‘ಬುದ್ಧಿ’ಯನ್ನು ಕಾಣಲು ಓಡೋಡಿ ಬಂದರು

7

‘ಬುದ್ಧಿ’ಯನ್ನು ಕಾಣಲು ಓಡೋಡಿ ಬಂದರು

Published:
Updated:

ತುಮಕೂರು: ತುಂಬಿದ ಅಣೆಕಟ್ಟೆಯ ಎಲ್ಲ ದ್ವಾರಗಳನ್ನೂ ಒಮ್ಮೆಲೇ ತೆರೆದಂತೆ, ಸಿದ್ಧಗಂಗಾ ಮಠದ ಆವರಣದಲ್ಲಿರುವ ಹಾಸ್ಟೆಲ್‌ಗಳಿಂದ ಸೋಮವಾರ ಮಧ್ಯಾಹ್ನ, ಸಾವಿರಾರು ಮಕ್ಕಳು ‘ಬುದ್ಧಿ, ಬುದ್ಧಿ’ ಎಂದು ಕಣ್ಣೀರು ಸುರಿಸುತ್ತಾ ಗೋಸಲ ಸಿದ್ಧೇಶ್ವರ ವೇದಿಕೆಯತ್ತ ಓಡೋಡಿ ಬಂದರು. ‘ನಮಗೆ ಬುದ್ಧಿ ಬೇಕು’ ಎಂದು ಗೋಳಾಡಿ ಅತ್ತರು.

‘ಅಂತಿಮದರ್ಶನಕ್ಕೆ ಬರುವವರ ಗದ್ದಲದಲ್ಲಿ ಮಕ್ಕಳು ಸಿಕ್ಕು ತೊಂದರೆ ಅನುಭವಿಸಬಾರದು’ ಎಂದು ಹಾಸ್ಟೆಲ್‌ಗಳ ದ್ವಾರಗಳನ್ನೆಲ್ಲ ಮೊದಲು ಬಂದ್‌ ಮಾಡಲಾಗಿತ್ತು. ಆದರೆ, ಹಸುವನ್ನು ಸೇರಲು ಹೊರಟ ಕರುವಿನಂತೆ ಮಕ್ಕಳೆಲ್ಲ ‘ಬುದ್ಧಿ’ಯವರನ್ನು ನೋಡಲೇಬೇಕು ಎಂದು ಪಟ್ಟು ಹಿಡಿದಾಗ ದ್ವಾರಗಳನ್ನೆಲ್ಲ ತೆರೆಯಲಾಯಿತು. ತಕ್ಷಣ ತಡೆಗೋಡೆಗಳನ್ನು ದಾಟಿಕೊಂಡು ಮಕ್ಕಳೆಲ್ಲ ವೇದಿಕೆಯತ್ತ ಧಾವಿಸಿ ಬಂದರು. ಗುಂಪಿನಲ್ಲಿದ್ದ ಅಂಧಮಕ್ಕಳಂತೂ ಮೌನವಾಗಿ ರೋದಿಸುತ್ತಿದ್ದರು.

‘ನಮ್ಮ ನಡುವೆ ಓಡಾಡುತ್ತಿದ್ದ ದೇವರನ್ನು ನಾವು ಇನ್ನುಮುಂದೆ ಎಲ್ಲಿ ಹುಡುಕಬೇಕು’ ಎಂದು ಕೊಪ್ಪಳದ ಯಲ್ಲಪ್ಪ ಕಣ್ಣೀರು ಸುರಿಸುತ್ತಲೇ ಕೇಳುತ್ತಿದ್ದ. ಐದನೇ ಕ್ಲಾಸ್‌ನಲ್ಲಿ ಓದುತ್ತಿರುವ ವಿಜಯಪುರದ ಸಿದ್ದಪ್ಪನನ್ನು ಗೆಳೆಯರು ಎಷ್ಟೇ ಒತ್ತಾಯಿಸಿದರೂ ಪ್ರಸಾದ ಸ್ವೀಕರಿಸಲು ಸಿದ್ಧನಿರಲಿಲ್ಲ. ‘ಊಟ ಮಾಡೋ’ ಎಂದು ವಾರ್ಡನ್‌ ಗದರಿದರೆ, ಆತ ಶೂನ್ಯದತ್ತ ದೃಷ್ಟಿ ಹಾಯಿಸಿದ ನೋಟ ಕರುಳು ಹಿಂಡುವಂತಿತ್ತು.

ಮಠದಲ್ಲೇ ಓದಿರುವ ಜಮಖಂಡಿಯ ನೇಮಿನಾಥ, ಸ್ವಾಮೀಜಿಯ ಲಿಂಗೈಕ್ಯರಾದ ಸುದ್ದಿ ಕೇಳಿ ಊರಿನಿಂದ ಧಾವಿಸಿ ಬಂದಿದ್ದ. ತಲೆ ಚಚ್ಚಿಕೊಂಡು ಅಳುತ್ತಿದ್ದ ಆತನನ್ನು ಸಮಾಧಾನಪಡಿಸಲು ಜತೆಗಿದ್ದವರೆಲ್ಲ ಸೋತರು.

ನಾಡಿನ ಎಲ್ಲ ಪ್ರಮುಖ ಸ್ವಾಮೀಜಿಗಳು ವೇದಿಕೆಯಲ್ಲಿ ಶ್ರೀಗಳ ಶರೀರದ ಪಕ್ಕದಲ್ಲೇ ಕುಳಿತಿದ್ದರು. ದುಃಖವನ್ನು ಮರೆಸಲು ಕಲಾವಿದರು ವಚನ ಗಾಯನ ಮಾಡಿದರು. ‘ಕಂಗಳು ತುಂಬಿದ ಬಳಿಕ ನೋಡಲಿಲ್ಲ...’ ವಚನ ಅಲೆ–ಅಲೆಯಾಗಿ ತೇಲಿ ಬರುವಾಗ ಸ್ವಾಮೀಜಿಯ ಅಂತಿಮ ಮುಖಭಾವ ನೆರೆದವರ ಚಿತ್ತಭಿತ್ತಿಯಲ್ಲಿ ಅಚ್ಚೊತ್ತುತ್ತಿತ್ತು.

‘ನನ್ನ ಮಮತೆಯ ಮಕ್ಕಳಿಗೆಲ್ಲ ವಿದ್ಯೆ ಕಲಿಯಲು ಅಗತ್ಯ ವ್ಯವಸ್ಥೆಯನ್ನು ಈಗಾಗಲೇ ಮಾಡಿದ್ದೇನಲ್ಲ’ ಎನ್ನುವ ಸಂತೃಪ್ತಿ ಅಗಲಿದ ಸ್ವಾಮೀಜಿಯ ಮುಖಭಾವದಲ್ಲಿ ತುಂಬಿತ್ತು.

ನೂರಾರು ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಬಕೆಟ್‌ಗಳಲ್ಲಿ ನೀರು ತಂದು ಸುಡು ಬಿಸಿಲಿನಲ್ಲಿ ದರ್ಶನಕ್ಕಾಗಿ ಕಾಯ್ದು ನಿಂತವರ ದಾಹವನ್ನು ತಣಿಸುತ್ತಿದ್ದರು. ಆದರೆ, ಒಡಲಲ್ಲಿ ನೋವು ತುಂಬಿಕೊಂಡಿದ್ದ ಅವರ ಮಾತುಗಳೆಲ್ಲ ಸೋತು ಹೋಗಿದ್ದವು.

ರಾಜ್ಯದ ಎಲ್ಲ ರಸ್ತೆಗಳೂ ತುಮಕೂರಿನತ್ತ ತಿರುಗಿದಂತೆ ಹೊತ್ತು ಕಳೆದಂತೆ ಜನಸಾಗರವೇ ಮಠದತ್ತ ಹರಿದುಬರಲು ಆರಂಭಿಸಿತು. ದರ್ಶನಕ್ಕೆ ನಿಂತವರ ಸರದಿ ಹನುಮನ ಬಾಲದಂತೆ ಬೆಳೆಯುತ್ತಲೇ ಇತ್ತು. ಬಾಲ್ಯದಲ್ಲಿ ಮಠದಲ್ಲೇ ವಿದ್ಯಾಭ್ಯಾಸ ಮಾಡಿ, ಬದುಕು ಕಟ್ಟಿಕೊಂಡವರು ಪತ್ನಿ–ಮಕ್ಕಳೊಂದಿಗೆ ಸ್ವಾಮೀಜಿಯ ಅಂತಿಮ ದರ್ಶನಕ್ಕೆ ಬಂದಿದ್ದರು. ಸರದಿಯಲ್ಲಿ ನಿಂತ ಅವರ ಕಣ್ಣಾಲಿಗಳು ಕೂಡ ತುಂಬಿಕೊಂಡಿದ್ದವು.

ತಡರಾತ್ರಿಯೂ ಬೆಳೆಯುತ್ತಿರುವ ಸರದಿಯನ್ನು ನೋಡುತ್ತಿರುವಾಗ ‘ತಿಳಿ ನೀಲದಲ್ಲಿ ತಾ ಲೀನವಾಗಿ ಅವ ಹೋದ ದೂರ ದೂರ’ ಎಂಬ ಹಾಡು ತೇಲಿ ಬರುತ್ತಿತ್ತು. ಪ್ರಸಾದ ನಿಲಯದ ಮುಂಭಾಗದಲ್ಲಿ ಸ್ವಾಮೀಜಿ ಕೂರುತ್ತಿದ್ದ ಪೀಠ, ಅವರು ವಾಸ್ತವ್ಯ ಹೂಡುತ್ತಿದ್ದ ಹಳೇ ಮಠದಲ್ಲಿ ಭರ್ತಿ ಮೌನ ತುಂಬಿತ್ತು.

ಮಕ್ಕಳ ಊಟದ ನಂತರ ಸುದ್ದಿ ಪ್ರಕಟ

ಶಿವಕುಮಾರ ಸ್ವಾಮೀಜಿ ಅವರು ಬೆಳಿಗ್ಗೆ 11.44ಕ್ಕೆ ನಿಧನರಾದರು. ಆದರೆ ಅಧಿಕೃತವಾಗಿ ಮಠದಿಂದ ನಿಧನದ ಸುದ್ದಿ 1.45ಕ್ಕೆ ಪ್ರಕಟವಾಯಿತು.

ಮಠದ ವಸತಿ ನಿಲಯದ ವಿದ್ಯಾರ್ಥಿಗಳ ಊಟವಾದ ನಂತರ ನಿಧನದ ಸುದ್ದಿ ಪ್ರಕಟಿಸಬೇಕು ಎನ್ನುವುದು ಮಠದ ನಿಲುವಾಗಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಪ್ರಶಂಸೆಗೆ ಪಾತ್ರವಾಗಿದೆ.

ಬರಹ ಇಷ್ಟವಾಯಿತೆ?

 • 29

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !