ಭಾನುವಾರ, ಫೆಬ್ರವರಿ 28, 2021
23 °C
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌

ಸೀಟು ಹಂಚಿಕೆ: ಫೆ.10ರ ಬಳಿಕ ಕಾಂಗ್ರೆಸ್‌, ಜೆಡಿಎಸ್‌ ಸಭೆ

ಪ್ರಜಾವಾಣಿ ವಾರ್ತ Updated:

ಅಕ್ಷರ ಗಾತ್ರ : | |

ಮಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲು ಫೆಬ್ರುವರಿ 10ರ ಬಳಿಕ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರ ಸಭೆ ನಡೆಯಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಉಸ್ತುವಾರಿಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ತಿಳಿಸಿದರು.

ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುವ ಮುನ್ನ ಭಾನುವಾರ ಮಧ್ಯಾಹ್ನ ನಗರದ ಸರ್ಕ್ಯೂಟ್‌ ಹೌಸ್‌ನಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಎರಡೂ ಪಕ್ಷಗಳ ನಾಯಕರ ಸಭೆಯಲ್ಲಿ ಸೀಟು ಹಂಚಿಕೆ ಕುರಿತು ವಿಸ್ತೃತ ಚರ್ಚೆ ನಡೆಸಲಾಗುವುದು. ಆ ಬಳಿಕವೇ ಒಪ್ಪಂದವನ್ನು ಅಂತಿಮಗೊಳಿಸಲಾಗುವುದು’ ಎಂದರು.

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬೆಂಬಲಿಗರು ಸಮ್ಮಿಶ್ರ ಸರ್ಕಾರದ ವಿರುದ್ಧ ಮುನಿಸಿಕೊಂಡಿದ್ದಾರೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್‌ ಪಕ್ಷದಲ್ಲಿ ಯಾವುದೇ ಬಣಗಳಿಲ್ಲ. ಭಿನ್ನಮತವೂ ಇಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರ ನಾಯಕತ್ವದಲ್ಲಿ ಪಕ್ಷ ಒಗ್ಗಟ್ಟಾಗಿ ಮುನ್ನಡೆಯುತ್ತಿದೆ. ಸಮ್ಮಿಶ್ರ ಸರ್ಕಾರಕ್ಕೆ ನಮ್ಮ ಪಕ್ಷ ಪೂರ್ಣ ಬೆಂಬಲ ನೀಡಿದೆ. ಪಕ್ಷದ ಯಾರೇ ಒಬ್ಬರು ಸರ್ಕಾರದ ವಿರುದ್ಧ ಮಾತನಾಡಿದರೂ ಕಠಿಣ ಕ್ರಮ ಜರುಗಿಸುತ್ತೇವೆ’ ಎಂದು ಹೇಳಿದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ ಪಕ್ಷ ಸಂಪೂರ್ಣ ವಿಶ್ವಾಸ ಹೊಂದಿದೆ. ಬಡವರು ಮತ್ತು ಸಾಮಾನ್ಯ ಜನರ ಅಭಿವೃದ್ಧಿಗೆ ಈ ಸರ್ಕಾರ ಮಹತ್ತರವಾದ ಕೆಲಸ ಮಾಡುತ್ತಿದೆ. ಆದರೆ, ಅಧಿಕಾರವಿಲ್ಲದೇ ಹತಾಶರಾಗಿರುವ ಬಿಜೆಪಿ ಮುಖಂಡರು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಪತನದ ಮಾತನಾಡುತ್ತಲೇ ಇದ್ದಾರೆ. ಆದರೆ, ಏನೂ ಆಗುವುದಿಲ್ಲ ಎಂದರು.

‘ಬಿಜೆಪಿ ಆಪರೇಷನ್‌ ಕಮಲದ ಮೂಲಕ ನಮ್ಮ ಶಾಸಕರನ್ನು ಸೆಳೆಯಲು ಸಂಚು ನಡೆಸುತ್ತಿರುವುದು ಸುಳ್ಳಲ್ಲ. ಹಿಂದೆ ಬಿ.‌ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಿಂದಲೂ ಬಿಜೆಪಿ ಇದೇ ಕೆಲಸ ಮಾಡುತ್ತಿದೆ. ಆದರೆ, ನಮ್ಮ ಶಾಸಕರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಅವರು ಬಿಜೆಪಿಯ ಆಮಿಷಕ್ಕೆ ಮಣಿಯುವವರಲ್ಲ’ ಎಂದು ಹೇಳಿದರು.

ಸೋಮವಾರ ಪ್ರತಿಭಟನೆ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ‘ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಹುತಾತ್ಮರಾದ ದಿನ (ಜನವರಿ 30) ಹಿಂದೂ ಮಹಾಸಭಾ ಅವರ ಸಾವನ್ನು ಸಂಭ್ರಮಿಸಿದೆ. ಈ ಸಮಯದಲ್ಲಿ ಆ ಸಂಘಟನೆಯ ನಾಯಕಿ ಗಾಂಧೀಜಿಯವರ ಪ್ರತಿಕೃತಿಗೆ ಗುಂಡಿಕ್ಕಿ ವಿಕೃತಿ ಮೆರೆದಿದ್ದಾಳೆ. ಇದನ್ನು ಖಂಡಿಸಿ ಸೋಮವಾರ ದೇಶದಾದ್ಯಂತ ಪ್ರತಿಭಟನೆ ನಡೆಯಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕಾಂಗ್ರೆಸ್‌ ಪ್ರತಿಭಟನೆ ನಡೆಸಲಿದೆ’ ಎಂದರು.

ಹಿಂದೂ ಮಹಾಸಭಾ ಮಾಡುತ್ತಿರುವ ಕೆಲಸಗಳಿಗೆ ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲವಿದೆ. ಈ ಕಾರಣದಿಂದಾಗಿಯೇ ಆ ಸಂಘಟನೆ ಬಹಿರಂಗವಾಗಿ ದ್ವೇಷ ಬಿತ್ತುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ತಕ್ಷಣವೇ ಹಿಂದೂ ಮಹಾಸಭಾ ವಿರುದ್ಧ ತೀಕ್ಷಣವಾದ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು