ಶಾಲೆಯಲ್ಲೇ ಲೈಂಗಿಕ ದೌರ್ಜನ್ಯ; ಶಿಕ್ಷಕ ಸೆರೆ

7

ಶಾಲೆಯಲ್ಲೇ ಲೈಂಗಿಕ ದೌರ್ಜನ್ಯ; ಶಿಕ್ಷಕ ಸೆರೆ

Published:
Updated:

ಬೆಂಗಳೂರು: 12 ವರ್ಷದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಪ್ರತಿಷ್ಠಿತ ಶಾಲೆಯೊಂದರ ಶಿಕ್ಷಕನನ್ನು ಹುಳಿಮಾವು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ದೌರ್ಜನ್ಯ ಸಂಬಂಧ ಸಂತ್ರಸ್ತೆಯ ತಾಯಿ ಸೋಮವಾರ ಠಾಣೆಗೆ ದೂರು ಕೊಟ್ಟಿದ್ದರು. ‘ನನ್ನ ಮಗಳು 6ನೇ ತರಗತಿ ಓದುತ್ತಿದ್ದಾಳೆ. ಬೆಳಿಗ್ಗೆ ಆಕೆಯನ್ನು ಶಾಲೆಗೆ ಬಿಟ್ಟು ಕೆಲಸಕ್ಕೆ ಹೋಗಿದ್ದೆ. ಸಂಜೆ 4.15ರ ಸುಮಾರಿಗೆ ಕರೆ ಮಾಡಿದ ನೆರೆಮನೆಯ ಮಹಿಳೆ, ‘ನಿಮ್ಮ ಮಗಳು ಎದೆ ನೋವೆಂದು ಅಳುತ್ತಿದ್ದಾಳೆ. ಆಕೆಗೆ ಸಮಾಧಾನ ಮಾಡಲು ಆಗುತ್ತಿಲ್ಲ. ಬೇಗ ಮನೆಗೆ ಬನ್ನಿ’ ಎಂದರು. ತಕ್ಷಣ ನಾನು ಹೊರಟು ಬಂದೆ’ ಎಂದು ವಿವರಿಸಿದ್ದರು.

‘ಮಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದೆ. ಸ್ವಲ್ಪ ಸಮಯದ ಬಳಿಕ ಚೇತರಿಸಿಕೊಂಡ ಆಕೆ, ‘ಬೆಳಿಗ್ಗೆ ಇಂಗ್ಲಿಷ್ ತರಗತಿ ಇತ್ತು. ಪಾಠ ಅರ್ಥವಾಗುತ್ತಿರಲಿಲ್ಲ. ವ್ಯಾಕರಣದ ಬಗ್ಗೆ ಅನುಮಾನ ಬಂದಿದ್ದರಿಂದ ಅದನ್ನು ಕೇಳಲು ಸರ್ ಬಳಿ ಹೋಗಿದ್ದೆ. ಆಗ ಅವರು ನನಗೆ ‘ಬ್ಯಾಡ್ ಟಚ್’ ಮಾಡಿದರು. ಆಗಿನಿಂದಲೂ ಎದೆ ನೋಯುತ್ತಿದೆ. ಜ.16ರಂದೂ ಇದೇ ರೀತಿ ಮಾಡಿದ್ದರು’ ಎಂದು ಅಳುತ್ತ ಹೇಳಿದಳು. ಹೀಗಾಗಿ, ಶಿಕ್ಷಕನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ತಾಯಿ ಮನವಿ ಮಾಡಿದ್ದರು.

‘ಲೈಂಗಿಕ ಕಿರುಕುಳ (354ಎ) ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆ  ಅಡಿ ಪ್ರಕರಣ ದಾಖಲಿಸಿಕೊಂಡು ಶಿಕ್ಷಕನನ್ನು ಆತನ ಮನೆಯಲ್ಲೇ ವಶಕ್ಕೆ ಪಡೆದೆವು. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮಕ್ಕಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳದ ಕಾರಣ ಶಾಲೆಯ ಆಡಳಿತ ಮಂಡಳಿ ವಿರುದ್ಧವೂ ಕ್ರಮ ಜರುಗಿಸಲಾಗುವುದು’ ಎಂದು ಹುಳಿಮಾವು ಪೊಲೀಸರು ಹೇಳಿದರು.

‘34 ವರ್ಷದ ಆ ಶಿಕ್ಷಕ ತಮಿಳುನಾಡಿನವ. ಎರಡು ವರ್ಷಗಳಿಂದ ಈ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ‘ನಾನು ವಿದ್ಯಾರ್ಥಿನಿ ಜತೆ ಕೆಟ್ಟದಾಗಿ ನಡೆದುಕೊಂಡಿಲ್ಲ’ ಎಂದು ಹೇಳಿಕೆ ಕೊಟ್ಟಿದ್ದಾನೆ. ಆತನ ಪೂರ್ವಾಪರದ ಬಗ್ಗೆ ಮಾಹಿತಿ ಕೊಡುವಂತೆ ಆಡಳಿತ ಮಂಡಳಿಗೆ ಕೇಳಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !