ಮಂಡ್ಯ ಜಿಲ್ಲೆಯಲ್ಲಿ ‘ಸೀತಾರಾಮ ಕಲ್ಯಾಣ’ ಉಚಿತ ಪ್ರದರ್ಶನ

7

ಮಂಡ್ಯ ಜಿಲ್ಲೆಯಲ್ಲಿ ‘ಸೀತಾರಾಮ ಕಲ್ಯಾಣ’ ಉಚಿತ ಪ್ರದರ್ಶನ

Published:
Updated:
Prajavani

ಮಂಡ್ಯ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪುತ್ರ, ಮುಂದಿನ ಲೋಕಸಭಾ ಚುನಾವಣೆಯ ಜೆಡಿಎಸ್‌ ಅಭ್ಯರ್ಥಿ ಎನ್ನಲಾಗಿರುವ ನಿಖಿಲ್‌ ಅಭಿನಯದ ‘ಸೀತಾರಾಮ ಕಲ್ಯಾಣ’ ಚಿತ್ರದ ಟಿಕೆಟ್‌ಗಳನ್ನು ಕ್ಷೇತ್ರದ ಜನರಿಗೆ ಉಚಿತವಾಗಿ ಹಂಚುವ ಹೊಸ ಜವಾಬ್ದಾರಿ ಜಿಲ್ಲೆಯ ಎಲ್ಲಾ ಜೆಡಿಎಸ್‌ ಶಾಸಕರ ಮೇಲೆ ಬಿದ್ದಿದೆ.

ಇದು ಮುಖ್ಯಮಂತ್ರಿಗಳು ಸೂಚನೆಯೂ ಆಗಿರುವ ಕಾರಣ ಎಲ್ಲಾ ಶಾಸಕರು ಕಳೆದೊಂದು ವಾರದಿಂದ ಚಾಚೂ ಟಿಕೆಟ್‌ ಹಂಚುತ್ತಿದ್ದಾರೆ. ಮುಖಂಡರು ಹಲವು ಹಳ್ಳಿಗಳಲ್ಲಿ ಮನೆಮನೆಗೆ ತೆರಳಿ ತಲೆಗೊಂದು ಟಿಕೆಟ್‌ ಹಂಚುತ್ತಿದ್ದಾರೆ. ಊರಿಗೊಂದು ಟಿಕೆಟ್‌ ಬುಕ್‌ ವಿತರಣೆ ಮಾಡಲಾಗಿದ್ದು ಜನರು ಟ್ರ್ಯಾಕ್ಟರ್‌ಗಳಲ್ಲಿ ತೆರಳಿ ಚಿತ್ರ ವೀಕ್ಷಣೆ ಮಾಡುತ್ತಿದ್ದಾರೆ. ಜೆಡಿಎಸ್‌ ಮುಖಂಡರು ಮಾತ್ರವಲ್ಲದೇ ಎಲ್ಲಾ ತಾಲ್ಲೂಕುಗಳಲ್ಲಿರುವ ನಿಖಿಲ್‌ ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಸದಸ್ಯರೂ ಕೇಳಿದವರಿಗೆಲ್ಲಾ ಉಚಿತವಾಗಿ ಟಿಕೆಟ್‌ ಹಂಚಿಕೆ ಮಾಡುತ್ತಿದ್ದಾರೆ.

ಟಿಕೆಟ್‌ ಹಂಚುವುದು ಮಾತ್ರವಲ್ಲದೇ ಇಡೀ ದಿನದ ಪ್ರದರ್ಶನವನ್ನು ಶಾಸಕರೇ ಪ್ರಾಯೋಜನೆ ಮಾಡುತ್ತಿದ್ದಾರೆ. ಶಾಸಕ ರವೀಂದ್ರ ಶ್ರೀಕಂಠಯ್ಯ ಒಂದು ದಿನ ಜನರಿಗೆ ಉಚಿತವಾಗಿ ಚಿತ್ರ ತೋರಿಸಿದ್ದಾರೆ. ಶಾಸಕ ಎಂ.ಶ್ರೀನಿವಾಸ್‌ ಅವರ ಅಳಿಯ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಎನ್‌.ಯೋಗೇಶ್‌ ಅವರೂ ಚಿತ್ರ ಪ್ರದರ್ಶನ ಆಯೋಜಿಸಿದ್ದಾರೆ. ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಆಯಾ ಶಾಸಕರ ನೇತೃತ್ವದಲ್ಲಿ ಉಚಿತವಾಗಿ ಚಿತ್ರ ತೋರಿಸಲಾಗುತ್ತಿದೆ.

‘ಫೆ.4ರಂದು ನಿಖಿಲ್‌ ಮಂಡ್ಯಕ್ಕೆ ಬರುತ್ತಿದ್ದು ಚಿತ್ರದ ಯಶಸ್ಸಿನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಅಲ್ಲಿಯವರೆಗೂ ಚಿತ್ರವನ್ನು ತುಂಬಿದ ಗೃಹಗಳಲ್ಲಿ ಪ್ರದರ್ಶನ ಮಾಡಬೇಕಾಗಿದೆ. ನಿಖಿಲ್‌ ಬಹಳ ಚೆನ್ನಾಗಿ ಅಭಿನಯಿಸಿದ್ದು ಜನಮೆಚ್ಚುಗೆ ಗಳಿಸಿದ್ದಾರೆ’ ಎಂದು ಎಚ್‌.ಎನ್‌.ಯೋಗೇಶ್‌ ತಿಳಿಸಿದರು.

ಚಿತ್ರಮಂದಿರ ಖಾಲಿ: ಜ.25ರಂದು ನಗರದ ಮೂರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ‘ಸೀತಾರಾಮ ಕಲ್ಯಾಣ’ ಒಂದೇ ವಾರಕ್ಕೆ ಎರಡು ಚಿತ್ರಮಂದಿರದಲ್ಲಿ ಖಾಲಿಯಾಗಿದೆ. ‘ಗುರುಶ್ರೀ’ಯಲ್ಲಿ ಮಾತ್ರ ಪ್ರರ್ದಶನ ನಡೆಯುತ್ತಿದೆ. ನೂರು ದಿನಗಳವರೆಗೆ ಉಳಿಸಿಕೊಂಡು ಶತದಿನೋತ್ಸವವನ್ನು ವೈಭವಯುತವಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಸಂಪೂರ್ಣ ಜವಾಬ್ದಾರಯನ್ನು ಶಾಸಕ ಎಂ.ಶ್ರೀನಿವಾಸ್‌ಗೆ ವಹಿಸಿಕೊಂಡಿದ್ದಾರೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇದು ನಿಖಲ್‌ ಕುಮಾರಸ್ವಾಮಿ ಅವರ ಶಕ್ತಿ ಪ್ರದರ್ಶನವೂ ಆಗಿದೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

‘ನಮ್ಮ ಮನೆಯಲ್ಲಿ ಯಾರಿಗೂ ಸಿನಿಮಾ ನೋಡುವ ಹವ್ಯಾಸವಿಲ್ಲ. ಆದರೂ ಐದು ಟಿಕೆಟ್‌ ಕೊಟ್ಟಿದ್ದಾರೆ. ಬೇಡ ಎಂದರೂ ಬಿಡದೆ ಇಟ್ಟು ಹೋಗಿದ್ದಾರೆ’ ಎಂದು ಇಂಡುವಾಳು ಗ್ರಾಮಸ್ಥ, ರೈತಸಂಘದ (ಮೂಲ ಸಂಘಟನೆ) ಮುಖಂಡ ಇಂಡುವಾಳು ಬಸವರಾಜು ತಿಳಿಸಿದರು.

ಇದನ್ನೂ ಓದಿ: ನಾನು ಟ್ರೆಡಿಷನಲ್ ಹುಡುಗಿ, ಇದು ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಮನದ ಮಾತು

ಬರಹ ಇಷ್ಟವಾಯಿತೆ?

 • 34

  Happy
 • 24

  Amused
 • 3

  Sad
 • 7

  Frustrated
 • 16

  Angry

Comments:

0 comments

Write the first review for this !