ಮಕ್ಕಳನ್ನು ಪರಿವರ್ತಿಸಿ; ಶಿಕ್ಷಿಸಬೇಡಿ

7

ಮಕ್ಕಳನ್ನು ಪರಿವರ್ತಿಸಿ; ಶಿಕ್ಷಿಸಬೇಡಿ

Published:
Updated:
ಮಕ್ಕಳನ್ನು ಪರಿವರ್ತಿಸಿ; ಶಿಕ್ಷಿಸಬೇಡಿ

ಗುಲ್ಬರ್ಗ: ತಪ್ಪು ಮಾಡಿದ ಮಕ್ಕಳನ್ನು ಶಿಕ್ಷಿಸುವ ಬದಲಾಗಿ ಪರಿವರ್ತಿಸುವ ಕಾರ್ಯ ನಡೆಯಬೇಕು ಎಂದು ಜಿಲ್ಲಾ ಬಾಲ ನ್ಯಾಯ ಮಂಡಳಿ ಅಧ್ಯಕ್ಷ ನ್ಯಾಯಾಧೀಶ ಎಂ.ಕೆ.ಪಠಾಣ ಅಭಿಪ್ರಾಯಪಟ್ಟರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಗುಲ್ಬರ್ಗ ವಕೀಲರ ಸಂಘ ಮತ್ತು  ಜಿಲ್ಲಾ ಬಾಲ ನ್ಯಾಯಮಂಡಳಿ ಸಹಯೋಗದಲ್ಲಿ ಶುಕ್ರವಾರ ಸರ್ಕಾರಿ ಪರಿವೀಕ್ಷಣಾಲಯದಲ್ಲಿ ನಡೆದ `ಮಕ್ಕಳ ಹಕ್ಕುಗಳು-ಕಾನೂನು ಅರಿವು ಮತ್ತು ನೆರವು~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬಾಲ್ಯಾವಸ್ಥೆಯಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ನಾಗರಿಕರಾಗಲು ಕಾನೂನು ಕೂಡಾ ಅವಕಾಶ ನೀಡಿದೆ. ಈ ನಿಟ್ಟಿನಲ್ಲಿ ಪ್ರತಿ ಮಗುವಿಗೂ ಶಿಕ್ಷಣ ಸಿಗಬೇಕಾಗಿರುವುದು ಇಂದಿನ ತುರ್ತು ಎಂದ ಅವರು, ಮಕ್ಕಳ ಹಕ್ಕುಗಳ ಸಂರಕ್ಷಣೆ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವ ಕಾರ್ಯ ನಡೆಸಬೇಕು ಎಂದರು.ವಕೀಲೆ ಸುಚೇತಾ ರಂಜೋಳಕರ್ ಮಾತನಾಡಿ, ಕಾನೂನನ್ನು ಅರಿವಿಲ್ಲದೇ ಮೀರುವುದೂ ಅಪರಾಧವೇ. ಹೀಗಾಗಿ ಮಾಹಿತಿ ಪಡೆದುಕೊಳ್ಳುವುದು ಎಲ್ಲರ ಕರ್ತವ್ಯ ಎಂದರು. ಮನೋವಿಜ್ಞಾನ, ವೈದ್ಯಕೀಯದ ದಾಖಲೆಗಳ ಪ್ರಕಾರ ಪ್ರಬುದ್ಧತೆಯು 18ನೇ ವರ್ಷಕ್ಕೆ ಬರುತ್ತದೆ. ಹೀಗಾಗಿ ಗರ್ಭದಿಂದ ಹಿಡಿದು 18ವರ್ಷದ ತನಕ ಎಲ್ಲರೂ ಮಕ್ಕಳಾಗಿರುತ್ತಾರೆ. ಅಲ್ಲಿ ತನಕ ಕಡ್ಡಾಯ ಶಿಕ್ಷಣವನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.ಅನಾಥ, ಶೋಷಿತ ಮಕ್ಕಳ ನೆರವಿಗಾಗಿ ಜಿಲ್ಲೆಯಲ್ಲಿ ಅಮೂಲ್ಯ, ನಂದಗೋಕುಲ, ಮಕ್ಕಳ ಸಹಾಯವಾಣಿ ಮತ್ತಿತರ ಕೇಂದ್ರಗಳಿವೆ. ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಅನೈತಿಕ, ಅವ್ಯವಹಾರ ಮತ್ತಿತರ ಶೋಷಣೆಗಳು ನಡೆದಲ್ಲಿ ಜನತೆ ಮಾಹಿತಿ (ದೂ.1098) ನೀಡಬೇಕು ಎಂದರು.ದೇಶದ ಜನತೆಯಲ್ಲಿ ಶೇ. 44 ಮಕ್ಕಳು ಇದ್ದಾರೆ. ಅವರು ಮತದಾರರಲ್ಲ. ಆದರೂ ಅವರ ರಕ್ಷಣೆ ಮಾಡುವುದು ಸರ್ಕಾರ, ಸಮಾಜ, ಪೋಷಕರು ಹಾಗೂ ನಮ್ಮೆಲ್ಲರ ಹೊಣೆ ಎಂದರು.ಸರ್ಕಾರಿ ಹಿರಿಯ ಸಹಾಯಕ ಅಭಿಯೋಜಕ ಮದನಸೂರೆ ಮಾತನಾಡಿ ಮಕ್ಕಳ ರಕ್ಷಣೆಗಿರುವ ಕಾನೂನಿನ ಬಗ್ಗೆ ತಿಳಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಅರುಣ್‌ಕುಮಾರ್ ಬಿ.ಕಿಣ್ಣಿ, ಜಿಲ್ಲಾ ಬಾಲ ನ್ಯಾಯಮಂಡಳಿ ಸದಸ್ಯ ಟಿ. ಶಿವಾನಂದ ಅಣಜಗಿ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry