ಪ್ರಜಾಪ್ರಭುತ್ವದ ಮರು ವ್ಯಾಖ್ಯಾನ ಅಗತ್ಯ: ಎಚ್‌.ಎನ್.ನಾಗಮೋಹನದಾಸ್

7

ಪ್ರಜಾಪ್ರಭುತ್ವದ ಮರು ವ್ಯಾಖ್ಯಾನ ಅಗತ್ಯ: ಎಚ್‌.ಎನ್.ನಾಗಮೋಹನದಾಸ್

Published:
Updated:
Prajavani

ಮಂಗಳೂರು: ‘ಸಂವಿಧಾನದ ಆಶಯಗಳನ್ನು ಮುಂದಿಟ್ಟುಕೊಂಡು ಭಾರತದ ಪ್ರಜಾಪ್ರಭುತ್ವನ್ನು ಮರು ವ್ಯಾಖ್ಯಾನಿಸುವ ಅಗತ್ಯವಿದೆ. ಜನರಿಗೆ ರಾಜಕೀಯ ಪ್ರಜಾಪ್ರಭುತ್ವದ ಜೊತೆಯಲ್ಲಿ ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರುಭತ್ವವೂ ದೊರಕಬೇಕಿದೆ’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನದಾಸ್‌ ಪ್ರತಿಪಾದಿಸಿದರು.

ಸೇಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ಆಯೋಜಿಸಿರುವ ಸಂವಿಧಾನ ಸಪ್ತಾಹ–2019ರ ಭಾಗವಾಗಿ ಬುಧವಾರ ನಡೆದ ಕಾರ್ಯಕ್ತಮದಲ್ಲಿ, ‘ಭಾರತದ ಪ್ರಜಾಪ್ರಭುತ್ವದ ಸಾಧನೆಗಳು ಮತ್ತು ಮುಂದಿರುವ ಸವಾಲುಗಳು’ ಎಂಬ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಚುನಾವಣೆಗಳು ಬಂದಾಗ ಮತ ಚಲಾಯಿಸುವುದಷ್ಟೇ ಪ್ರಜಾಪ್ರಭುತ್ವ ಎಂದು ದೇಶದ ಬಹುತೇಕ ಜನರು ಭಾವಿಸಿದ್ದಾರೆ. ಅವರು ಅದಕ್ಕೆ ಸೀಮಿತವಾಗಿಯೇ ಇದ್ದಾರೆ. ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವದ ಕುರಿತು ಅವರು ಎಂದೂ ಯೋಚಿಸಿಲ್ಲ. ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವದ ಅಂತರ್‌ ಸಂಬಂಧವನ್ನು ಅರಿತುಕೊಂಡು, ಅವುಗಳನ್ನು ಅನುಷ್ಠಾನಕ್ಕೆ ತಂದರೆ ಮಾತ್ರವೇ ದೇಶ ಭವಿಷ್ಯದ ಸವಾಲುಗಳನ್ನು ಎದುರಿಸಲು ಸಾಧ್ಯ ಎಂದರು.

ಸ್ವತಂತ್ರ ಭಾರತದ ಎಲ್ಲ ಸಾಧನೆಗಳಿಗೆ ಸಂವಿಧಾನವೇ ಆಧಾರ. ಆದರೆ, ಸಾಧನೆಗಳ ಹೊರತಾಗಿಯೂ ಸಮಸ್ಯೆ ಮತ್ತು ಸವಾಲುಗಳಿವೆ. ಸಂಪತ್ತು ಕೆಲವೇ ಮಂದಿಯ ಬಳಿ ಶೇಖರಣೆಯಾಗಿರುವುದು, ಹೆಚ್ಚುತ್ತಿರುವ ಬಡತನ, ನಿರುದ್ಯೋಗ, ರೈತರ ಆತ್ಮಹತ್ಯೆಯಂತಹ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳಬೇಕಿದೆ. ಸಂವಿಧಾನದ ಮೂಲಕವೇ ಈ ಸವಾಲುಗಳಿಗೆ ಪರಿಹಾರ ಹುಡುಕುವ ಕೆಲಸ ಆಗಬೇಕು ಎಂದು ಹೇಳಿದರು.

ನಿಯಂತ್ರಣ ಅಗತ್ಯ:
ಕೆಲವು ವರ್ಷಗಳಿಂದ ಈಚೆಗೆ ಸಂವಿಧಾನೇತರ ಶಕ್ತಿಗಳ ಹಾವಳಿ ಹೆಚ್ಚುತ್ತಿದೆ. ಊಟ, ಉಡುಗೆ, ಸಂಸ್ಕೃತಿ, ಧಾರ್ಮಿಕ ವಿಚಾರಗಳಲ್ಲಿ ಈ ಶಕ್ತಿಗಳ ಹಸ್ತಕ್ಷೇಪ ಹೆಚ್ಚಾಗುತ್ತಿದೆ. ಧಾರ್ಮಿಕ ಮುಖಂಡರು, ಮಠಾಧೀಶರು ಚುನಾವಣೆಗೆ ಸ್ಪರ್ಧಿಸುವುದು, ಶಾಸಕ, ಸಂಸದ, ಮಂತ್ರಿ, ಮುಖ್ಯಮಂತ್ರಿಯಾಗಿ ತಾನು ಪ್ರತಿನಿಧಿಸುವ ಧಾರ್ಮಿಕ ಗುಂಪಿಗೆ ಸೇರಿದ ವಿಚಾರಗಳನ್ನು ಆಡಳಿತದ ನೀತಿ ನಿರೂಪಣೆಯಲ್ಲಿ ಅಳವಡಿಸುವ ಕೆಟ್ಟ ಪ್ರವೃತ್ತಿ ಕಾಣಿಸುತ್ತಿದೆ. ಇಂತಹ ಬೆಳವಣಿಗೆಗಳನ್ನು ನಿಯಂತ್ರಿಸುವ ಅಗತ್ಯವಿದೆ ಎಂದರು.

ಭ್ರಷ್ಟಾಚಾರ ಎಲ್ಲ ಕ್ಷೇತ್ರಗಳನ್ನೂ ಆವರಿಸಿಕೊಳ್ಳುತ್ತಿದೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಎಲ್ಲ ಕಡೆಗಳಲ್ಲೂ ಅದು ರಾರಾಜಿಸುತ್ತಿದೆ. ಬ್ಯಾಂಕಿಂಗ್‌ ಕ್ಷೇತ್ರ ಜನರ ನಂಬಿಕೆಯನ್ನು ಬುಡಮೇಲು ಮಾಡುವಷ್ಟರ ಮಟ್ಟಿಗೆ ಭ್ರಷ್ಟವಾಗಿದೆ. ಅಪರಾಧೀಕರಣ, ಕೋಮುವಾದ, ಮೂಲಭೂತವಾದದಂತಹ ಸಮಸ್ಯೆಯೂ ಹೆಚ್ಚುತ್ತಿದೆ. ಸಂವಿಧಾನದ ಸರಿಯಾದ ಅನುಷ್ಠಾನವೇ ಇವುಗಳಿಗೆ ಮದ್ದು ಎಂದು ಹೇಳಿದರು.

‘ಮೀಸಲಾತಿ ಸಾಮಾಜಿಕ ನ್ಯಾಯದ ಒಂದು ಭಾಗ. ಆದರೆ, ಅದೊಂದೇ ಸಾಮಾಜಿಕ ನ್ಯಾಯ ಅಲ್ಲ. ಸ್ವಾತಂತ್ರ್ಯಾ ನಂತರದ ವರ್ಷಗಳಲ್ಲಿ ಸರಿಯಾದ ಪ್ರಮಾಣದ ಉದ್ಯೋಗ ಸೃಷ್ಟಿ ಮತ್ತು ಶೈಕ್ಷಣಿಕ ಪ್ರಗತಿ ಆಗಿದ್ದರೆ ಮೀಸಲಾತಿಯ ಬೇಡಿಕೆ ತಗ್ಗುತ್ತಿತ್ತು. ಆದರೆ, ಈ ಎರಡೂ ವಿಚಾರಗಳಲ್ಲಿ ನಿರೀಕ್ಷಿತ ಸಾಧನೆ ಆಗಿಲ್ಲ. ಇದರಿಂದಾಗಿ ಮೀಸಲಾತಿಯನ್ನು ಕೊನೆಗಾಣಿಸುವುದು ನ್ಯಾಯಸಮ್ಮತ ಆಗುವುದಿಲ್ಲ’ ಎಂದು ವಿಶ್ಲೇಷಿಸಿದರು.

ಹಸ್ತಕ್ಷೇಪ ಅಲ್ಲ: ಜನರ ಧಾರ್ಮಿಕ ವಿಚಾರಗಳಲ್ಲಿ ನ್ಯಾಯಾಂಗ ಹಸ್ತಕ್ಷೇಪ ಮಾಡುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ನಾಗಮೋಹನದಾಸ್, ‘ಎಲ್ಲ ಧರ್ಮಗಳಲ್ಲೂ ನಂಬಿಕೆಗಳು ಇರುತ್ತವೆ. ಆದರೆ, ಅವು ಯಾವತ್ತೂ ಮನುಷ್ಯವಿರೋಧಿ ಆಗಿರುವುದಿಲ್ಲ. ಸತಿ ಪದ್ಧತಿ, ಅಸ್ಪೃಶ್ಯತೆ, ಮಹಿಳೆಯರಿಗೆ ದೇವಾಲಯ, ಮಸೀದಿ ಪ್ರವೇಶ ನಿಷೇಧ, ತ್ರಿವಳಿ ತಲಾಖ್‌ನಂತಹ ಮನುಷ್ಯ ವಿರೋಧಿ ಆಚರಣೆಗಳನ್ನು ನಿಷೇಧಿಸುವ ಅಧಿಕಾರವನ್ನು ನ್ಯಾಯಾಂಗಕ್ಕೆ ಸಂವಿಧಾನವೇ ನೀಡಿದೆ. ಇದು ಹಸ್ತಕ್ಷೇಪದ ವ್ಯಾಪ್ತಿಗೆ ಬರುವುದಿಲ್ಲ’ ಎಂದರು.

ಸೇಂಟ್‌ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಡಾ.ಪ್ರವೀಣ್‌ ಮಾರ್ಟಿಸ್‌ ಮತ್ತು ಕಾರ್ಯಕ್ರಮದ ಸಂಯೋಜನಾಧಿಕಾರಿ ಡಾ.ವಿಶಾಂಜ್‌ ಪಿಂಟೊ ವೇದಿಕೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !