ವೀಣಾ ರಾಜೀನಾಮೆ: ನಿರ್ಧಾರ ಇಂದು?

7
ಬಾಗಲಕೋಟೆ ಜಿಲ್ಲಾ ಪಂಚಾಯ್ತಿಯಲ್ಲಿ ಕಾಂಗ್ರೆಸ್–ಬಿಜೆಪಿ ಮೈತ್ರಿ: ಸಾಕಷ್ಟು ಚರ್ಚೆ

ವೀಣಾ ರಾಜೀನಾಮೆ: ನಿರ್ಧಾರ ಇಂದು?

Published:
Updated:
Prajavani

ಬಾಗಲಕೋಟೆ: ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ರಾಯಚೂರು ಜಿಲ್ಲೆಯಲ್ಲಿ ಪ್ರವಾಸದಲ್ಲಿದ್ದ ಕಾರಣ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸ್ಥಾನಕ್ಕೆ ವೀಣಾ ಕಾಶಪ್ಪನವರ ರಾಜೀನಾಮೆ ಸಲ್ಲಿಸುವ ವಿಚಾರ ಒಂದು ದಿನ ಮುಂದೆ ಹೋಗಿದೆ.

ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಮುಂದಾದ ಕಾರಣ ರಾಜೀನಾಮೆ ವಿಚಾರದಲ್ಲಿ ವೀಣಾ ಕಾಶಪ್ಪನವರ ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಗುರುವಾರ ರಾತ್ರಿ ಸ್ಪಷ್ಟಪಡಿಸಿದ್ದರು. ಅದಕ್ಕೆ ಪೂರಕವಾಗಿ ವೀಣಾ ಕೂಡ ಶುಕ್ರವಾರ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಮುಂದಾಗಿದ್ದರು.

ವೀಣಾ ಕಾಶಪ್ಪನವರ ಅಧ್ಯಕ್ಷರಾಗಿ ಮೂರು ವರ್ಷ ಪೂರ್ಣಗೊಳಿಸಿದೆ. ಅವರ ರಾಜೀನಾಮೆಗೆ ಒತ್ತಾಯಿಸಿ ಪಕ್ಷದ ಕೆಲವು ಸದಸ್ಯರು ಪಟ್ಟು ಹಿಡಿದಿದ್ದಾರೆ. ಅವಿಶ್ವಾಸ ನಿರ್ಣಯ ತರುವ ಅವರ ನಿರ್ಧಾರಕ್ಕೆ ಬಿಜೆಪಿ ಸದಸ್ಯರು ಬೆಂಬಲವಾಗಿ ನಿಂತಿದ್ದಾರೆ.

ಕಾಂಗ್ರೆಸ್–ಬಿಜೆಪಿ ಮೈತ್ರಿ?: ಅಧ್ಯಕ್ಷೆ ಸ್ಥಾನಕ್ಕೆ ವೀಣಾ ಕಾಶಪ್ಪನವರ  ರಾಜೀನಾಮೆ ನೀಡಿದಲ್ಲಿ ಜಿಲ್ಲಾ ಪಂಚಾಯ್ತಿಯಲ್ಲಿ ಕಾಂಗ್ರೆಸ್–ಬಿಜೆಪಿ ಮೈತ್ರಿ ಆಗಲಿದೆ ಎಂಬ ಮಾತು ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ‍ಪೂರಕವಾಗಿ ವೀಣಾ ಬೆಂಬಲಿಗರೆಂದು ಹೇಳಿಕೊಂಡ ಕೆಲವರು ಜಿಲ್ಲಾ ಪಂಚಾಯ್ತಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿ ಎಷ್ಟು ಸೂಕ್ತ ಎಂದು ಪ್ರಶ್ನಿಸಿ ಮಾಧ್ಯಮ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ. ವೀಣಾ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಿದಲ್ಲಿ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಪಕ್ಷದ ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ.

ವೀಣಾ ವಿರುದ್ಧ ಬಂಡಾಯ ಎದ್ದಿರುವ ಕಾಂಗ್ರೆಸ್ ಸದಸ್ಯರ ನೇತೃತ್ವ ವಹಿಸಿಕೊಂಡಿರುವ ಸದಸ್ಯೆಗೆ ಅಧ್ಯಕ್ಷೆ ಸ್ಥಾನ ಬಿಟ್ಟುಕೊಟ್ಟು ಉಪಾಧ್ಯಕ್ಷ ಸ್ಥಾನದಲ್ಲಿ ಜಮಖಂಡಿ ತಾಲ್ಲೂಕಿನ ಬಿಜೆಪಿ ಸದಸ್ಯರೊಬ್ಬರನ್ನು ಆಯ್ಕೆ ಮಾಡುವ ಬಗ್ಗೆ ಮಾತುಕತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಇದನ್ನು ಮುಧೋಳ ಶಾಸಕ ಗೋವಿಂದ ಕಾರಜೋಳ ನಿರಾಕರಿಸುತ್ತಾರೆ. ಅಧ್ಯಕ್ಷ ಸ್ಥಾನದಲ್ಲಿ ಬಿಜೆಪಿಯವರು ಇರಲಿದ್ದು, ಜಿಲ್ಲಾ ಪಂಚಾಯ್ತಿಯಲ್ಲಿ ಪಕ್ಷ ಅಧಿಕಾರ ಹಿಡಿಯಲಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಬೇಕಿದ್ದರೆ ರೈತ ಸಂಘದವರು ಇಲ್ಲವೇ ಬೇರೆ ಯಾರಾದರೂ ಆಯ್ಕೆಯಾಗಲಿ ಎಂದು ಹೇಳುತ್ತಾರೆ.

’ಜಿಲ್ಲಾ ಪಂಚಾಯ್ತಿಯಲ್ಲಿ ಈಗ ಉದ್ಭವವಾಗಿರುವ ಸನ್ನಿವೇಶವನ್ನು ಪಕ್ಷ ಕಾದು ನೋಡಲಿದೆ. ಅಧಿಕಾರ ಹಿಡಿಯುವ ಯಾವುದೇ ಅವಕಾಶವನ್ನು ನಾವು ಕೈ ಚೆಲ್ಲುವುದಿಲ್ಲ’ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !