ಸೋಮವಾರ, ಮಾರ್ಚ್ 8, 2021
31 °C
ಬಜೆಟ್‌ನಲ್ಲಿ ಮತ್ತೆ ಜಾರಿ

ಆರೋಗ್ಯ ಯೋಜನೆ ಯಶಸ್ವಿನಿಗೆ ಮರುಜೀವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಯಶಸ್ವಿನಿ ಆರೋಗ್ಯ ಯೋಜನೆ ಕೈಬಿಟ್ಟಿದ್ದರಿಂದ ರಾಜ್ಯದ ಜನರಿಗೆ ಅನನುಕೂಲವಾಗಿದೆ. ಹೀಗಾಗಿ, ಈ ಬಾರಿಯ ಬಜೆಟ್‌ನಲ್ಲಿ ಮತ್ತೆ ಜಾರಿಗೊಳಿಸಲು ನಿರ್ಧರಿಸಿದ್ದೇನೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶನಿವಾರ ತಿಳಿಸಿದರು.

ಸುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಯಶಸ್ವಿನಿ ಯೋಜನೆ ತೆಗೆದುಹಾಕಿದ್ದಕ್ಕೆ ಹಲವು ದೂರುಗಳು ಬಂದಿವೆ. ಹೀಗಾಗಿ, ಮತ್ತೆ ಜಾರಿಗೊಳಿಸಿ ಜನರ ಆರೋಗ್ಯ ರಕ್ಷಣೆಗೆ ಸರ್ಕಾರ ಮುಂದಾಗಲಿದೆ’ ಎಂದರು.

‘ಯಶಸ್ವಿನಿ ಯೋಜನೆ, ಆರೋಗ್ಯಶ್ರೀ ಕಾರ್ಯಕ್ರಮಗಳಿಗೆಂದು ರಾಜ್ಯ ಸರ್ಕಾರ ಬಹಳ ವರ್ಷಗಳ ಹಿಂದೆಯೇ ₹700 ಕೋಟಿಗೂ ಅಧಿಕ ಅನುದಾನ ಮೀಸಲಿಟ್ಟಿದೆ. ಆದರೆ, ಆಯುಷ್ಮಾನ್‌ ಭಾರತ್‌ ಹಾಗೂ ಕರ್ನಾಟಕ ಆರೋಗ್ಯ ಶ್ರೀ ಸೇರಿಸಿ ಕಾರ್ಯಕ್ರಮ ಜಾರಿಗೆ ತರಲು ಕೇಂದ್ರ ಸರ್ಕಾರ ಮನವಿ ಮಾಡಿದ್ದರಿಂದ, ಅದಕ್ಕೆ ಒಪ್ಪಿಗೆ ನೀಡಿದ್ದೆವು’ ಎಂದು ಹೇಳಿದರು.

‘ಆಯುಷ್ಮಾನ್‌ ಭಾರತ್‌ ಯೋಜನೆಗೆ ರಾಜ್ಯದಿಂದಲೇ ಹೆಚ್ಚು ಹಣ ಬಿಡುಗಡೆ ಮಾಡಲಾಗುತ್ತಿದೆ. ಇದರಲ್ಲಿ ಕೇಂದ್ರದ ಪಾಲು ಕೇವಲ ₹ 200 ಕೋಟಿ. ನಮ್ಮ ಪಾಲು ₹ 800 ಕೋಟಿ. ಆದರೆ, ಇದು ತಮ್ಮ ಕಾರ್ಯಕ್ರಮವೆಂದು ಬಿಂಬಿಸಿಕೊಳ್ಳಲು ಕೇಂದ್ರ ಹೊರಟಿದೆ. ಈ ಮೂಲಕ ರಾಜ್ಯದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ’ ಎಂದು ಅವರು ಆರೋಪಿಸಿದರು.

ದೋಖಾ ಬಜೆಟ್‌: ‘ಇದೊಂದು ದೋಖಾ ಬಜೆಟ್‌. ₹ 5 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಮಿತಿ ವಿಧಿಸುವುದರಲ್ಲಿ ಹಲವು ಲೋಪಗಳಿವೆ. ರೈತರಿಗೆ ದಿನಕ್ಕೆ ಕೇವಲ ₹ 17 ನೀಡಲು ಮುಂದಾಗಿದೆ. ಇದು ಅವರಿಗೆ ಯಾವ ರೀತಿ ನೆರವು ನೀಡುತ್ತದೆ? ಕೆಲ ಸಂಸ್ಥೆಗಳಿಗೆ ಹಣ ನೀಡಿದ್ದು ಹೊರತುಪಡಿಸಿದರೆ ರಾಜ್ಯದ ಯಾವುದೇ ಬೇಡಿಕೆಗಳು ಈಡೇರಿಲ್ಲ’ ಎಂದು ಕೇಂದ್ರ ಬಜೆಟ್ ಟೀಕಿಸಿದರು.

ಏಕೆ ಬಂಧಿಸಿಲ್ಲ?: ‘2001ರಿಂದಲೇ ರವಿ ಪೂಜಾರಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾನೆ. ಬಿಜೆಪಿಯವರು ಐದು ವರ್ಷ ರಾಜ್ಯ ಆಳಿದರು. ಆಗ ಏಕೆ ಆತನನ್ನು ಬಂಧಿಸಲಿಲ್ಲ’ ಎಂದು ಪ್ರಶ್ನಿಸಿದರು.

ರವಿ ಪೂಜಾರಿಯನ್ನು ಬಂಧಿಸಿದ್ದು ಸಮ್ಮಿಶ್ರ ಸರ್ಕಾರ ಎಂದು ಹೇಳಿಕೊಳ್ಳುವ ಬದಲು ಕಂಪ್ಲಿ ಶಾಸಕರನ್ನು ಬಂಧಿಸುವ ಪೌರುಷವನ್ನು ಕುಮಾರಸ್ವಾಮಿ ತೋರಲಿ ಎಂದು ಬಿಜೆಪಿ ಮಾಡಿರುವ ಟ್ವೀಟ್‌ಗೆ ಈ ರೀತಿ ತಿರುಗೇಟು ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು