ತ್ವರಿತಗತಿಯಲ್ಲಿ ನೀರು ಹರಿಸಲು ಆಗ್ರಹ

7
ಸಂಸ್ಕರಿತ ತ್ಯಾಜ್ಯ ನೀರು ಪೂರೈಕೆಗೆ ನ್ಯಾಯಾಲಯ ನೀಡಿರುವ ತಡೆಯಾಜ್ಞೆಯ ತೆರವಿಗೆ ಸರ್ಕಾರ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ನಗರದಲ್ಲಿ ರೈತಸಂಘದಿಂದ ಪ್ರತಿಭಟನೆ

ತ್ವರಿತಗತಿಯಲ್ಲಿ ನೀರು ಹರಿಸಲು ಆಗ್ರಹ

Published:
Updated:
Prajavani

ಚಿಕ್ಕಬಳ್ಳಾಪುರ: ಹೆಬ್ಬಾಳ–ನಾಗವಾರ ಮತ್ತು ಕೋರಮಂಗಲ–ಚೆಲ್ಲಘಟ್ಟ ಕಣಿವೆ ಸಂಸ್ಕರಿತ ತ್ಯಾಜ್ಯ ನೀರಿನಿಂದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆ ತುಂಬಿಸುವ ಯೋಜನೆಗೆ ನೀರಾವರಿ ಹೋರಾಟಗಾರರು ನ್ಯಾಯಾಲಯದಿಂದ ತಂದಿರುವ ತಡೆಯಾಜ್ಞೆಯನ್ನು ಸರ್ಕಾರ ಕೂಡಲೇ ತೆರವುಗೊಳಿಸಿ ಜಿಲ್ಲೆಯ ಕೆರೆಗಳಿಗೆ ತ್ವರಿತಗತಿಯಲ್ಲಿ ನೀರು ಹರಿಸಬೇಕು ಎಂದು ರೈತಸಂಘದ ಪದಾಧಿಕಾರಿಗಳು ನಗರದಲ್ಲಿ ಬುಧವಾರ ಪ್ರತಿಭಟನೆ ಮಾಡಿದರು.

ನಗರದ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಬಳಿಕ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ‘ಜಿಲ್ಲೆಯಲ್ಲಿ ರೈತರ ಪರಿಸ್ಥಿತಿ ತುಂಬಾ ಶೋಚನೀಯವಾಗಿದೆ. ಮಳೆ, ಬೆಳೆ ಇಲ್ಲದೆ ರೈತರು ಗುಳೆ ಹೋಗುವ ಪರಿಸ್ಥಿತಿ ಬಂದಿದೆ. ದನ ಕರುಗಳಿಗೆ ನೀರು ಮತ್ತು ಮೇವಿಲ್ಲದೆ ಕಸಾಯಿಖಾನೆಗಳಿಗೆ ಮಾರುತ್ತಿದ್ದಾರೆ. ಆದರೆ ಜನಪ್ರತಿನಿಧಿಗಳು ಜನರ ಸಮಸ್ಯೆಗೆ ಸ್ಪಂದಿಸುವುದು ಮರೆತು ರೆಸಾರ್ಟ್‌ಗೆ ಮೋಜು ಮಸ್ತಿಯಲ್ಲಿ ಕಾಲ ಕಳೆಯುತ್ತಿರುವುದು ಖಂಡನೀಯ’ ಎಂದು ಹೇಳಿದರು.

‘ರೈತರ ಹೋರಾಟ ಫಲವಾಗಿ ಜಿಲ್ಲೆಯಲ್ಲಿ ಎತ್ತಿನಹೊಳೆ, ಏತ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಆದರೆ ಈ ನೀರಾವರಿ ಯೋಜನೆಗಳು ಆರಂಭದಿಂದಲೂ ಆಮೆಗತಿಯಲ್ಲಿ ಸಾಗುತ್ತಿವೆ. ಕೋಲಾರ ಜಿಲ್ಲೆಯಲ್ಲಿ ಈಗಾಗಲೇ ಏತ ನೀರಾವರಿ ಯೋಜನೆಯಲ್ಲಿ 11 ಕೆರೆಗಳಿಗೆ ನೀರು ತುಂಬಿಸಲಾಗಿದೆ. ಆದರೆ ನಮ್ಮ ಜಿಲ್ಲೆಗೆ ಮಾತ್ರ ಇನ್ನು ನೀರೇ ಬರಲಿಲ್ಲ. ನಮಗೆ ನೀರು ಬರದೇ ಹೋದರೆ ಜಿಲ್ಲೆ ಬಯಲು ಸೀಮೆಯಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಇವತ್ತು ನಮಗೆ ಕೃಷಿಗೆ ನೀರು ಬೇಕು. ಅದಕ್ಕಾಗಿ 1,900 ಕೆರೆಗಳನ್ನು ತುಂಬಿಸುವ ಯೋಜನೆ ಜಾರಿಗೆ ತರಬೇಕು. ಇದು ನಮ್ಮ ಸಾಂಕೇತಿಕ ಹೋರಾಟ ಅಷ್ಟೇ. ಈ ಯೋಜನೆಗೆ ಸಮರ್ಪಕವಾದ ದಾಖಲೆಗಳು ಕೊಟ್ಟು ಸಮಸ್ಯೆ ನಿವಾರಿಸದೇ ಇದ್ದರೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ದೊಡ್ಡ ಚಳವಳಿ ಮಾಡುತ್ತೇವೆ’ ಎಂದು ತಿಳಿಸಿದರು.

ರೈತ ಸಂಘದ ಜಿಲ್ಲಾ ಘಟಕ ಉಪಾಧ್ಯಕ್ಷ ಸತ್ಯನಾರಾಯಣ, ಶಿಡ್ಲಘಟ್ಟ ತಾಲ್ಲೂಕು ಘಟಕದ ಅಧ್ಯಕ್ಷ ತಾದೂರು ಮಂಜುನಾಥ್, ಚಿಕ್ಕಬಳ್ಳಾಪುರ ತಾಲ್ಲೂಕು ಘಟಕದ ಅಧ್ಯಕ್ಷ ರಾಮಾಂಜಿನಪ್ಪ, ಮುಖಂಡರಾದ ರಮೇಶ್, ಶಿವಾನಂದ, ಬೈರಪ್ಪ, ಮುನಿನಂಜಪ್ಪ, ನರಸಿಂಹರೆಡ್ಡಿ, ನಾರಾಯಣ ಸ್ವಾಮಿ, ಗಂಗಾಧರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !