ಮೇಲ್ವರ್ಗದಲ್ಲಿ ಒಳ ಮೀಸಲಾತಿ ನೀಡಲಿ

7
ಕೇಂದ್ರಕ್ಕೆ ದಸಂಸ ರಾಜ್ಯ ಘಟಕದ ಸಂಚಾಲಕ ಶ್ರೀನಿವಾಸ್ ಒತ್ತಾಯ

ಮೇಲ್ವರ್ಗದಲ್ಲಿ ಒಳ ಮೀಸಲಾತಿ ನೀಡಲಿ

Published:
Updated:
Prajavani

ಕೋಲಾರ: ‘ಮೇಲ್ವರ್ಗದಲ್ಲಿರುವ ಬಡವರಿಗೆ ಮೀಸಲಾತಿ ನೀಡುವುದಕ್ಕೆ ವಿರೋಧವಿಲ್ಲ. ಆದರೆ, ಇದರಲ್ಲೂ ಒಳ ಮೀಸಲಾತಿ ನೀಡಬೇಕು’ ಎಂದು ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ) ರಾಜ್ಯ ಘಟಕದ ಸಂಚಾಲಕ ಶ್ರೀನಿವಾಸ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಸಮಿತಿಯು ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ದಲಿತರ ಐಕ್ಯತಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ‘ಮಂಡಲ್ ಸಮಿತಿ ವರದಿ ಅನುಷ್ಠಾನದ ಭಾಗವಾಗಿ ಮೇಲ್ವರ್ಗದಲ್ಲಿನ ಎಲ್ಲಾ ಬಡವರಿಗೆ ಶೇ 10ರಷ್ಟು ಮೀಸಲಾತಿ ನೀಡುವ ಕೇಂದ್ರದ ಕ್ರಮ ಸ್ವಾಗತಾರ್ಹ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಒಟ್ಟು ಮೀಸಲಾತಿ ಶೇ 50 ದಾಟಬಾರದೆಂದು ಅಂಬೇಡ್ಕರ್ ಹೇಳಿದ್ದಾರೆ. ಆದರೆ, ಮೀಸಲಾತಿ ಯಾರು ಪಡೆಯುತ್ತಾರೆ ಎಂಬ ಬಗ್ಗೆ ಪರಾಮರ್ಶೆ ನಡೆಯಬೇಕು. ಬಡ್ತಿ ಮೀಸಲಾತಿಯಲ್ಲಿ ಅನ್ಯಾಯ ಆಗುತ್ತಿದೆ. ಕೋಮುವಾದಿತನದ ಮೂಲಬೇರು ಕಿತ್ತು ಹಾಕದಿದ್ದರೆ ಅಪಾಯ ಖಚಿತ’ ಎಂದು ಅಭಿಪ್ರಾಯಪಟ್ಟರು.

‘ದೇಶದಲ್ಲಿ ಸಂವಿಧಾನ ಬುಡಮೇಲು ಮಾಡುವ ಷಡ್ಯಂತರ ನಡೆಯುತ್ತಿದೆ. ದಲಿತರ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆ ದುರುಪಯೋಗವಾಗುತ್ತಿದೆ ಎಂಬ ನೆಪವೊಡ್ಡಿ ತಿದ್ದುಪಡಿ ತಂದ ಕೇಂದ್ರದ ಕ್ರಮಕ್ಕೆ ವಿರೋಧ ವ್ಯಕ್ತವಾಯಿತು. ಹೀಗಾಗಿ ಸರ್ಕಾರವು ತಿದ್ದುಪಡಿ ಪ್ರಯತ್ನ ಕೈಬಿಟ್ಟಿತ್ತು’ ಎಂದು ವಿವರಿಸಿದರು.

ಕುಟುಂಬ ರಾಜಕಾರಣ: ‘ಸತತ 7 ಬಾರಿ ಜಯ ಗಳಿಸಿರುವ ಸಂಸದ ಕೆ.ಎಚ್.ಮುನಿಯಪ್ಪ ಅವರಿಂದ ಜಿಲ್ಲೆಗೆ ಏನು ಉಪಯೋಗ? ಕುಟುಂಬ ರಾಜಕಾರಣ ಅಪಾಯಕರ ಎಂದು ಅಂಬೇಡ್ಕರ್ ಹೇಳಿದ್ದರು. ಆದರೆ, ಜಿಲ್ಲೆಯಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದೆ. ಮುನಿಯಪ್ಪ ಯಾವ ವರ್ಗದ ಜನರನ್ನು ಪ್ರತಿನಿಧಿಸಬೇಕಿತ್ತೋ ಅವರನ್ನು ಪ್ರತಿನಿಧಿಸುತ್ತಿಲ್ಲ. ಮುಳಬಾಗಿಲು ಶಾಸಕ ನಾಗೇಶ್ ಬಗ್ಗೆ ಎಚ್ಚರದಿಂದ ಇರಬೇಕು’ ಎಂದು ಹೇಳಿದರು.

‘ಮುನಿಯಪ್ಪ ದಲಿತ ಸಮುದಾಯದವರಾಗಿದ್ದರೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಮ್ಮ ವಿರೋಧಿಗಳು ಯಾರೆಂದು ಗುರುತಿಸಿ ಸೋಲಿಸಬೇಕು. ದೇಶದಲ್ಲಿ ಇಂದು ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ. ಮಾಯಾವತಿ ದೇಶದ ಪ್ರಧಾನಿಯಾಗಬೇಕು’ ಎಂದು ಆಶಿಸಿದರು.

‘ಕೃಷ್ಣಪ್ಪ ಅವರು ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳದೆ ದಲಿತರ ಏಳಿಗೆಗೆ ಹೋರಾಟ ನಡೆಸಿದರು. ಅವರ ಮಾರ್ಗ ಅನುಸರಿಸಬೇಕು. ನಮ್ಮದು ಕಾರ್ಯಕರ್ತರ ಚಳವಳಿ ಆಗಬೇಕು. ಆಗ ಮಾತ್ರ ಕೃಷ್ಣಪ್ಪರ ಹುಟ್ಟಿದ ದಿನದ ಆಚರಣೆ ಸಾರ್ಥಕವಾಗುತ್ತದೆ’ ಎಂದು ಸಲಹೆ ನೀಡಿದರು.

ಗುರಿ ಸಾಧನೆಯಾಗಿಲ್ಲ: ‘ಜಿಲ್ಲೆಯಲ್ಲಿ ದಲಿತ ನಾಯಕರು ಚುನಾವಣೆಗೊಂದು ನಿಲುವು ತಳೆಯುತ್ತಾ ಜನರ ದೃಷ್ಟಿಯಲ್ಲಿ ಅಪಹಾಸ್ಯಕ್ಕೆ ಈಡಾಗಿದ್ದಾರೆ. ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳಿಗೆ ನೂರೊಂದು ಸಂಘಟನೆ ಹುಟ್ಟಿಕೊಂಡಿದೆ. ಹೀಗಾಗಿ ಜನಾಧಿಕಾರ ಪಡೆಯುವ ಗುರಿ ಸಾಧನೆಯಾಗಿಲ್ಲ’ ಎಂದು ಭಾರತ ಸೇವಾದಳ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಗಣೇಶ್ ಅಭಿಪ್ರಾಯಪಟ್ಟರು.

‘ಜಾತಿ ವ್ಯವಸ್ಥೆಯು ಮೇಲ್ವರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ. ದಲಿತರಲ್ಲೂ ಜಾತಿವಾದ ಇದೆ. ಸಮುದಾಯದಲ್ಲೇ ಜಾತಿವಾದ ಇದ್ದುಕೊಂಡು ಜಾತಿ ವ್ಯವಸ್ಥೆಯನ್ನು ದೂರುವುದು ಸರಿಯಲ್ಲ’ ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಸಂಚಾಲಕ ಮುನಿಯಪ್ಪ, ರಾಜ್ಯ ಸಂಘಟನಾ ಸಂಚಾಲಕ ರಮೇಶ್, ಸದಸ್ಯರಾದ ಚಂದ್ರಶೇಖರ್, ವೆಂಕಟರಮಣ, ಯಲ್ಲಪ್ಪ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !