ಭಾರತ–ನ್ಯೂಜಿಲೆಂಡ್ ಮಹಿಳಾ ಏಕದಿನ ಸರಣಿ ಇಂದಿನಿಂದ

7

ಭಾರತ–ನ್ಯೂಜಿಲೆಂಡ್ ಮಹಿಳಾ ಏಕದಿನ ಸರಣಿ ಇಂದಿನಿಂದ

Published:
Updated:
Prajavani

ನೇಪಿಯರ್‌ : ಟ್ವೆಂಟಿ–20 ವಿಶ್ವಕಪ್ ಟೂರ್ನಿ ನಂತರ ವಿವಾದಕ್ಕೆ ಒಳಗಾಗಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡ ಕಹಿ ಮರೆತು ಗೆಲುವಿನ ಸವಿಯುಣ್ಣುವ ಕನಸಿನೊಂದಿಗೆ ಗುರುವಾರ ಕಣಕ್ಕೆ ಇಳಿಯಲಿದ್ದಾರೆ.

ಇಲ್ಲಿ ನಡೆಯಲಿರುವ ನ್ಯೂಜಿಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಮಿಥಾಲಿ ರಾಜ್ ಬಳಗ ಹೊಸ ಕೋಚ್‌ ಡಬ್ಲ್ಯು.ವಿ.ರಾಮನ್ ಅವರಿಗೆ ಗೆಲುವಿನ ಉಡುಗೊರೆ ನೀಡಲು ಸಜ್ಜಾಗಿದೆ.

ಹಿಂದಿನ ಕೋಚ್‌ ರಮೇಶ್ ಪೊವಾರ್ ಮತ್ತು ಟ್ವೆಂಟಿ–20 ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರೊಂದಿಗಿನ ವಿರಸದ ಕಾರಣ ವಿಶ್ವಕಪ್ ನಂತರ ಮಿಥಾಲಿ ರಾಜ್ ಗೊಂದಲಕ್ಕೆ ಸಿಲುಕಿದ್ದರು. ನ್ಯೂಜಿಲೆಂಡ್‌ ಪ್ರವಾಸಕ್ಕೆ ತಂಡಗಳನ್ನು ಆಯ್ಕೆ ಮಾಡಿದಾಗ ಅವರ ಹೆಗಲಿಗೆ ಏಕದಿನ ತಂಡದ ಜವಾಬ್ದಾರಿಯನ್ನು ಹೊರಿಸಲಾಗಿತ್ತು.

ಮೊದಲ ಪಂದ್ಯದ ಮುನ್ನಾ ದಿನವಾದ ಬುಧವಾರ ಮಾತನಾಡಿದ ಅವರು ‘ಹಿಂದಿನ ವಿವಾದಗಳನ್ನು ಮರೆತು ಸರಣಿಯಲ್ಲಿ ಜಯ ಸಾಧಿಸುವತ್ತ ಗಮನ ನೀಡಲಾಗಿದೆ’ ಎಂದರು.

ಅಂತರರಾಷ್ಟ್ರೀಯ ಕ್ರಿಕೆಟ್ಸಮಿತಿಯ ಮಹಿಳಾ ಚಾಂಪಿಯನ್‌ಷಿಪ್‌ನ ಭಾಗವಾಗಿ ಈ ಸರಣಿ ನಡೆಯುತ್ತಿದ್ದು ಇಲ್ಲಿ ಉತ್ತಮ ಸಾಧನೆ ಮಾಡಿದ ತಂಡ ಮುಂದಿನ ವಿಶ್ವಕಪ್‌ಗೆ ಸುಲಭವಾಗಿ ಅರ್ಹತೆ ಗಳಿಸಲಿದೆ. ಸರಣಿಯನ್ನು ಗೆದ್ದು ಐಸಿಸಿ ರ‍್ಯಾಂಕಿಂಗ್‌ನಲ್ಲಿ ಬಡ್ತಿ ಸಾಧಿಸುವ ಉದ್ದೇಶವೂ ಭಾರತ ತಂಡಕ್ಕಿದೆ. ತಂಡ ಈಗ ಐದನೇ ಸ್ಥಾನದಲ್ಲಿದೆ.

ಚಾಂಪಿಯನ್‌ಷಿಪ್‌ನ ತವರಿನ ಲೆಗ್‌ನಲ್ಲಿ ನ್ಯೂಜಿಲೆಂಡ್‌ಗೆ ಭಾರತ 1–2ರಿಂದ ಮಣಿದಿತ್ತು. ಇದಕ್ಕೆ ಪ್ರತೀಕಾರ ತೀರಿಸುವ ಹಂಬಲ ಈಗ ತಂಡಕ್ಕಿದೆ. ಆಕ್ರಮಣಕಾರಿ ಆರಂಭಿಕ ಬ್ಯಾಟ್ಸ್‌ವುಮನ್‌ ಸ್ಮೃತಿ ಮಂದಾನ ಚಾಂಪಿಯನ್‌ಷಿಪ್‌ನಲ್ಲಿ ಈಗಾಗಲೇ 488 ರನ್ ಗಳಿಸಿದ್ದು ಇಲ್ಲೂ ಉತ್ತಮ ಸಾಧನೆ ಮಾಡುವ ವಿಶ್ವಾಸದಲ್ಲಿದ್ದಾರೆ. 12 ಪಾಯಿಂಟ್‌ಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನ್ಯೂಜಿಲೆಂಡ್ ಎರಡನೇ ಸ್ಥಾನದಲ್ಲಿದ್ದು ಎಂಟು ಪಾಯಿಂಟ್‌ಗಳೊಂದಿಗೆ ಭಾರತ ಐದನೇ ಸ್ಥಾನದಲ್ಲಿದೆ. ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ 16 ಪಾಯಿಂಟ್‌ಗಳೊಂದಿಗೆ ಅಗ್ರ ಸ್ಥಾನದಲ್ಲಿದೆ.

ನ್ಯೂಜಿಲೆಂಡ್‌ನ ವಿಕೆಟ್ ಕೀಪರ್ ಬ್ಯಾಟ್ಸ್‌ವುಮನ್‌ ಕ್ಯಾತಿ ಮಾರ್ಟಿನ್ ಈ ಪಂದ್ಯದಲ್ಲಿ ಆಡುತ್ತಿಲ್ಲ. ಆದರೆ ನಾಯಕಿ ಸೂಸಿ ಬೇಟ್ಸ್‌, ಸ್ಫೋಟಕ ಆಟಗಾರ್ತಿ ಸೋಫಿ ಡಿವೈನ್‌ ಮತ್ತಿತರರ ಬಲ ತಂಡಕ್ಕಿದೆ.

ಪಂದ್ಯ ಆರಂಭ: ಬೆಳಿಗ್ಗೆ 6.30 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್‌ ನೆಟ್‌ವರ್ಕ್‌/ಹಾಟ್ ಸ್ಟಾರ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !