ಮಯಂಕ್–ಪೂಜಾರ ಮುಖಾಮುಖಿಯ ಕೌತುಕ

7

ಮಯಂಕ್–ಪೂಜಾರ ಮುಖಾಮುಖಿಯ ಕೌತುಕ

Published:
Updated:
Prajavani

ಬೆಂಗಳೂರು: ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಜಯಿಸಿ ಇತಿಹಾಸ ಬರೆಯಲು ಚೇತೇಶ್ವರ್ ಪೂಜಾರ ಮತ್ತು ಮಯಂಕ್ ಅಗರವಾಲ್ ಅವರ ಜೊತೆಯಾಟಗಳು ಪ್ರಮುಖ ಕಾರಣವಾಗಿದ್ದವು.

ಇದೀಗ ಈ ಜೋಡಿಯು ಮತ್ತೆ ಕಣಕ್ಕೆ ಇಳಿಯುತ್ತಿದೆ. ಆದರೆ ‘ಸ್ನೇಹಿತ’ರಾಗಿ ಅಲ್ಲ. ಎದುರಾಳಿಗಳಾಗಿ ಸೆಣಸಲಿದ್ದಾರೆ.  ಗುರುವಾರದಿಂದ  ಇಲ್ಲಿ ಆರಂಭವಾಗಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಇವರಿಬ್ಬರ ಮುಖಾಮುಖಿಯೇ ಹೈಲೈಟ್. ಮಂಗಳವಾರ ಮಧ್ಯಾಹ್ನ ಎರಡೂ ತಂಡಗಳು ಅಭ್ಯಾಸ ನಡೆಸುವಾಗ ಪೂಜಾರ ಮತ್ತು ಮಯಂಕ್ ಪರಸ್ಪರ ಕೈಕುಲುಕಿ ಶುಭ ಹಾರೈಸಿದರು. ನಗುತ್ತ ಮಾತನಾಡಿದರು. ಅಲ್ಲಿದ್ದ ಪತ್ರಿಕಾ ಛಾಯಾಗ್ರಾಹಕರು, ಅಭಿಮಾನಿಗಳ ಮೊಬೈಲ್ ಫೋನ್‌ಗಳು ಈ ಕ್ಷಣಗಳನ್ನು ಸೆರೆ ಹಿಡಿದವು.

ಮಯಂಕ್ ಹೋದ ತಿಂಗಳು ಮೆಲ್ಬರ್ನ್‌ನಲ್ಲಿ ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. ಹನುಮವಿಹಾರಿ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ್ದರು. ಹನುಮ (10) ಬೇಗನೇ ಔಟಾಗಿ ನಿರ್ಗಮಿಸಿದ್ದರು. ಆಗ ಕ್ರೀಸ್‌ಗೆ ಬಂದ ಪೂಜಾರ ಜೊತೆಗೆ ಮಯಂಕ್ (76 ರನ್) ಎರಡನೇ ವಿಕೆಟ್‌ಗೆ 83 ರನ್ ಗಳಿಸಿದ್ದರು. ನಂತರ ಪೂಜಾರ (106 ರನ್) ಶತಕ ಗಳಿಸಿದ್ದರು. ಕೊಹ್ಲಿ, ರೋಹಿತ್ ಅರ್ಧಶತಕಗಳನ್ನು ಬಾರಿಸಿದ್ದರು.  ಆ ಪಂದ್ಯದಲ್ಲಿ ತಂಡವು 137 ರನ್‌ಗಳಿಂದ ಗೆದ್ದಿತ್ತು. ಕೊನೆಯ ಪಂದ್ಯ ಸಿಡ್ನಿಯಲ್ಲಿ ನಡೆದಾಗಲೂ ಮಯಂಕ್ ಮತ್ತು ಪೂಜಾರ ಎರಡನೇ ವಿಕೆಟ್‌ಗೆ ಗಳಿಸಿದ್ದ 116 ರನ್‌ಗಳು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.

ದೇಶಿ ಕ್ರಿಕೆಟ್‌ನಲ್ಲಿ ಗಳಿಕೆಯಲ್ಲಿಯೂ ಇಬ್ಬರದ್ದೂ ದಾಖಲೆಯ ಓಟ. ಅದರಲ್ಲೂ ಪೂಜಾರ ಅವರು ಕರ್ನಾಟಕದ ಎದುರು ಯಾವಾಗಲೂ ಚೆನ್ನಾಗಿಯೇ ಆಡಿದ ದಾಖಲೆ ಹೊಂದಿದ್ದಾರೆ. 27 ವರ್ಷದ ಮಯಂಕ್ 48 ಪ್ರಥಮ ದರ್ಜೆ ಪಂದ್ಯಗಳಿಂದ 3794 ರನ್‌ಗಳನ್ನು ಗಳಿಸಿದ್ದಾರೆ. 304 ರನ್ ಅವರ ಶ್ರೇಷ್ಠ ಗಳಿಕೆಯಾಗಿದೆ. ಇದೇ 25ರಂದು 31ನೇ ಜನ್ಮದಿನ ಆಚರಿಸಿರುವ ಪೂಜಾರ, 185 ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯಗಳನ್ನು ಆಡಿದ್ದಾರೆ. 14552 ರನ್‌ಗಳನ್ನು ಪೇರಿಸಿದ್ದಾರೆ. 352 ರನ್ ಅವರ ಶ್ರೇಷ್ಠ ಸ್ಕೋರ್.  ಮಯಂಕ್ ಅವರಿಗಿಂತ ಪೂಜಾರಗೆ ಹೆಚ್ಚು ಅನುಭವ ಇದೆ. ಈ ಬಾರಿಯ ರಣಜಿ ಟೂರ್ನಿಯ ಎಂಟರ ಘಟ್ಟದ ಪಂದ್ಯದಲ್ಲಿ ಉತ್ತರಪ್ರದೇಶದಿಂದ ಎದುರಿನ ಕ್ವಾರ್ಟರ್‌ಫೈನಲ್‌ನಲ್ಲಿ ಆಡಿದ್ದರು. ಆದರೆ ಕರ್ನಾಟಕ ತಂಡದಲ್ಲಿ ಮಯಂಕ್ ಇರಲಿಲ್ಲ. ಹೋದ ೃತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಅವರದ್ದು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !