ಸಂಗನಬಸವ ಸ್ವಾಮೀಜಿ ಹೇಳಿಕೆಗೆ ಧನ್ನೂರ ಖಂಡನೆ

7

ಸಂಗನಬಸವ ಸ್ವಾಮೀಜಿ ಹೇಳಿಕೆಗೆ ಧನ್ನೂರ ಖಂಡನೆ

Published:
Updated:
Prajavani

ಬೀದರ್: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಹೋರಾಟದ ನೇತೃತ್ವ ವಹಿಸಿರುವ ಮಠಾಧೀಶರ ಕುರಿತು ಶಿವಯೋಗ ಮಂದಿರದ ಅಧ್ಯಕ್ಷ ಸಂಗನಬಸವ ಸ್ವಾಮೀಜಿ ಲಘುವಾಗಿ ಮಾತನಾಡಿರುವುದನ್ನು ಜಿಲ್ಲಾ ಲಿಂಗಾಯತ ಸಮನ್ವಯ ಸಮಿತಿಯ ಅಧ್ಯಕ್ಷ ಬಸವರಾಜ ಧನ್ನೂರ ತೀವ್ರವಾಗಿ ಖಂಡಿಸಿದ್ದಾರೆ.

‘ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ವಿಡಿಯೊವೊಂದರಲ್ಲಿ ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅವರ ಹೆಸರು ಪ್ರಸ್ತಾಪಿಸದೆ ಲಿಂಗಾಯತ ಹೋರಾಟದ ನೇತೃತ್ವ ವಹಿಸಿದವರು ಕೆಲವೇ ದಿನಗಳಲ್ಲಿ ಲಿಂಗೈಕ್ಯ ಆಗಲಿದ್ದಾರೆ. ಹೋರಾಟ ಶೀಘ್ರ ಅಂತ್ಯಗೊಳ್ಳಲಿದೆ ಎಂದು ಸ್ವಾಮೀಜಿ ನೀಡಿರುವ ಹೇಳಿಕೆ ಅವರ ಸಣ್ಣತನ ಪ್ರದರ್ಶಿಸಿದೆ’ ಎಂದು ಹೇಳಿದ್ದಾರೆ.

‘ಹುಟ್ಟು-ಸಾವು ಯಾರ ಕೈಯಲ್ಲೂ ಇಲ್ಲ. ಅದು ಪರಮಾತ್ಮನ ಕೈಯಲ್ಲಿ ಇದೆ. ಎಲ್ಲರ ಒಳಿತು ಬಯಸುವುದು ಸ್ವಾಮೀಜಿಯಾದವರ ಧರ್ಮ ಹಾಗೂ ಕರ್ತವ್ಯ. ಬೇರೆಯವರಿಗೆ ಕೇಡು ಬಯಸುವುದು ಅವರಿಗೆ ಶೋಭೆ ತರುವುದಿಲ್ಲ’ ಎಂದು ತಿಳಿಸಿದ್ದಾರೆ.

‘ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಹೋರಾಟವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮಾತಾಜಿ ನೂರುಕಾಲ ಬದುಕಲಿದ್ದಾರೆ. ಅವರ ಜೀವಿತ ಅವಧಿಯಲ್ಲಿಯೇ ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗುವುದು ಶತಸಿದ್ಧ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಬಸವಣ್ಣನವರು ಸ್ಥಾಪಿಸಿರುವ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವೇ ಆಗಿದೆ. ಜಾತಿ-ವರ್ಗ-ವರ್ಣ ರಹಿತ, ಸ್ವಾತಂತ್ರ್ಯ, ಸಮಾನತೆ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಧರ್ಮ ಇದಾಗಿದೆ. ಇಂಥ ಶ್ರೇಷ್ಠ ಧರ್ಮಕ್ಕೆ ಮಾನ್ಯತೆ ಪಡೆಯುವುದು ಲಿಂಗಾಯತರ ಹಕ್ಕು. ಇದು ಲಿಂಗಾಯತರ ಅಸ್ಮಿತೆಯ ಪ್ರಶ್ನೆಯೂ ಹೌದು’ ಎಂದು ಹೇಳಿದ್ದಾರೆ.

‘ಮಾತೆ ಮಹಾದೇವಿ ಅವರು ತಮ್ಮ ಇಡೀ ಶಕ್ತಿಯನ್ನು ಬಳಸಿಕೊಂಡು ಸ್ವತಂತ್ರ ಧರ್ಮಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಕೆಲ ದಿನಗಳಿಂದ ಅವರ ಆರೋಗ್ಯದಲ್ಲಿ ಏರು ಪೇರು ಆಗಿರಬಹುದು. ಆದರೆ, ಅವರ ಆಯುಷ್ಯದ ಕುರಿತು ಸಂಗನಬಸವ ಸ್ವಾಮೀಜಿ ಲಘುವಾಗಿ ಮಾತನಾಡಿರುವುದು ಲಿಂಗಾಯತ ಸಮುದಾಯಕ್ಕೆ ನೋವು ಉಂಟು ಮಾಡಿದೆ’ ಎಂದಿದ್ದಾರೆ.

‘ಸ್ವಾಮೀಜಿ ಕೂಡಲೇ ಸಾರ್ವಜನಿಕವಾಗಿ ಮಾತೆ ಮಹಾದೇವಿ ಹಾಗೂ ಲಿಂಗಾಯತರ ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !