲ’ ಎಂದು ಹೇಳಿದರು.

‘ಸರ್ಕಾರದ ಅನುಮತಿ ಪಡೆಯದೇ ಈ ರೀತಿ ದೇವಾಲಯ ಕಟ್ಟಿಕೊಂಡು, ಅನಧಿಕೃತ ಟ್ರಸ್ಟ್ ಮಾಡಿಕೊಂಡು ಸರ್ಕಾರಿ ಜಮೀನು ಅತಿಕ್ರಮ ಪ್ರವೇಶ ಮಾಡಿದ್ದು ತಪ್ಪು. ಕ್ರೀಡಾಂಗಣದಲ್ಲಿ ವಸತಿ ನಿಲಯ ನಿರ್ಮಾಣಕ್ಕೆ ಜಾಗ ಬೇಕಿದೆ. ಅದಕ್ಕಾಗಿ ಈ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಸಭೆಗಳು ನಡೆದಿವೆ. ಹೀಗಾಗಿ ಕಾಲಾವಕಾಶ ನೀಡಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

‘ಜಿಲ್ಲಾಧಿಕಾರಿ ಅವರು ಅಂತಿಮ ಆದೇಶ ನೀಡಿದ್ದಾರೆ. ಅದರಂತೆ ತೆರವು ಕಾರ್ಯಾಚರಣೆ ನಡೆಸುತ್ತೇವೆ. ಒಂದು ವಾರದ ಹಿಂದೆಯೇ ತಡೆಗೋಡೆ ತೆರವುಗೊಳಿಸಿ ಎಂದು ಹೇಳಿದರೂ ಏಕೆ ತೆರವು ಮಾಡಲಿಲ್ಲ? ನೀವು ತಪ್ಪು ಮಾಡಿ ನಮ್ಮನ್ನು ತಡೆಯಲು ಬಂದರೆ ಹೇಗೆ? ಜಿಲ್ಲಾಧಿಕಾರಿ ಅವರು ಇಲ್ಲಿರುವ ವಸತಿ ಕಟ್ಟಡ ಕೂಡ ತೆರವು ಮಾಡಲು ಹೇಳಿದ್ದಾರೆ. ನೀವು ಇನ್ನೂ ಏಕೆ ಇಲ್ಲಿಂದ ತೆರವು ಮಾಡಿಲ್ಲ’ ಎಂದು ಅರ್ಚಕರನ್ನು ತರಾಟೆಗೆ ತೆಗೆದುಕೊಂಡರು.

ಕಂದಾಯ ನಿರೀಕ್ಷಕ ಹನುಮೇಗೌಡ ಮಾತನಾಡಿ, ‘ಸರ್ವೇ ನಂಬರ್ 112/3 ಮತ್ತು 115ರಲ್ಲಿ ಇಲ್ಲಿ 29 ಮೂಕ್ಕಾಲು ಗುಂಟೆ ಜಾಗವನ್ನು ದೇವಾಲಯದವರು ಒತ್ತುವರಿ ಮಾಡಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಅವರು ಇತ್ತೀಚೆಗೆ ಸಭೆ ಕರೆದು ತಕ್ಷಣವೇ ಇಲ್ಲಿನ ತಡೆಬೇಲಿ ತೆರವುಗೊಳಿಸಿ ಎಂದು ಸೂಚನೆ ನೀಡಿದ್ದರು. ಅವರ ಆದೇಶ ನಾವು ಪಾಲಿಸುತ್ತಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !