ಯೋಜನೆ ವಿರೋಧಿಸುವವರ ವಿರುದ್ಧ ಪಾದಯಾತ್ರೆ

7
ರಾಜ್ಯ ಹೆದ್ದಾರಿ–58 ರಿಂದ ನಾಮಗೊಂಡ್ಲು ಕೇತೇನಹಳ್ಳಿ ಮಾರ್ಗವಾಗಿ ಚಿಕ್ಕಬಳ್ಳಾಪುರ ಸಂಪರ್ಕಿಸುವ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

ಯೋಜನೆ ವಿರೋಧಿಸುವವರ ವಿರುದ್ಧ ಪಾದಯಾತ್ರೆ

Published:
Updated:
Prajavani

ಚಿಕ್ಕಬಳ್ಳಾಪುರ: ‘ಸಂಸ್ಕರಿಸಿದ ತಾಜ್ಯ ನೀರಿನಿಂದ ಕೆರೆಗಳನ್ನು ತುಂಬಿಸುವ ಯೋಜನೆಗೆ ಅಡ್ಡಿಪಡಿಸುವವರ ವಿರುದ್ಧ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಪ್ರತಿ ತಾಲ್ಲೂಕಿನ ಜನರು ವಿಧಾನಸಭೆ ಬಜೆಟ್ ಸಂದರ್ಭದಲ್ಲಿ ಬೆಂಗಳೂರಿಗೆ ಪಾದಯಾತ್ರೆ ನಡೆಸಬೇಕು. ಈ ವಿಚಾರವಾಗಿ ಪ್ರತಿ ತಾಲ್ಲೂಕಿನಲ್ಲಿ ಶೀಘ್ರದಲ್ಲಿಯೇ ಪೂರ್ವಭಾವಿ ಸಭೆಗಳನ್ನು ನಡೆಸಲಾಗುತ್ತದೆ’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ತಾಲ್ಲೂಕಿನ ಕೇತೇನಹಳ್ಳಿಯಲ್ಲಿ ಗುರುವಾರ ಲೋಕೋಪಯೋಗಿ ಇಲಾಖೆ ವತಿಯಿಂದ ನಡೆದ ರಾಜ್ಯ ಹೆದ್ದಾರಿ –58 ರಿಂದ ನಾಮಗೊಂಡ್ಲು ಕೇತೇನಹಳ್ಳಿ ಮಾರ್ಗವಾಗಿ ಚಿಕ್ಕಬಳ್ಳಾಪುರ ಸಂಪರ್ಕಿಸುವ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈಗಾಗಲೇ 100 ಹಳ್ಳಿಗಳಲ್ಲಿ ಕುಡಿಯುವ ನೀರಿಲ್ಲ. ಮೇ ಹೊತ್ತಿಗೆ ಏನಾಗುತ್ತದೋ ಎಂಬ ಆತಂಕ ಉಂಟಾಗುತ್ತಿದೆ. ಎಲ್ಲ ಯೋಜನೆಗಳಿಗೂ ನೀರಾವರಿ ಯೋಜನೆ ಬಹು ಮುಖ್ಯ. ಈ ಭಾಗದಲ್ಲಿರುವ ಜನ ಬದುಕಬೇಕಲ್ಲ? ಹೀಗಾಗಿ ನೀರಿಗಾಗಿ ಹೋರಾಟ ಮಾಡುವ ಅವಶ್ಯಕತೆ ನಮ್ಮ ಭಾಗಕ್ಕೆ ಬಂದಿದೆ. ಅದಕ್ಕೆಲ್ಲ ನೀವು ಬೆಂಬಲ ಕೊಡಬೇಕು’ ಎಂದು ಜನರಲ್ಲಿ ಮನವಿ ಮಾಡಿದರು.

‘ಕೆರೆಗಳನ್ನು ತುಂಬಿಸುವ ಯೋಜನೆಗೆ ತಡೆಯಾಜ್ಞೆ ತಂದವರ ಹಿಂದೆ ಇರುವ ದುಷ್ಟ ಶಕ್ತಿಗಳು ಲಕ್ಷಾಂತರ ರೈತರ ಶಾಪ ಹೊರಬೇಕಾಗುತ್ತದೆ. ಯಾರು ಇದರ ಹಿಂದೆ ಇದ್ದಾರೆ. ಯಾರೆಲ್ಲ ನ್ಯಾಯಾಲಯಗಳಲ್ಲಿ ಪ್ರಭಾವ ಬೀರುತ್ತಿದ್ದಾರೆ ಎನ್ನುವುದು ನನಗೆ ಗೊತ್ತಾಗಿದೆ. ಹಾಗಾಗಿ ಸರ್ಕಾರ ಇದನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು. ಯೋಜನೆ ಅನುಷ್ಟಾನಗೊಂಡರೆ ಮೂರ್ನಾಲ್ಕು ತಿಂಗಳಲ್ಲಿ ಕೆರೆಗಳು ತುಂಬುತ್ತವೆ. ಅದಕ್ಕೆ ಅಡ್ಡಿಪಡಿಸಿದರೆ. ನಾವು ಸುಮ್ಮನಿರಲು ಸಾಧ್ಯವಿಲ್ಲ’ ಎಂದರು.

‘ಎತ್ತಿನಹೊಳೆ ಯೋಜನೆಯಲ್ಲಿ ಈವರೆಗೆ ಒಂದೇ ಒಂದು ಎಕರೆ ಭೂಸ್ವಾಧೀನ ನಡೆದಿಲ್ಲ. ಈ ಯೋಜನೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಸಾಲಮನ್ನಾಕ್ಕಿಂತಲೂ ಹೆಚ್ಚಿನ ಆದ್ಯತೆ ನೀಡಬೇಕು. ರೈತರು ತಮ್ಮ ಬದುಕು ಶಾಶ್ವತ ಹಸನು ಮಾಡಿಕೊಳ್ಳುವ ಯೋಜನೆ, ಮುಖ್ಯಮಂತ್ರಿ, ನೀರಾವರಿ ಸಚಿವರಿಗೆ ಮನವಿ ಮಾಡಿಕೊಳ್ಳುತ್ತೇವೆ’ ಎಂದು ಹೇಳಿದರು.

‘ಶಾಸಕ ಆಗುವುದು ದೊಡ್ಡ ವಿಚಾರವಲ್ಲ. ಅದು ದೊಡ್ಡ ಜವಾಬ್ದಾರಿ ಎಂದು ತಿಳಿದುಕೊಳ್ಳಬೇಕು. ಎರಡು ಲಕ್ಷ ಜನರ ಧ್ವನಿಯಾಗಿ ವಿಧಾನಸೌಧದಲ್ಲಿ ಮಾತನಾಡಬೇಕು. ಸಮಾಜದಲ್ಲಿರುವ ಎಲ್ಲಾ ವರ್ಗದ ಜನರಿಗೆ ಅಭಿವೃದ್ಧಿ ಕಾರ್ಯಕ್ರಮಗಳು ನೀಡಬೇಕು’ ಎಂದು ತಿಳಿಸಿದರು.

‘ಈ ಹಿಂದೆ ಇದ್ದ ಶಾಸಕರಿಗೆ ಕೇತೇನಹಳ್ಳಿ ಎಲ್ಲಿದೆ ಇದೆ ಅಂತ ಗೊತ್ತಿಲ್ಲರಲಿಲ್ಲ. ಈ ಭಾಗದ ಜನರ ಮತ ಪಡೆದವರು ಎಲ್ಲಾ ರೀತಿಯಲ್ಲಿ ಅಭಿವೃದ್ಧಿ ಹೊಂದಿದರು. ಆದರೆ ಕಷ್ಟದಲ್ಲಿರುವ ಜನರಿಗೆ ಏನಾದರೂ ಮಾಡೋಣ ಎಂಬ ವಿವೇಚನೆ ಅವರಿಗೆ ಬರಲಿಲ್ಲ. ಬಚ್ಚೇಗೌಡರು ಐದು ವರ್ಷದ ಅಧಿಕಾರ ಅವಧಿ ಸಲಿಸಾಗಿ ಕಳೆದರು. ಅವರಿಗೆ ಅವರ ಊರಿನ ಅಭಿವೃದ್ಧಿ ಸಹ ಮಾಡಲು ಆಗಲಿಲ್ಲ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಿ.ಎನ್.ಕೇಶವರೆಡ್ಡಿ, ಪಿ.ಎನ್.ಪ್ರಕಾಶ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸತೀಶ್, ಬಾಲಕೃಷ್ಣ, ಕೋಚಿಮುಲ್‌ ನಿರ್ದೇಶಕ ಕೆ.ವಿ.ನಾಗರಾಜ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ದ್ಯಾವಣ್ಣ, ಮೋಹನ್ ರೆಡ್ಡಿ, ಮುಖಂಡರಾದ ವೆಂಕಟನಾರಾಯಣಪ್ಪ, ರಾಜಣ್ಣ, ಗವಿರಾಯಪ್ಪ, ಸುನೀಲ್, ಹರೀಶ್, ಪಿಳಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !