‘ಶಿಕ್ಷಣ ಉತ್ತಮ ಪ್ರಜೆಯನ್ನಾಗಿ ರೂಪಿಸಬೇಕು’

7
ಫಿಲೋಮಿನಾ ಕಾಲೇಜಿನ ಶಿಕ್ಷಕ–ರಕ್ಷಕ ಸಂಘದ ವಾರ್ಷಿಕೋತ್ಸವ

‘ಶಿಕ್ಷಣ ಉತ್ತಮ ಪ್ರಜೆಯನ್ನಾಗಿ ರೂಪಿಸಬೇಕು’

Published:
Updated:
Prajavani

ಪುತ್ತೂರು: ಶಿಕ್ಷಣದ ಮೂಲ ಉದ್ದೇಶ ಕೇವಲ ಜ್ಞಾನ, ಕೌಶಲಗಳ ಸಂಪಾದನೆ ಮಾತ್ರ ಆದರೆ ಸಾಲದು. ಶಿಕ್ಷಣವು ವ್ಯಕ್ತಿಯ ಸರ್ವಾಂಗೀಣ ವಿಕಸನದೊಂದಿಗೆ ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯನ್ನಾಗಿ ರೂಪಿಸುವಂತಿರಬೇಕು ಎಂದು ರಾಜ್ಯ ಹೈಕೋರ್ಟ್‌ ನ್ಯಾಯಮೂರ್ತಿ ಮಹಮ್ಮದ್ ನವಾಜ್ ಹೇಳಿದರು.

ಇಲ್ಲಿನ ಸಂತ ಫಿಲೋಮಿನಾ ಕಾಲೇಜಿನ ಪ್ರಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಹಿರಿಯ ವಿದ್ಯಾರ್ಥಿ ಮತ್ತು ರಕ್ಷಕ ಶಿಕ್ಷಕ ಸಂಘದ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಮಹತ್ವಪೂರ್ಣ ಸಾಧನೆಗೆ ಶಿಸ್ತು ಮತ್ತು ಸತತ ಪರಿಶ್ರಮ ಅತಿ ಮುಖ್ಯ. ಹಿರಿಯ ವಿದ್ಯಾರ್ಥಿಗಳು ತಾವು ವಿದ್ಯಾರ್ಜನೆ ಮಾಡಿದ ಶಿಕ್ಷಣ ಸಂಸ್ಥೆಯೊಂದಿಗೆ ನಿಕಟ ಸಂಪರ್ಕವಿಟ್ಟುಕೊಳ್ಳಬೇಕು. ಜತೆಗೆ ಸಂಸ್ಥೆಯ ಸಾಧನೆಯ ಬಗ್ಗೆ ಹೆಮ್ಮೆ ಪಡುವ ಮನೋಭಾವ ಹೊಂದಿರಬೆಕು ಎಂದು ತಿಳಿಸಿದರು.

ಮಂಗಳೂರಿನ ಎಂ.ಜಗನ್ನಾಥ್ ಕಾಮತ್ ಆಂಡ್ ಕೋ ಸಂಸ್ಥೆಯ ಎಂ. ಜಗನ್ನಾಥ ಕಾಮತ್ ಮಾತನಾಡಿ, ಈ ಶಿಕ್ಷಣ ಸಂಸ್ಥೆಯು ಪ್ರತಿಭಾನ್ವಿತರನ್ನು ಸಮಾಜಕ್ಕೆ ನೀಡುವ ಮೂಲಕ ಬಹಳಷ್ಟು ಹೆಸರು ಗಳಿಸಿದೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆಯ ಕೀರ್ತಿ ಇನ್ನಷ್ಟು ಉತ್ತುಂಗಕ್ಕೇರಲಿ ಎಂದರು.

ವಿಜಯ ಬ್ಯಾಂಕ್ ಹುಬ್ಬಳ್ಳಿಯ ಪ್ರಾದೇಶಿಕ ಕಚೇರಿಯ ಉಪ ಮಹಾಪ್ರಬಂಧಕ ಬ್ಯಾಪ್ಟಿಸ್ಟ್ ಲೋಬೊ ಮಾತನಾಡಿ, ಈ ಕಾಲೇಜು ಹಲವಾರು ಕ್ರೀಡಾ ಸಾಧಕರನ್ನು ಸೃಷ್ಟಿ ಮಾಡಿರುವ ಅಪ್ರತಿಮ ಶಿಕ್ಷಣ ಸಂಸ್ಥೆಯಾಗಿದೆ ಎಂದರು.

ಮೈಸೂರಿನ ಕೈಗಾರಿಕೋದ್ಯಮಿ ಸುಬ್ರಹ್ಮಣ್ಯರೈ, ಪ್ರಸ್ತುತ ಸ್ವ ಉದ್ಯೋಗಕ್ಕೆ ವಿಪುಲ ಅವಕಾಶಗಳಿವೆ. ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಪರಿಶ್ರಮ ಸಮಯ ಪಾಲನೆ ಮತ್ತು ಭವಿಷ್ಯದ ಕುರಿತು ಸ್ಪಷ್ಟಯೋಜನೆಯನ್ನು ಅಳವಡಿಸಿಕೊಂಡಾಗ ಯಶಸ್ಸು ನಿಶ್ಚಿತ ಎಂದರು.

ಕಾಲೇಜಿನ ಸಂಚಾಲಕ ಅಲ್ಫ್ರೆಡ್‌ ಜೆ. ಪಿಂಟೊ ಮಾತನಾಡಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ್ ಲೋಬೊ, ಪದವಿಪೂರ್ವ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್‌ ರೈ, ಕಾರ್ಯದರ್ಶಿ ಪ್ರಶಾಂತ್ ಭಟ್ ಉಪಸ್ಥಿತರಿದ್ದರು.

ಹಿರಿಯ ವಿದ್ಯಾರ್ಥಿ ಪ್ರಶಾಂತ್‌ ರೈ ಮತ್ತು ತಂಡದವರು ಪ್ರಾರ್ಥಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೈರಾಜ್ ಭಂಡಾರಿ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಕೆ ಚಂದ್ರಶೇಖರ್‌ ಹಾಗೂ ರಕ್ಷಕ ಶಿಕ್ಷಕ ಸಂಘದ ಕಾರ್ಯದರ್ಶಿ ಎಡ್ವಿನ್ ಎಸ್. ಡಿಸೋಜ ವರದಿ ಮಂಡಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಆ್ಯಂಟನಿ ಒಲಿವೆರ ವಂದಿಸಿದರು. ಹಿರಿಯ ವಿದ್ಯಾರ್ಥಿನಿ ಪ್ರತಿಮಾ ಹೆಗ್ಡೆ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !