ಕೃತ್ಯಕ್ಕೆ ಉತ್ತರ ಭಾರತದ ನಂಟು?

7
ಕುಳಗೇರಿ ಕ್ರಾಸ್: ವೀರಪುಲಿಕೇಶಿ ಬ್ಯಾಂಕ್ ಕಳ್ಳತನ ಪ್ರಕರಣ

ಕೃತ್ಯಕ್ಕೆ ಉತ್ತರ ಭಾರತದ ನಂಟು?

Published:
Updated:
Prajavani

ಬಾಗಲಕೋಟೆ: ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆ ಶಿರೋಳ ಹಾಗೂ ಸಾಂಗ್ಲಿಯಲ್ಲಿ ಡಿಸೆಂಬರ್ 30 ಹಾಗೂ 31ರಂದು ನಡೆದ ಎರಡು ಪ್ರತ್ಯೇಕ ಬ್ಯಾಂಕ್‌ ಕಳ್ಳತನ ಪ್ರಕರಣ ಹಾಗೂ ಕುಳಗೇರಿ ಕ್ರಾಸ್‌ನಲ್ಲಿ ಪುಲಿಕೇಶಿ ಬ್ಯಾಂಕ್‌ ಕಳ್ಳತನಕ್ಕೂ ಸಾಮ್ಯತೆ ಇರುವುದು ಜಿಲ್ಲೆಯ ಪೊಲೀಸರ ತನಿಖೆಯ ವೇಳೆ ಬಯಲಾಗಿದೆ.

ಈಗಾಗಲೇ ಶೇ 90ರಷ್ಟು ತನಿಖೆ ಪೂರ್ಣಗೊಂಡಿದೆ. ಹೊರರಾಜ್ಯದ ವೃತ್ತಿಪರ ಕಳ್ಳರ ತಂಡವೇ ಈ ಕೃತ್ಯ ಮಾಡಿದೆ ಎಂಬ ಮಹತ್ವದ ಸುಳಿವು ಆಧರಿಸಿ ಉತ್ತರ ಭಾರತಕ್ಕೆ ಬಾಗಲಕೋಟೆ ಪೊಲೀಸರ ತಂಡ ತೆರಳಿದೆ ಎಂದು ಮೂಲಗಳು ತಿಳಿಸಿವೆ.

‘ಕುಳಗೇರಿ ಕ್ರಾಸ್‌ ಪ್ರಕರಣದ ರೀತಿಯೇ ಶಿರೋಳದಲ್ಲೂ ಬ್ಯಾಂಕಿನ ಹಿಂಬದಿಯ ಕಿಟಕಿಯ ಸರಳು ಕತ್ತರಿಸಿ ಕಳ್ಳರು ಒಳಗೆ ನುಗ್ಗಿದ್ದಾರೆ. ಲಾಕರ್ ಕತ್ತರಿಸಿರುವುದು. ಬಳಕೆ ಮಾಡಿದ ನಂತರ ಸಿಲಿಂಡರ್‌ ಮೇಲಿನ ಸಂಖ್ಯೆ ಹಾಳು ಮಾಡಿರುವುದು. ಗ್ಯಾಸ್‌ ಕಟರ್‌ನಲ್ಲಿ ಲಾಕರ್ ಕತ್ತರಿಸಿರುವುದು. ಸೈರನ್‌ನ ಕೇಬಲ್ ಸ್ಥಗಿತಗೊಳಿಸಿರುವುದು. ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವ ಕಳ್ಳರ ಮೈಕಟ್ಟು ಹೀಗೆ ಎಲ್ಲಾ ಅಂಶಗಳಲ್ಲೂ ಸಾಮ್ಯತೆ ಕಂಡುಬಂದಿದೆ’ ಎನ್ನಲಾಗಿದೆ. 

ಕಳ್ಳರ ಜಾಡು ಅರಸಿ ಶಿರೋಳ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಶ್ರೀಕೃಷ್ಣ ಕಟಕದೊಂಡ ನೇತೃತ್ವದ ಮಹಾರಾಷ್ಟ್ರ ಪೊಲೀಸರ ತಂಡ ಜನವರಿ 24ರಂದು ಕುಳಗೇರಿ ಕ್ರಾಸ್‌ಗೆ ಬಂದು ವೀರಪುಲಿಕೇಶಿ ಬ್ಯಾಂಕ್‌ನ ಸಿಸಿ ಟಿವಿ ಕ್ಯಾಮೆರಾದ ದೃಶ್ಯಾವಳಿ ವೀಕ್ಷಿಸಿ ಮಾಹಿತಿ ಸಂಗ್ರಹಿಸಿಕೊಂಡು ತೆರಳಿದೆ ಎಂದು ಗೊತ್ತಾಗಿದೆ.

‘ಬ್ಯಾಂಕ್‌ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿರುವ ಈ ತಂಡ, ಭದ್ರತೆಯ ಲೋಪ ಇರುವ, ಕಾವಲುಗಾರರು ಇಲ್ಲದ ಹಾಗೂ ಜನವಸತಿಯಿಂದ ದೂರ ಇರುವ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳನ್ನೇ ಕಳ್ಳತನಕ್ಕೆ ಗುರಿಯಾಗಿಸಿಕೊಳ್ಳುತ್ತದೆ. ಅದಕ್ಕೂ ಮುನ್ನ ಒಂದು ವಾರ ಕಾಲ ಆ ಪ್ರದೇಶದಲ್ಲಿ  ಹಣ್ಣು ಮಾರಾಟ ಅಥವಾ ಬೇರೆ ಬೇರೆ ಕಾರಣಗಳ ನೆಪದಲ್ಲಿ ಅಡ್ಡಾಡಿ ಅಲ್ಲಿನ ವಾತಾವರಣ ಅವಲೋಕಿಸುತ್ತದೆ. ನಂತರ ಸೂಕ್ತ ಯೋಜನೆ ರೂಪಿಸಿ ಕೃತ್ಯ ನಡೆಸುತ್ತದೆ’ ಎಂದು ಪೊಲೀಸರು ಹೇಳುತ್ತಾರೆ.

ಪ್ರಕರಣದ ಹಿನ್ನೆಲೆಯಲ್ಲಿ ಕುಳಗೇರಿ ಕ್ರಾಸ್‌ನಲ್ಲಿ ಚಹಾ ಮಾರುವ ರಾಜಸ್ತಾನ ಮೂಲದ ವ್ಯಕ್ತಿಯೊಬ್ಬರನ್ನು ಎರಡು ದಿನಗಳ ಕಾಲ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !