ಬಿಜೆಪಿ ಸೇರಲು ಮುಂಬೈಗೆ ಹೋಗಿದ್ದೆ ಎನ್ನುವುದು ಸುಳ್ಳು: ಶಾಸಕ ಸುಧಾಕರ್

7
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿದ ಆಡಿಯೊದಲ್ಲಿನ ಸಂಭಾಷಣೆ ಕುರಿತು ಶಾಸಕ ಸ್ಪಷ್ಟನೆ

ಬಿಜೆಪಿ ಸೇರಲು ಮುಂಬೈಗೆ ಹೋಗಿದ್ದೆ ಎನ್ನುವುದು ಸುಳ್ಳು: ಶಾಸಕ ಸುಧಾಕರ್

Published:
Updated:
Prajavani

ಚಿಕ್ಕಬಳ್ಳಾಪುರ: ‘ನಾನು ಬಿಜೆಪಿ ಸೇರುವುದಕ್ಕಾಗಿಯೇ ಮುಂಬೈಗೆ ಹೋಗಿದ್ದೆ ಎಂದು ಹರಿದಾಡುತ್ತಿರುವ ವದಂತಿಗಳು ಶುದ್ಧ ಸುಳ್ಳು. ಬಿಜೆಪಿಯ ಯಾವ ಮುಖಂಡರು ನನ್ನನ್ನು ಸಂಪರ್ಕಿಸಿಲ್ಲ. ನಾನು ದೆಹಲಿಗೆ ಹೋಗಿದ್ದೆ. ಬೆಳಿಗ್ಗೆ ಅಲ್ಲಿಂದ ವಾಪಾಸಾಗಿರುವೆ’ ಎಂದು ಶಾಸಕ ಡಾ.ಕೆ.ಸುಧಾಕರ್‌ ಹೇಳಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶುಕ್ರವಾರ ಬಜೆಟ್‌ ಮಂಡನೆಗೂ ಮುನ್ನ ತುರ್ತು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಆಡಿಯೊದಲ್ಲಿ ಬಿಜೆಪಿ ಮುಖಂಡ ಬಿ.ಎಸ್‌.ಯಡಿಯೂರಪ್ಪ ಅವರನ್ನೇ ಹೋಲುವ ಧ್ವನಿ, ‘ಮುಂಬೈನಲ್ಲಿ ಡಾಕ್ಟರ್‌ ಸುಧಾಕರ್‌ ಸೇರಿದಂತೆ 11 ಶಾಸಕರು ಇದ್ದಾರೆ’ ಎಂಬ ಮಾತುಗಳು ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದವು.

ಈ ಬಗ್ಗೆ ಸುಧಾಕರ್‌ ಅವರನ್ನು ಪ್ರಶ್ನಿಸಿದರೆ, ‘ದೇಶದಲ್ಲಿ ಸಾವಿರಾರು ಮಿಮಿಕ್ರಿ ಕಲಾವಿದರಿದ್ದಾರೆ. ಇದೊಂದು ಷಡ್ಯಂತ್ರ. ಆ ಆಡಿಯೊ ಅಸಲಿ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಒಬ್ಬ ಮಾಜಿ ಮುಖ್ಯಮಂತ್ರಿ ಆ ಮಟ್ಟಿಗೆ ಹೋಗಿ ಮಾತನಾಡುತ್ತಾರೆ ಎಂದು ನನಗೆ ಅನಿಸುವುದಿಲ್ಲ’ ಎಂದು ತಿಳಿಸಿದರು.

‘ಬಿಜೆಪಿಯವರು 104 ಸ್ಥಾನಗಳನ್ನು ಗೆದ್ದವರು. 37 ಸ್ಥಾನ ಪಡೆದ ಜೆಡಿಎಸ್‌ನವರು, ಕಾಂಗ್ರೆಸ್‌ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿರುವುದು ಸಹಜವಾಗಿ ಬಹುತೇಕರಿಗೆ ಅರಗಿಸಿಕೊಳ್ಳಲು ಆಗುವುದಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಅಸಂತೃಪ್ತಿ ಇದೆ ಎನ್ನುವುದು ಸುಳ್ಳಲ್ಲ. ಅತೃಪ್ತ ಶಾಸಕರು ಅವಕಾಶ ಸಿಕ್ಕರೆ ಪಕ್ಷದಿಂದ ಪಕ್ಷಕ್ಕೆ ಹೋಗುವುದು ಇವತ್ತಿನ ರಾಜಕಾರಣದಲ್ಲಿ ಸರ್ವೇ ಸಾಮಾನ್ಯ’ ಎಂದರು.

‘ನಮ್ಮ ರಾಜಕೀಯ ಇತಿಹಾಸ ಗಮನಿಸಿದರೆ ಯಾವುದೇ ಸಮ್ಮಿಶ್ರ ಸರ್ಕಾರದ ಸ್ಥಿರತೆ ಬಗ್ಗೆ ಯಾರೇ ಆಗಲಿ ಖಚಿತವಾಗಿ ಹೇಳುವುದು ಕಷ್ಟ. ಯಾವ ಸಂದರ್ಭದಲ್ಲಿ ಏನಾಗುತ್ತದೋ ಗೊತ್ತಾಗುವುದಿಲ್ಲ. ರಾಜ್ಯ ಸರ್ಕಾರದ ಮಟ್ಟದಲ್ಲಿ ಸಮ್ಮಿಶ್ರ ಸರ್ಕಾರ ಸ್ಥಿರವಾಗಿರುವುದು ಕಷ್ಟ. ಭಿನ್ನಾಭಿಪ್ರಾಯಗಳು, ಪಕ್ಷಗಳ ನಡುವಿನ ವ್ಯತ್ಯಾಸಗಳು ಸರ್ಕಾರದ ಮೇಲೆ ಖಂಡಿತ ಪರಿಣಾಮ ಬೀರುತ್ತವೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 16

  Happy
 • 3

  Amused
 • 0

  Sad
 • 0

  Frustrated
 • 7

  Angry

Comments:

0 comments

Write the first review for this !