ಗುರುವಾರ , ಮಾರ್ಚ್ 4, 2021
29 °C
ವಿಶ್ವವಿವೇಕ ಪದವಿಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ

ಗುರಿ ಸಾಧನೆಗೆ ಆತ್ಮವಿಶ್ವಾಸ ಅತಿಮುಖ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಆತ್ಮವಿಶ್ವಾಸದಿಂದ ನಿರಂತರ ಪ್ರಯತ್ನ ಮಾಡಿದಲ್ಲಿ ವಿದ್ಯಾರ್ಥಿಗಳು ಖಂಡಿತ ಗುರಿ ಸಾಧನೆ ಮಾಡಬಹುದು’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಿ.ಜನಾರ್ಧನ್ ತಿಳಿಸಿದರು.

ನಗರದ ವಾಪಸಂದ್ರದಲ್ಲಿರುವ ವಿಶ್ವವಿವೇಕ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಾರ್ಷಿಕೋತ್ಸವ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಜೀವನದಲ್ಲಿ ಯಾವುದೇ ಕಾರಣಕ್ಕೂ ಎಲ್ಲವೂ ಮುಗಿಯಿತು ಎಂದು ನಿರಾಶರಾಗುವ ಅವಶ್ಯಕತೆ ಇಲ್ಲ. ಸಮಯಕ್ಕೆ ತಕ್ಕಂತೆ ಬುದ್ಧಿವಂತಿಕೆ ಉಪಯೋಗಿಸಿ, ತಾಳ್ಮೆಯಿಂದ ನಡೆದುಕೊಂಡರೆ ಎಲ್ಲಾ ಸಮಸ್ಯೆಗಳನ್ನೂ ಸುಲಭವಾಗಿ ಪರಿಹರಿಸಿಕೊಳ್ಳಬಹುದು. ಜೀವನದ ಎಲ್ಲ ಸಮಸ್ಯೆಗಳಿಗೂ ಒಂದಲ್ಲ ಒಂದು ರೀತಿಯ ಪರಿಹಾರ ಇದ್ದೇ ಇದೆ’ ಎಂದು ಹೇಳಿದರು.

‘ಕೆಲವು ವಿದ್ಯಾರ್ಥಿ, ಯುವಜನರು ಸಮಸ್ಯೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಅನಾಹುತಗಳಿಗೆ ದಾರಿಮಾಡಿಕೊಡುತ್ತಾರೆ. ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಗೆಲ್ಲಬಹುದು ಎಂಬ ಸಕಾರಾತ್ಮಕ ಮನೋಭಾವದಿಂದ ಮುಂದುವರೆಯಬೇಕು. ಯಾವುದೇ ಗುರಿ ಸಾಧನೆ ಮಾಡಬೇಕಾದರೆ ನಿರಂತರ ಪ್ರಯತ್ನ, ಕಠಿಣ ಪರಿಶ್ರಮ ಅತ್ಯಗತ್ಯವಾಗಿದೆ. ಇದನ್ನು ಅರ್ಥ ಮಾಡಿಕೊಂಡು ವಿದ್ಯಾರ್ಥಿಗಳು ಸಾಧನೆಯತ್ತ ಮುನ್ನುಗ್ಗಬೇಕು’ ಎಂದರು.

‘ಮಕ್ಕಳ ಬಗ್ಗೆ ಪೋಷಕರ ನಿರೀಕ್ಷೆಗಳು ಹತ್ತು ಹಲವು ಇದ್ದೇ ಇರುತ್ತವೆ. ಆದರೆ, ಪೋಷಕರು ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳಬೇಕು. ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇರುತ್ತದೆಯೋ ಅದೇ ಕ್ಷೇತ್ರದಲ್ಲಿ ಅವರನ್ನು ಪ್ರೋತ್ಸಾಹಿಸಬೇಕು. ಇಲ್ಲವಾದಲ್ಲಿ ಮಕ್ಕಳ ಭವಿಷ್ಯ ಡೋಲಾಯಮಾನವಾಗುವ ಸಾಧ್ಯತೆಗಳೇ ಹೆಚ್ಚಾಗಿರುತ್ತದೆ. ಪೋಷಕರು ಮಕ್ಕಳ ಮೇಲೆ ಹೆಚ್ಚಿನ ಒತ್ತಡ ಹೇರಬಾರದು’ ಎಂದು ಕಿವಿಮಾತು ಹೇಳಿದರು.

ವಿಷ್ಣುಪ್ರಿಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಚಂದ್ರಶೇಖರ್ ಮಾತನಾಡಿ, ‘ಪ್ರತಿಯೊಂದು ವೃತ್ತಿಗೂ ಅದರದ್ದೇ ಆದ ಗೌರವ ಮತ್ತು ಸ್ಥಾನಮಾನಗಳಿರುತ್ತವೆ. ಯಾವ ವೃತ್ತಿಯೂ ಶ್ರೇಷ್ಠವೂ ಅಲ್ಲ, ಕನಿಷ್ಠವೂ ಅಲ್ಲ. ವೃತ್ತಿಯ ಬಗ್ಗೆ ಕೀಳರಿಮೆ ಸಲ್ಲದು. ಯಾವುದೇ ಕೆಲಸವಾಗಲೀ ನಿಷ್ಠೆ ಮತ್ತು ಬದ್ಧತೆಯಿಂದ ಮಾಡಿದರೆ ಗುರಿಸಾಧನೆ ಸುಲಭವಾಗುತ್ತದೆ’ ಎಂದು ತಿಳಿಸಿದರು.

ಭಾರತಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ವೇಣುಗೋಪಾಲ್ ಮಾತನಾಡಿ, ‘ಇಡೀ ಜಗತ್ತಿನಲ್ಲಿ ಭಾರತೀಯ ಸಂಸ್ಕೃತಿ ವಿಭಿನ್ನ ಮತ್ತು ಶ್ರೇಷ್ಠವಾಗಿ ಗುರುತಿಸಿಕೊಂಡಿದೆ. ಸ್ವಾಮಿ ವಿವೇಕಾನಂದರೂ ಸೇರಿದಂತೆ ಅನೇಕ ಮಹನೀಯರು ದೇಶದ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವವನ್ನು ಜಗತ್ತಿಗೆ ಸಾರಿ ಹೇಳಿ ಅದರ ಘನತೆಯನ್ನು ಎತ್ತಿ ಹಿಡಿದಿದ್ದಾರೆ’ ಎಂದರು.

ಆಯುರ್ವೇದ ವೈದ್ಯ, ಯೋಗಗುರು ಶ್ರೀಜಿತ್, ವಿಶ್ವವಿವೇಕ ಕಾಲೇಜಿನ ಪೋಷಕ ಕೃಷ್ಣಪ್ಪ, ಪ್ರಾಂಶುಪಾಲೆ ಪ್ರತಿಭಾ, ಕಾರ್ಯದರ್ಶಿ ಶ್ರೀನಿವಾಸ್, ಮಂಚೇನಹಳ್ಳಿ ಕಾಲೇಜಿನ ಇತಿಹಾಸ ಉಪನ್ಯಾಸಕ ಮುರಳಿ ಬಾಬು ಹಾಗೂ ಕಾಲೇಜಿನ ಉಪನ್ಯಾಸಕರಾದ ಪ್ರವೀಣ್, ಭಾರತಿ, ಗಂಗರಾಜು, ರಮೇಶ್‍ರೆಡ್ಡಿ, ಮುನಿರಾಜು, ಇಂದ್ರಾಣಿ ಉಪಸ್ಥಿತರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.