ಮಂಗಳವಾರ, ಮಾರ್ಚ್ 2, 2021
30 °C

ಕ್ಯಾನ್ಸರ್ ಗೆದ್ದ ಹೊತ್ತಿನಲ್ಲಿ...

ಸಿ.ಎಸ್.ನಿರ್ವಾಣ ಸಿದ್ದಯ್ಯ Updated:

ಅಕ್ಷರ ಗಾತ್ರ : | |

Prajavani

‘ಕ್ಯಾನ್ಸರ್’ ಅಂದಾಗ ಬದುಕಿಗೆ ಪೂರ್ಣ ವಿರಾಮ ಎನ್ನುವ ಭಯ ಕಾಡುತ್ತದೆ. ಜಗತ್ತು ಬಿಟ್ಟು ಹೋಗುವ ಕ್ಷಣಕ್ಕೆ ಮನಸ್ಸು ಮುದುಡಿ ಕೂರುತ್ತದೆ. ಮೋಹ, ಮಾಯೆ, ಆಸೆ, ಕನಸುಗಳು ಬದುಕನ್ನು ಸುತ್ತುವರಿದು ‘ಹೇಗಾದರೂ ಸರಿ ಬದುಕು’ ಎನ್ನುವ ಪಿಸುಮಾತುಗಳನ್ನು ಚೆಲ್ಲುತ್ತವೆ. ಕೆಲವು ಆಸೆಗಳು ನಮ್ಮನ್ನು ಎಳೆದು ಬಾಳಿನಲ್ಲಿ ಕೂರಿಸುತ್ತದೆ, ಕಾಡಿಸುತ್ತದೆ, ಕನವರಿಸುತ್ತದೆ. ಈ ಎಲ್ಲ ಅವಸ್ಥೆಯನ್ನು ಒಂದು ಸುತ್ತು ನಾನು ಧಾಟಿ ಅನುಭವಿಸಿ ಬಂದೆ.

ತಮ್ಮ 70ನೇ ವಯಸ್ಸಿನಲ್ಲಿ ಕಾಣಿಸಿಕೊಂಡ ಸ್ತನ ಕ್ಯಾನ್ಸರ್‍ನ್ನು ದಿಟ್ಟವಾಗಿ ಎದುರಿಸಿದ ವಿದ್ಯಾರಣ್ಯಪುರದ ಬೃಂದಾ ತಮ್ಮ ಅನುಭವಗಳನ್ನು ಪ್ರಯುಕ್ತ ‘ಮೆಟ್ರೊ’ ಜೊತೆ ಹಂಚಿಕೊಂಡಿದ್ದಾರೆ

ವರ್ಷಗಳ ಹಿಂದೆ ಸ್ತನದಲ್ಲಿ ಗೋಲಿಯಾಕಾರದ ಗೆಡ್ಡೆಯೊಂದು ಕೈಗೆ ಸಿಕ್ಕ ಅನುಭವವಾಯಿತ್ತು. ಒಂದೆರೆಡು ವಾರಗಳ ತರುವಾಯ ಆ ಗೆಡ್ಡೆ ತುಸು ಹೆಚ್ಚಾಗಿರುವುದು ಕಂಡು ಬಂತು. ಯಾಕೋ ಎದೆಯಲ್ಲಿ ಅನುಮಾನದ ಸದ್ದು. ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು ಎಂದು ಆಸ್ಪತ್ರೆ ಕಡೆ ಹೆಜ್ಜೆ ಹಾಕಿದೆ.

ರಕ್ತ ಪರೀಕ್ಷೆ, ಲ್ಯಾಬ್ ಪರೀಕ್ಷೆಗಳು ಮುಗಿದು ವರದಿ ಬಂತು. ಡಾಕ್ಟರ್, ‘ನಿಮ್ಗೆ ಸ್ತನ ಕ್ಯಾನ್ಸರ್ ಇದೆ. ಕ್ಯಾನ್ಸರ್ ಗಡ್ಡೆ ಒಳಗೆ ಬಲಿತು ಬಿಟ್ಟಿದೆ. ಆಪರೇಷನ್‌ ಮಾಡಲೇಬೇಕು’ ಎಂದರು.

ತತ್ತರಿಸಿ ಹೋದೆ. ಡಾಕ್ಟರ್ ಏನೋ ಹೇಳುತ್ತಿದ್ದರೂ ಮನಸ್ಸು ಅವರತ್ತ ಇರಲಿಲ್ಲ. ಮನೆಗೆ ಬಂದ ಮೇಲೆ ಏನೋ ಕಳವಳ, ಅಸಮಾಧಾನ, ಆತಂಕ.

ಮನೆಗೆ ಬಂದ್ಮೇಲೆ ಮಗ ಪ್ರಸನ್ನ ಧೈರ್ಯ ತುಂಬಿದ. ಸೂಸೆ ಅಸರೆಯಾಗಿ ನಿಂತಳು. ಮನಸ್ಸು ಗಟ್ಟಿ ಮಾಡಿಕೊಂಡೆ. ಹೊಸ ಭರವಸೆಯನ್ನು ಒಳಗೆ ಹೊಸೆದು ಕೊಂಡೆ. ಪ್ರತಿಷ್ಠಿತ ಆಸ್ಪತ್ರೆಗೆ ನನ್ನ ಮಗ ತೋರಿಸಿದ. ಡಾಕ್ಟರ್ ಆಪರೇಷನ್‌ಗೆ ಸಿದ್ಧತೆ ಮಾಡಿಕೊಂಡರು. ಮೊದಲ ಆಪರೇಷನ್‌ ಅಗಿ ಮನೆಗೆ ಬಂದೆ. ಇಡೀ ಕುಟುಂಬದ ಹಾರೈಕೆದಿಂದ ಜೀವನದಲ್ಲಿ ನವ ಉಲ್ಲಾಸ ಪುಟಿದು ಬಂತು. ಗೆಲುವಾದೆ.

ಆದರೆ ಈ ಆನಂದ ಬಹು ಕಾಲ ಉಳಿಯಲಿಲ್ಲ. ಆಪರೇಷನ್‌ ಅಗಿ ಕೇವಲ ಆರು ತಿಂಗಳು ಕಳೆದಿದ್ದವು. ಮತ್ತೆ ಸ್ತನದಲ್ಲಿ ಗೋಲಿಯಾಕರದ ಗಡ್ಡೆ ಕಾಣಿಸಿ ಕೊಂಡಿತ್ತು. ಹೌಹಾರಿದೆ. ಡಾಕ್ಟರ್ ಬಳಿ ಓಡಿದೆ. ಪರೀಕ್ಷೆ ಮಾಡಿಸಿದ್ರೆ ಮತ್ತೆ ಅದೇ ಮಾತು. ಕ್ಯಾನ್ಸರ್ ಗಡ್ಡೆಯಾಗಿದೆ ಆಪರೇಷನ್‌ ಮಾಡಿಸಬೇಕೆಂದು ಡಾಕ್ಟರ್ ಹೇಳಿದ್ರು. ಈ ಸಾರಿ ಆಪರೇಷನ್‌ ಬೇಡವೇ ಬೇಡ ಎಂದ್ಕೊಂಡೆ. ಕೊನೆಗೆ ಮನೆಯಲ್ಲಿ ಎಲ್ಲರೂ ಸೇರಿ ಆಪರೇಷನ್‌ಗೆ ಒಪ್ಪಿಸಿದರು. ಮತ್ತೊಂದು ಕ್ಯಾನ್ಸರ್ ಆಸ್ಪತ್ರೆಯಲ್ಲಿ ಆಪರೇಷನ್‌ ಮಾಡಿಸಿಕೊಂಡೆ. ಈ ಬಾರಿ ಆಪರೇಷನ್‌ ನಂತರ ಯೋಗ, ಧ್ಯಾನ, ಭಜನೆಗಳಿಗೆ ಮನಸ್ಸನ್ನು ಒಗ್ಗಿಸಿದೆ. ಆಹಾರದ ಬಗ್ಗೆ ತುಸು ಹೆಚ್ಚಿನ ಕಾಳಜಿ ವಹಿಸಿದೆ. ಆಪರೇಷನ್‌ ಆಗಿ ಎಂಟು ತಿಂಗಳು ಕಳೆದವು. ದೇಹ ಮೊಲದನೇಯ ತರ ಜೋಶ್ ಅಗಿ ಇದೆ. ಮನಸ್ಸಿನೊಳಗಿದ್ದ ಭಯ ನನ್ನಿಂದ ಧಾಟಿ ಹೋಗಿದೆ. 

ಬದುಕಿನ ಕೊನೆಯಲ್ಲ ಆರಂಭ..
ಹಿಂದೆ ಯಾವ್ಯಾವುದಕ್ಕೋ ಖಿನ್ನಳಾಗುತ್ತ ಬದುಕೇ ಸಾಕು ಅಂದುಕೊಳ್ಳುತ್ತಿದ್ದೆ ಎಷ್ಟೊಂದು ಸಲ. ನನಗೆ ಕ್ಯಾನ್ಸರ್ ಅಂತ ತಿಳಿದಾಗಲೇ ನನ್ನಲ್ಲಿ ಬದುಕುವ ಅದಮ್ಯ ತುಡಿತ ಅಷ್ಟೊಂದು ಇದೆಯೆಂದು ನನಗೆ ಅರ್ಥವಾಗಿದ್ದು! ತಿಳಿದ ಆ ಕ್ಷಣದಲ್ಲಿ ಆಕಾಶ ತಲೆಯ ಮೇಲೆ ಕಳಚಿಬಿದ್ದಿತ್ತು. ಸ್ವಲ್ಪ ಕಠಿಣವೇ ಅನ್ನಿಸುವ ಟ್ರೀಟ್‌ಮೆಂಟ್ ಅವುಡುಗಚ್ಚಿ ಮುಗಿಸಿದೆ. ಬದುಕು ಹೆಚ್ಚು ಅರ್ಥಪೂರ್ಣ ಅನಿಸುತ್ತಿದೆ. ಇಡೀ ಆಕಾಶದುದ್ದಕ್ಕೂ ಹಾರಾಡುತ್ತಲೇ ಇರಬೇಕೆಂಬ ಹುಚ್ಚು ಜೀವನಪ್ರೀತಿ ನನ್ನೊಳಗೆ. ಕ್ಯಾನ್ಸರ್ ಬದುಕಿನ ಕೊನೆಯಲ್ಲ, ಆರಂಭ.
-ಭಾರತಿ ಬಿ.ವಿ. ಲೇಖಕಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು