ನೀರಿನ ಯೋಜನೆಗೆ ಅನುದಾನ: ಸಭಾತ್ಯಾಗ

7
ಶಾಸಕರ ಕೈಗೊಂಬೆಯಾಗಿ ಕೆಲಸ ಮಾಡ್ತಿದ್ದೀರಿ: ಸಿಇಒ ವಿರುದ್ಧ ಪುಷ್ಪಾ ನಾಯ್ಕ ಆರೋಪ

ನೀರಿನ ಯೋಜನೆಗೆ ಅನುದಾನ: ಸಭಾತ್ಯಾಗ

Published:
Updated:
Prajavani

ಕಾರವಾರ: ‌ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಅನುದಾನವನ್ನು ಟಾಸ್ಕ್‌ಫೋರ್ಸ್‌ (30:54 ಯೋಜನೆ) ಸಭೆ ಕರೆಯದೇ ಮಂಜೂರು ಮಾಡಲಾಗಿದೆ. ಈ ಬಗ್ಗೆ ಸದಸ್ಯರ ಗಮನಕ್ಕೆ ತರಲಿಲ್ಲ ಎಂದು ಆರೋಪಿಸಿ ಜಿಲ್ಲಾ ಪಂಚಾಯ್ತಿಯ ಕೆಲವು ಸದಸ್ಯರು ಜಿಲ್ಲಾ ಪಂಚಾಯ್ತಿ ಸಿಇಒ ಹಾಗೂ ಅಧ್ಯಕ್ಷರ ಮೇಲೆ ಹರಿಹಾಯ್ದರು. ಬಳಿಕ ಸಭಾತ್ಯಾಗ ಮಾಡಿದರು.

ಶುಕ್ರವಾರ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ವಿಚಾರ ಪ್ರಸ್ತಾಪಿಸಿದ ಸದಸ್ಯೆ ಪುಷ್ಪಾ ನಾಯ್ಕ, ‘ಸಭೆಗೆ ಹಾಜರಾಗದವರು ಸಹಿ ಮಾಡಿದ್ದಾರೆ. ಅದನ್ನು ನೀವು ಮಂಜೂರು ಮಾಡಿದ್ದೀರಿ. ಇದು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ‘ಟಾಸ್ಕ್‌ಫೋರ್ಸ್‌ಗೆ ಸ್ಥಳೀಯ ಶಾಸಕರು ಅಧ್ಯಕ್ಷರಾಗಿರುತ್ತಾರೆ. ಸಭೆಯಲ್ಲಿ ಶೇ 15ರಷ್ಟು ಸದಸ್ಯರ ಹಾಜರಾತಿ ಇರಬೇಕು ಎಂಬ ನಿಯಮವಿದೆ. ಅದರಂತೆ ಶಾಸಕರು ಹಾಗೂ ಒಬ್ಬರು ಸದಸ್ಯರಿದ್ದರೆ ಸಾಕು. ನಿಯಮದ ಪ್ರಕಾರ ನಾನು ಸಹಿ ಮಾಡಿದ್ದೇನೆ’ ಎಂದು ಸ್ಪಷ್ಟಪಡಿಸಿದರು. 

ಇದರಿಂದ ಸಮಾಧಾನಗೊಳ್ಳದ ‍ಪುಷ್ಪಾ ನಾಯ್ಕ, ‘ಮಂಜೂರಾತಿ ಮಾಡಲು ನಿಮಗೆ ಅಧಿಕಾರವಿದೆ. ಆದರೆ, ಈ ಬಗ್ಗೆ ತನಿಖೆಗೆ ಅಧಿಕಾರವಿಲ್ಲ ಎಂದರೆ ಹೇಗೆ? ನೀವು ಶಾಸಕರ ಕೈಗೊಂಬೆಯಾಗಿ ಕೆಲಸ ಮಾಡ್ತಿದ್ದೀರಿ ಎಂದು ನಮಗೆ ಕಾಣುತ್ತಿದೆ’ ಎಂದು ಆರೋಪಿಸಿದರು. 

ಇದರಿಂದ ಅಸಮಾಧಾನಗೊಂಡ ಸಿಇಒ ರೋಶನ್, ‘ಜಿಲ್ಲಾ ಪಂಚಾಯ್ತಿ ಸದಸ್ಯರಿಗೆ ನಾನು ತುಂಬ ಗೌರವ ಕೊಡುತ್ತೇನೆ. ನನ್ನ ಮೇಲೆ ನೀವು ಆ ರೀತಿಯ ಆರೋಪ ಮಾಡುವುದು ಸರಿಯಲ್ಲ. ನಿಯಮದ ಪ್ರಕಾರ ಇರುವ ಕಡತಕ್ಕೆ ನಾನು ಸಹಿ ಮಾಡುವುದನ್ನು ಯಾರು ಯಾಕೆ ತಡೀಬೇಕು?’ ಎಂದು ಪ್ರಶ್ನಿಸಿದರು.

ಇದೇವೇಳೆ ಮಾತನಾಡಿದ ಸದಸ್ಯ ಆಲ್ಬರ್ಟ್ ಡಿಕೋಸ್ತ, ‘ನಾವು ಇಲ್ಲಿ ಭಿಕ್ಷೆ ಬೇಡಲು ಬಂದಿಲ್ಲ. ಸದಸ್ಯರಿಗೆ ಗೌರವ ಇಲ್ವಾ?’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಗದ್ದಲದ ನಡುವೆಯೇ ತಾವು ಸಭಾತ್ಯಾಗ ಮಾಡುವುದಾಗಿ ಸದಸ್ಯರಾದ ಪುಷ್ಪಾ ನಾಯ್ಕ, ಸಿಂಧೂ ನಾಯ್ಕ, ವೀಣಾ ಸೂರಜ್ ನಾಯ್ಕ, ಸವಿತಾ ಗೌಡ ಸೇರಿದಂತೆ ಏಳೆಂಟು ಸದಸ್ಯರು ಹೊರ ನಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !