ಗುರುವಾರ , ಏಪ್ರಿಲ್ 15, 2021
26 °C

ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸಭೆಗೆ ಆಕ್ಷೇಪ; ದೇಶದ್ರೋಹ ಪ್ರಕರಣ ದಾಖಲಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಹಿಂದೂ ಜನಜಾಗೃತಿ ಸಮಿತಿಯು ‘ಹಿಂದೂ ರಾಷ್ಟ್ರ ಸ್ಥಾಪನೆಗಾಗಿ’ ಇದೇ 27ರಂದು ಜಾಗೃತಿ ಸಭೆ ಆಯೋಜಿಸಿರುವ ಕುರಿತು ಫ್ಲೆಕ್ಸ್‌, ಬ್ಯಾನರ್‌ ಬಳಸಿ ಪ್ರಚಾರ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಸಂವಿಧಾನದ ಆಶಯಗಳ ವಿರುದ್ಧ ಸಭೆ ಆಯೋಜಿಸಿರುವ ಆರೋಪದ ಮೇಲೆ ಸಂಘಟನೆಯ ವಿರುದ್ಧ ಪ್ರಕರಣ ದಾಖಲಿಸಬೇಕೆಂಬ ಆಗ್ರಹ ಕೇಳಿಬಂದಿದೆ.

‘ಹಿಂದೂ ರಾಷ್ಟ್ರ ಜಾಗೃತಿ ಸಭೆ’ ಹೆಸರಿನಲ್ಲಿ ನಗರದ ನೆಹರೂ (ಕೇಂದ್ರ) ಮೈದಾನದಲ್ಲಿ ಭಾನುವಾರ ಸಮಾವೇಶ ಆಯೋಜಿಸಿರುವುದಾಗಿ ಹಿಂದೂ ಜನ ಜಾಗೃತಿ ಸಮಿತಿ ಮೊದಲು ಪ್ರಕಟಿಸಿತ್ತು. ಸಭೆಯ ಪ್ರಚಾರಕ್ಕಾಗಿ ನಗರದ ವಿವಿಧೆಡೆ ಬ್ಯಾನರ್‌ಗಳನ್ನು ಕಟ್ಟಲಾಗಿತ್ತು. ಫ್ಲೆಕ್ಸ್‌ಗಳನ್ನೂ ಅಳವಡಿಸಲಾಗಿತ್ತು.

ಆದರೆ, ಈಗ ಸಭೆಯ ಸ್ಥಳವನ್ನು ಬದಲಾವಣೆ ಮಾಡಲಾಗಿದೆ. ಅದೇ ದಿನ (ಭಾನುವಾರ) ಸಂಜೆ 4.30ರಿಂದ ನಗರದ ಕೊಡಿಯಾಲ್‌ಬೈಲ್‌ನಲ್ಲಿರುವ ಶಾರದಾ ವಿದ್ಯಾಲಯದ ಆವರಣದಲ್ಲಿ ‘ಹಿಂದೂ ರಾಷ್ಟ್ರ ಜಾಗೃತಿ ಸಭೆ’ ನಡೆಯಲಿದೆ ಎಂದು ಈಗ ಸಮಿತಿಯು ಹಲವೆಡೆ ಬ್ಯಾನರ್‌ ಮತ್ತು ಫ್ಲೆಕ್ಸ್‌ ಅಳವಡಿಸಿದೆ.

ಒಂದು ಧರ್ಮಕ್ಕೆ ಸೀಮಿತವಾದ ರಾಷ್ಟ್ರ ಸ್ಥಾಪನೆಯ ಉದ್ದೇಶವನ್ನು ಮುಂದಿಟ್ಟುಕೊಂಡು ಸಭೆ ನಡೆಸುತ್ತಿರುವುದಕ್ಕೆ ಹಲವರು ಆಕ್ಷೇಪ ಎತ್ತಿದ್ದಾರೆ. ಫೇಸ್‌ ಬುಕ್‌, ವಾಟ್ಸ್‌ ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧವೂ ವ್ಯಕ್ತವಾಗುತ್ತಿದೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಸಭೆ ನಡೆಸಲು ಅವಕಾಶ ನೀಡಬಾರದು ಮತ್ತು ಸಂಘಟಕರ ವಿರುದ್ಧ ಗಂಭೀರ ಸ್ವರೂಪದ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ದೇಶದ್ರೋಹದ ಪ್ರಕರಣಕ್ಕೆ ಆಗ್ರಹ
ಈ ಕುರಿತು ಪ್ರತಿಕ್ರಿಯಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ.ಮೋಹನ್‌, ‘ಭಾರತ ಒಂದು ಜಾತ್ಯತೀತ ರಾಷ್ಟ್ರ. ಸಂವಿಧಾನವೇ ಅದನ್ನು ಸ್ಪಷ್ಟಪಡಿಸಿದೆ. ಇಲ್ಲಿ ಹಿಂದೂ ಧರ್ಮದ ಹೆಸರಿನಲ್ಲಿ ರಾಷ್ಟ್ರ ಸ್ಥಾಪಿಸುವುದಕ್ಕೆ ಸಭೆ ನಡೆಸುವುದು ಸಂವಿಧಾನ ಮತ್ತು ದೇಶಕ್ಕೆ ವಿರುದ್ಧವಾದುದು. ಈ ನಡವಳಿಕೆ ದೇಶದ್ರೋಹ ಚಟುವಟಿಕೆಯ ವ್ಯಾಪ್ತಿಗೆ ಬರುತ್ತದೆ. ಸಮಾವೇಶ ಆಯೋಜಿಸಿದವರು ಮತ್ತು ಅದಕ್ಕೆ ಸ್ಥಳಾವಕಾಶ ಕೊಟ್ಟ ಸಂಸ್ಥೆಯವರು ಇಬ್ಬರ ಮೇಲೂ ದೇಶದ್ರೋಹದ ಆರೋಪದಡಿ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿದರು.

‘ಇದೊಂದು ಅಪಾಯಕಾರಿ ಬೆಳವಣಿಗೆ. ಸಂವಿಧಾನದ ಆಶಯಗಳನ್ನು ಧಿಕ್ಕರಿಸುವಂತಹ ಸಭೆಗೆ ಅವಕಾಶ ನೀಡಲೇಬಾರದು. ಇಂತಹ ಸಭೆಯ ಪ್ರಚಾರಕ್ಕೆ ಬ್ಯಾನರ್‌, ಫ್ಲೆಕ್ಸ್‌ ಅಳವಡಿಸಿರುವುದು ಖಂಡನೀಯ. ಸಭೆಯ ಆಯೋಜಕರು, ಸ್ಥಳ ನೀಡಿದವರು, ಪ್ರಚಾರ ಸಾಮಗ್ರಿ ಅಳವಡಿಸುತ್ತಿರುವವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು. ಪೊಲೀಸ್‌ ಇಲಾಖೆ ಮತ್ತು ಮಹಾನಗರ ಪಾಲಿಕೆ ತಡಮಾಡದೇ ಕ್ರಮ ಜರುಗಿಸಬೇಕು’ ಎಂದು ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್‌ ಕಾಟಿಪಳ್ಳ ಆಗ್ರಹಿಸಿದರು.

ಅನುಮತಿ ಪಡೆದಿಲ್ಲ
ಈ ವಿವಾದ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಂಗಳೂರು ನಗರ ಪೊಲೀಸ್ ಕಮಿಷನರ್‌ ಟಿ.ಆರ್.ಸುರೇಶ್‌, ‘ಹಿಂದೂ ಜನಜಾಗೃತಿ ಸಮಿತಿಯ ಸದಸ್ಯರು ನೆಹರೂ ಮೈದಾನದಲ್ಲಿ ಸಭೆ ನಡೆಸಲು ಅನುಮತಿ ಕೇಳಿದ್ದರು. ಈಗ ಅದನ್ನು ವಾಪಸ್‌ ಪಡೆದಿದ್ದಾರೆ. ಶಾರದಾ ವಿದ್ಯಾಲಯದಲ್ಲಿ ಸಭೆ ನಡೆಸುವುದಕ್ಕೆ ಇನ್ನೂ ಅನುಮತಿ ಪಡೆದಿಲ್ಲ. ಬ್ಯಾನರ್‌ ವಿಚಾರ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರುತ್ತದೆ. ಅವರಿಂದ ದೂರು ಬಂದರೆ ಕ್ರಮ ಜರುಗಿಸುತ್ತೇವೆ’ ಎಂದು ತಿಳಿಸಿದರು.

ಪೊಲೀಸರಿಗೆ ಸೇರಿದ ವಿಚಾರ
ಮಹಾನಗರ ಪಾಲಿಕೆ ಕಂದಾಯ ವಿಭಾಗದ ಉಪ ಆಯುಕ್ತರಾದ ಗಾಯತ್ರಿ ನಾಯಕ್‌ ಅವರನ್ನು ಸಂಪರ್ಕಿಸಿದಾಗ, ‘ಬ್ಯಾನರ್‌ಗೆ ಅನುಮತಿ ನೀಡುವುದಷ್ಟೇ ನಮ್ಮ ವ್ಯಾಪ್ತಿಗೆ ಸೇರಿದೆ. ಆದರೆ, ಹಿಂದೂ ಜನಜಾಗೃತಿ ಸಮಿತಿಯವರು ಅನುಮತಿ ಪಡೆಯದೇ ಬ್ಯಾನರ್‌, ಫ್ಲೆಕ್ಸ್ ಅಳವಡಿಸಿದ್ದಾರೆ. ಅದರಲ್ಲಿರುವ ವಿಷಯದ ಕುರಿತು ತಕರಾರು ಕೇಳಿಬಂದಿದೆ. ಅದು ಪೊಲೀಸರ ವ್ಯಾಪ್ತಿಗೆ ಸೇರಿದ ವಿಚಾರ. ಅವರೇ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಬೇಕು. ಪಾಲಿಕೆ ಆಡಳಿತ ಏನನ್ನೂ ಮಾಡಲಾಗದು’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು