ದಾಖಲೆ ಸಮೇತ ಸಾಧನೆ ಮುಂದಿಡಿ: ಸಂಸದ ನಳಿನ್‌ಗೆ ಐವನ್‌ ಡಿಸೋಜ ಸವಾಲು

7

ದಾಖಲೆ ಸಮೇತ ಸಾಧನೆ ಮುಂದಿಡಿ: ಸಂಸದ ನಳಿನ್‌ಗೆ ಐವನ್‌ ಡಿಸೋಜ ಸವಾಲು

Published:
Updated:

ಮಂಗಳೂರು: ಸಂಸದ ನಳಿನ್‌ಕುಮಾರ್‌ ಕಟೀಲ್‌ ಅವರು ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ವೈಯಕ್ತಿಕ ನೆಲೆಯಲ್ಲಿ ಟೀಕೆ ಮಾಡುವುದನ್ನು ಬಿಟ್ಟು, ಎರಡು ಅವಧಿಯಲ್ಲಿ ಸಂಸದರಾಗಿ ಮಾಡಿದ ಸಾಧನೆಗಳೇನು ಎಂಬುದರ ಬಗ್ಗೆ ದಾಖಲೆ ಸಮೇತ ಚರ್ಚೆಗೆ ಬರಲಿ ಎಂದು ಕಾಂಗ್ರೆಸ್ ಮುಖಂಡ ಐವನ್‌ ಡಿಸೋಜ ಸವಾಲು ಹಾಕಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಜಯ ಬ್ಯಾಂಕ್‌ ವಿಲೀನದ ವಿರುದ್ಧ ಹೋರಾಟ ಮಾಡುತ್ತಿರುವ ನನ್ನ ವಿರುದ್ಧ ನಳಿನ್‌ ವೈಯಕ್ತಿಕವಾಗಿ ಮಾತನಾಡಿದ್ದಾರೆ. ಎರಡು ಅವಧಿಯಲ್ಲಿ ಸಂಸದರಾಗಿ ಸಾಮಾನ್ಯ ಅನುದಾನದ ಹೊರತಾಗಿ ಈ ಜಿಲ್ಲೆಗೆ ಅವರು ಏನು ತಂದಿದ್ದಾರೆ ಎಂಬುದನ್ನು ಬಹಿರಂಗವಾಗಿ ಚರ್ಚೆಗೆ ಬರಲಿ. ನಾನೂ ಬರುತ್ತೇನೆ’ ಎಂದರು.

‘ನಾನು ಹಿಂಬಾಗಿಲಿನಿಂದ ಬಂದವನು ಎಂದು ನಳಿನ್‌ ಟೀಕಿಸಿದ್ದಾರೆ. ವಿಧಾನ ಪರಿಷತ್‌ ಸದಸ್ಯನಾಗಿರುವುದಕ್ಕೆ ಹಾಗೆ ಹೇಳಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಮುಖ್ಯಮಂತ್ರಿಯಾಗಿದ್ದ ಡಿ.ವಿ.ಸದಾನಂದ ಗೌಡ ವಿಧಾನ ಪರಿಷತ್‌ ಸದಸ್ಯರಾಗಿದ್ದರು. ಈಗಿನ ಕೇಂದ್ರ ಸರ್ಕಾರದಲ್ಲಿ 18 ಮಂದಿ ಸಚಿವರು ರಾಜ್ಯಸಭೆಯ ಸದಸ್ಯರು. ಎರಡು ಬಾರಿ ಪ್ರಧಾನಿಯಾಗಿದ್ದ ಡಾ.ಮನಮೋಹನ್‌ ಸಿಂಗ್‌ ಕೂಡ ರಾಜ್ಯಸಭೆಯ ಪ್ರತಿನಿಧಿಯಾಗಿದ್ದವರು. ನಳಿನ್‌ಕುಮಾರ್‌ ಸಂವಿಧಾನವನ್ನು ಸರಿಯಾಗಿ ಓದಿಕೊಂಡು ಮಾತನಾಡುವುದು ಒಳ್ಳೆಯದು’ ಎಂದು ಹೇಳಿದರು.

ವಿಧಾನ ಪರಿಷತ್‌ಗೆ ಸಾಂವಿಧಾನಿಕ ಸ್ಥಾನಮಾನ ಇದೆ. ಶಾಸಕನಾಗಿ ಮಾಡಬೇಕಾದ ಕರ್ತವ್ಯವನ್ನು ಚ್ಯುತಿ ಬಾರದಂತೆ ಮಾಡಲಾಗಿದೆ. ವಿಧಾನ ಪರಿಷತ್‌ನ ಸದಸ್ಯರಾಗಿ ಯಾರಾದರೂ ಚಾಪೆ ಹಾಸಿಕೊಂಡು ಮಲಗಿ ಕಾಲಹರಣ ಮಾಡಿದ್ದರೆ ನಳಿನ್‌ಕುಮಾರ್‌ ಕಟೀಲ್‌ ತೋರಿಸಲಿ ಎಂದು ಆಗ್ರಹಿಸಿದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅವಕಾಶ ನೀಡಿದರೆ ನಳಿನ್‌ಕುಮಾರ್‌ ಎದುರು ಸ್ಪರ್ಧಿಸಲು ತಾವು ಸಿದ್ಧ. ಅವರನ್ನು ಸೋಲಿಸುವ ಗುರಿಯೊಂದಿಗೆ ಸ್ಪರ್ಧೆ ಮಾಡಲಾಗುವುದು. ಈ ವಿಚಾರದಲ್ಲಿ ಪಕ್ಷದ ತೀರ್ಮಾನಕ್ಕೆ ತಾವು ಬದ್ಧ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹೋರಾಟ ನಿಲ್ಲದು: ವಿಜಯ ಬ್ಯಾಂಕ್‌ ವಿಲೀನ ವಿರೋಧಿಸಿ ನಡೆಯುತ್ತಿರುವ ಹೋರಾಟ ನಿಲ್ಲದು. ಹೋರಾಟದ ಮುಂದಿನ ನಡೆ ನಿರ್ಧರಿಸಲು ಸಮಿತಿಯೊಂದನ್ನು ರಚಿಸಲಾಗಿದೆ. ನಳಿನ್‌ ಅವರಿಗೆ ಬದ್ಧತೆ ಇದ್ದರೆ, ‘ವಿಜಯ ಬ್ಯಾಂಕ್‌ ವಿಲೀನ ಮಾಡುವುದಿಲ್ಲ’ ಎಂಬ ಹೇಳಿಕೆಯನ್ನು ಕೇಂದ್ರ ಸರ್ಕಾರದಿಂದ ಕೊಡಿಸಲಿ ಎಂದು ಸವಾಲೆಸೆದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್‌ ಸದಸ್ಯ ಕೆ.ಹರೀಶ್‌ಕುಮಾರ್, ಕಾಂಗ್ರೆಸ್ ಮುಖಂಡರಾದ ಕೋಡಿಜಾಲ್ ಇಬ್ರಾಹಿಂ, ಮುಸ್ತಫಾ, ಸಿರಾಜ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !