ಕೂಲಿಕಾರನ ಮಗನಿಗೊಲಿದ ಸಿಎ!

7
ದೇವನಾಳದ ಭರಮಪ್ಪ ಬೆಣ್ಣೂರ ಈಗ ಚಾರ್ಟೆಡ್ ಅಕೌಂಟೆಂಟ್

ಕೂಲಿಕಾರನ ಮಗನಿಗೊಲಿದ ಸಿಎ!

Published:
Updated:
Prajavani

ಬಾಗಲಕೋಟೆ: ಇಲ್ಲಿನ ವಿದ್ಯಾ ಪ್ರಸಾರಕ ಮಂಡಳದ ವಾಣಿಜ್ಯ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಭರಮಪ್ಪ ಬೆಣ್ಣೂರ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅದೂ ಮೊದಲ ಪ್ರಯತ್ನದಲ್ಲಿಯೇ ಸಾಧ್ಯವಾಗಿದೆ. ಪ್ರಾಮಾಣಿಕ ಪ್ರಯತ್ನ ಹಾಗೂ ಪರಿಶ್ರಮ ಅವರನ್ನು ಗುರಿ ಮುಟ್ಟಿಸಿದೆ.

ತಾಲ್ಲೂಕಿನ ದೇವನಾಳ ಭರಮಪ್ಪನ ಹುಟ್ಟೂರು. ಪಾಲಕರು ಅನಕ್ಷರಸ್ಥರು. ದೇವನಾಳದಲ್ಲಿ ಪ್ರಾಥಮಿಕ, ತುಳಸಿಗೇರಿಯಲ್ಲಿ ಹೈಸ್ಕೂಲ್ ಓದಿ, ಶಂಕ್ರಪ್ಪ ಸಕ್ರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ನಂತರ ಎಸ್.ಆರ್.ನರಸಾಪುರ ಕಲಾ ಹಾಗೂ ಎಂ.ಬಿ.ಶಿರೂರ ವಾಣಿಜ್ಯ ಕಾಲೇಜಿನಲ್ಲಿ 2013ರಲ್ಲಿ ಬಿಕಾಂ ಪದವಿ ಪಡೆದಿದ್ದಾರೆ. ಭರಮಪ್ಪ ತನ್ನ ಇಡೀ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ಪೂರೈಸಿದ್ದು, ಗುರಿ ಸಾಧನೆಗೆ 'ಮಾಧ್ಯಮ' ಅಡ್ಡಿಯಾಗದು ಎನ್ನುತ್ತಾರೆ.

ಕೂಲಿ ಕೆಲಸ : ಗೇಣು ಹೊಲದಲ್ಲಿ ಬದುಕು ಸಾಗುತ್ತಿರಲಿಲ್ಲ ಹಾಗಾಗಿ ಐದನೇ ತರಗತಿಯಿಂದ ಪಿಯುಸಿವರೆಗೂ ಬೇರೆಯವರ ಹೊಲದಲ್ಲಿ ಅಪ್ಪ ಬೀರಪ್ಪನೊಂದಿಗೆ ಭರಮಣ್ಣ ಕೂಲಿ ಕೆಲಸ ಮಾಡಿದ್ದಾರೆ.

ಹಿರಿಯ ವಿದ್ಯಾರ್ಥಿ ಪ್ರೇರಣೆ: ‘ಬಿಕಾಂ ಓದುವಾಗ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಒಲವಿತ್ತು. ಅದಕ್ಕಾಗಿ ತಯಾರಿ ಕೂಡ ನಡೆಸಿದ್ದೆನು. ಆದರೆ ಸಿಎ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಸಿಎ ಹಾಗೂ ಕಂಪನಿ ಸೆಕ್ರೆಟರಿ ಪರೀಕ್ಷೆ ಪಾಸು ಮಾಡಿದ್ದ ಪದವಿ ಕಾಲೇಜಿನ ಹಳೆಯ ವಿದ್ಯಾರ್ಥಿ ಸಾಹಿಲ್ ಮೇಲಿನಮನಿ ಅದೊಮ್ಮೆ ಕಾಲೇಜಿಗೆ ಬಂದಿದ್ದರು. ಅವರು ಪರೀಕ್ಷೆ ಎದುರಿಸುವ ಬಗ್ಗೆ ವಿವರಣೆ ನೀಡಿದ್ದೇ ನನಗೆ ಪ್ರೇರಣೆ ಆಯಿತು’ ಎಂದು ಭರಮಪ್ಪ ಹೇಳುತ್ತಾರೆ.

ಸೋಲು ಕಲಿಸಿದ ಪಾಠ:

‘ದಕ್ಷಿಣ ಭಾರತ ಪ್ರಾದೇಶಿಕ ಮಂಡಳಿಯ ಹುಬ್ಬಳ್ಳಿ ಶಾಖೆಯಲ್ಲಿ ಸಿಎ ಇಂಟರ್‌ಮೀಡಿಯೆಟ್ ಹಾಗೂ ಯಳಮಲಿ ಅಸೋಸಿಯೇಟರ್ಸ್‌ನಲ್ಲಿ ಕಲಿಯುತ್ತಿದೆ. ನನ್ನ ಸಾಮರ್ಥ್ಯ ಬಗ್ಗೆ ನಾನೇ ಕಡಿಮೆ ಅಂದಾಜು ಮಾಡಿಕೊಂಡ ತಪ್ಪಿಗೆ ಎರಡನೇ ಪ್ರಯತ್ನವೂ ಪರೀಕ್ಷೆಯಲ್ಲಿ ಫಲ ನೀಡಲಿಲ್ಲ. ವೈಫಲ್ಯ ನನಗೆ ಜೀವನದಲ್ಲಿ ಪಾಠ ಕಲಿಸಿತು. ಧನಾತ್ಮಕ ಚಿಂತನೆ ನನ್ನ ಉಸಿರಾಯಿತು. ಸಿಎ ಯಶಸ್ವಿಯಾಗಿ ಪೂರೈಸಲು ಅದು ದಾರಿ ಮಾಡಿಕೊಟ್ಟಿತು’ ಎನ್ನುತ್ತಾರೆ.

‘ಸಿಎ ಅಂತಿಮ ಪರೀಕ್ಷೆಗೆ ಪುಣೆ ಆಯ್ಕೆ ಮಾಡಿಕೊಂಡಾಗ ಹಿಂದಿ ಭಾಷೆ ಬಾರದಿರುವುದು ಸಮಸ್ಯೆಯಾಗಿತ್ತು. ಅಲ್ಲಿ ತರಬೇತಿ ಕೇವಲ ಹಿಂದಿ ಭಾಷೆಯಲ್ಲಿ ಇತ್ತು. ವಿಶೇಷ ಪ್ರಯತ್ನದಿಂದ ಆ ಸವಾಲನ್ನೂ ಸಮರ್ಥವಾಗಿ ನಿಭಾಯಿಸಿದ್ದಾಗಿ’ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !