‘ಭಾರತರತ್ನ’ಕ್ಕೆ ಮತ್ತೊಮ್ಮೆ ಮನವಿ: ಮುಖ್ಯಮಂತ್ರಿ

7

‘ಭಾರತರತ್ನ’ಕ್ಕೆ ಮತ್ತೊಮ್ಮೆ ಮನವಿ: ಮುಖ್ಯಮಂತ್ರಿ

Published:
Updated:

ಮಂಡ್ಯ: ‘ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಡಾ.ಶಿವಕುಮಾರ ಸ್ವಾಮೀಜಿಗೆ ಭಾರತರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೆ. ಅಗತ್ಯ ಬಿದ್ದರೆ ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿಯನ್ನು ಭೇಟಿ ಮಾಡಿ ಮತ್ತೊಮ್ಮೆ ಮನವಿ ಸಲ್ಲಿಸುತ್ತೇನೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶುಕ್ರವಾರ ಹೇಳಿದರು.

ಆದಿಚುಂಚನಗಿರಿ ಮಠದಲ್ಲಿ ನಡೆದ ಬಾಲಗಂಗಾಧರನಾಥ ಸ್ವಾಮೀಜಿಗಳ 74ನೇ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ನಮ್ಮ ಸರ್ಕಾರದ ಅವಧಿಯಲ್ಲೇ ಸಿದ್ಧಗಂಗಾಶ್ರೀಗಳಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಭಾರತರತ್ನ ಪ್ರಶಸ್ತಿ ಘೋಷಣೆ ಆಗ ರಾಷ್ಟ್ರಪತಿಯಾಗಿದ್ದ ಡಾ.ಎಪಿಜೆ ಅಬ್ದುಲ್‌ ಕಲಾಂ ಅವರಿಗೆ ಮನವಿ ಮಾಡಿದ್ದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈಗ ಶ್ರೀಗಳು ಪವಾಡಸದೃಶ ರೀತಿಯಲ್ಲಿ ಚೇತರಿಸಿಕೊಂಡಿದ್ದಾರೆ. ಇದಕ್ಕೆ ದೇವರ ಆಶೀರ್ವಾದ , ಶ್ರೀಗಳ ಆತ್ಮಸ್ಥೈರ್ಯವೇ ಕಾರಣ. ಗುರುವಾರ ಒಂದು ಗಂಟೆ ಕಾಲ ಸ್ವತಃ ಉಸಿರಾಡಿದ್ದಾರೆ’ ಎಂದರು.

ಕಲ್ಲು ಬಂಡೆಯಾಗಿ ಮುಂದುವರಿಯುವೆ: ‘ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವಧೂತ ಶ್ರೀಗಳ ಆಶೀರ್ವಾದ ಇರುವವರೆಗೆ ನನಗೆ ಯಾರೂ, ಏನೂ ಮಾಡಲು ಸಾಧ್ಯವಿಲ್ಲ. ಕಲ್ಲು ಬಂಡೆಯ ರೀತಿಯಲ್ಲಿ ಅಧಿಕಾರದಲ್ಲಿ ಮುಂದುವರಿಯುತ್ತೇನೆ. ನಾನು ಶ್ರೀಕ್ಷೇತ್ರದ ಮಗ, ಹೀಗಾಗಿ ಶ್ರೀಗಳ ಆಶೀರ್ವಾದ ಬೇಡಲು ಬಂದಿದ್ದೇನೆ. ದಯವಿಟ್ಟು ಮಾಧ್ಯಮಗಳು ಶ್ರೀಗಳ ಹೆಸರನ್ನು ರಾಜಕೀಯಕ್ಕೆ ಬಳಸಬಾರದು. ನಾನು ಅವರನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಸಣ್ಣತನಕ್ಕೆ ಇಳಿಯುವುದಿಲ್ಲ’ ಎಂದರು.

ಮುಖ್ಯಮಂತ್ರಿ ವಿಷಕಂಠ: ನಂಜಾವಧೂತ ಸ್ವಾಮೀಜಿ ಮಾತನಾಡಿ ‘ಮುಖ್ಯಮಂತ್ರಿಗಳು ವಿಷಕಂಠನ ರೀತಿಯಲ್ಲಿ ಒಳಿತು, ಕೆಡುಕುಗಳನ್ನು ನುಂಗಿ ಒಳಿತನ್ನೇ ಮಾಡುತ್ತಿದ್ದಾರೆ. ಅವರ ಆರೋಗ್ಯ ಚೆನ್ನಾಗಿರಬೇಕು. ಕಷ್ಟಗಳು ಬರುತ್ತವೆ, ಹೋಗುತ್ತವೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಆರೋಗ್ಯದ ಕಡೆ ಗಮನ ಹರಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ರೈತರ ಕಷ್ಟ ತಡವಾಗಿ ಅರ್ಥವಾಗಿವೆ. ಆದರೆ ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ 46 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದಾರೆ’ ಎಂದರು.

‘ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವುದು ನಾಡಿನ ಸುದೈವ. ದೇವೇಗೌಡ, ಕುಮಾರಸ್ವಾಮಿ ಆಡಳಿತವನ್ನು ಜನರು ನೆನಪು ಮಾಡಿಕೊಳ್ಳುತ್ತಾರೆ. ಒಟ್ಟ ಕೆಟ್ಟ ರಾಜ ರಾಜ್ಯವನ್ನು ಕೆಡಿಸುತ್ತಾನೆ. ಆದರೆ ಕುಮಾರಸ್ವಾಮಿ ಒಳ್ಳೆಯ ರಾಜ, ಅವರು ನಾಡನ್ನು ಕಟ್ಟುತ್ತಾರೆ. ಅವರು ಅಧಿಕಾರದಲ್ಲಿ ಇರುವವರೆಗೂ ಒಳ್ಳೆಯ ಕೆಲಸ ಮಾಡುತ್ತಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !