ಮನಮೋಹನಸಿಂಗ್‌ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದ ರಾಹುಲ್‌: ಎಸ್‌.ಎಂ.ಕೃಷ್ಣ

7

ಮನಮೋಹನಸಿಂಗ್‌ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದ ರಾಹುಲ್‌: ಎಸ್‌.ಎಂ.ಕೃಷ್ಣ

Published:
Updated:

ಮಂಡ್ಯ: ‘ಡಾ.ಮನಮೋಹನಸಿಂಗ್‌ ಪ್ರಧಾನಮಂತ್ರಿ ಆಗಿದ್ದಾಗ ರಾಹುಲ್‌ಗಾಂಧಿ ಕಾಂಗ್ರೆಸ್‌ನಲ್ಲಿ ಏನೂ ಆಗಿರಲಿಲ್ಲ. ಆದರೂ ಅವರು ಎಲ್ಲೋ ಕುಳಿತು ಪ್ರಧಾನಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು’ ಎಂದು ಬಿಜೆಪಿ ಮುಖಂಡ ಎಸ್‌.ಎಂ.ಕೃಷ್ಣ ವಾಗ್ದಾಳಿ ನಡೆಸಿದರು.

ನಗರದ ಬಿಜಿಎಸ್‌ ಸಮುದಾಯ ಭವನದಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘2009ರಿಂದ 2014ರವರೆಗೆ ಇದ್ದ ಯುಪಿಎ ಸರ್ಕಾರದಲ್ಲಿ ನಾನು ಅಧಿಕಾರದಲ್ಲಿ ಇದ್ದೆ. ಮನಮೋಹನಸಿಂಗ್‌ ಅವರಿಗೆ ಆಡಳಿತದಲ್ಲಿ ಹಿಡಿತ ಇರಲಿಲ್ಲ. ಅವರ ಗಮನಕ್ಕೆ ಬಾರದಂತೆ ಹಲವು ವಿಚಾರಗಳು ನಡೆಯುತ್ತಿದ್ದವು. ಪ್ರಧಾನಿ ಜಾರಿಗೊಳಿಸಲು ಉದ್ದೇಶಿಸಿದ್ದ ವಿಧೇಯಕವನ್ನು ರಾಹುಲ್‌ಗಾಂಧಿ ಹರಿದು ಹಾಕಿದ್ದರು. ಆ ನಂತರ ಸಾಲು ಸಾಲು ಹಗರಣಗಳು ನಡೆದವು. ಕಾಮನ್‌ವೆಲ್ತ್‌, 2ಜಿ ಸ್ಪೆಕ್ಟ್ರಂ, ಕಲ್ಲಿದ್ದಲು ಹಗರಣಗಳು ನಡೆದವು. 80 ವರ್ಷ ವಯಸ್ಸಾದವರು ಮಂತ್ರಿಯಾಗಬಾರದು ಎಂಬ ಫರ್ಮಾನು ಹೊರಡಿಸಿದ ಕಾರಣ ನಾನು ರಾಜೀನಾಮೆ ಕೊಟ್ಟು ಹೊರಬಂದೆ’ ಎಂದು ಹೇಳಿದರು.

‘2014ರಲ್ಲಿ ದೇಶದಲ್ಲಿ ಕ್ರಾಂತಿ ನಡೆದ ಪರಿಣಾಮವಾಗಿ ನರೇಂದ್ರ ಮೋದಿ ಅವರು ಪ್ರಧಾನಿಯಾದರು. 5 ವರ್ಷದಲ್ಲಿ ಭ್ರಷ್ಟಾಚಾರಮುಕ್ತ ಆಡಳಿತ ನೀಡಿದ್ದಾರೆ. ಮೋದಿ ಅವರು ಕೊಟ್ಟ ಕಾರ್ಯಕ್ರಮಗಳ ಬಗ್ಗೆ ಮುಕ್ತ ಚರ್ಚೆ ನಡೆಯಬೇಕು. ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಮಂತ್ರಿಯಾಗಿದ್ದರು. ನಾನು ಕಾಂಗ್ರೆಸ್‌ ಮುಖ್ಯಮಂತ್ರಿಯಾಗಿದ್ದರೂ ಎಲ್ಲಾ ವಿಚಾರಗಳಲ್ಲಿ ಸಮಾನ ದೃಷ್ಟಿಯಿಂದ ನೋಡುತ್ತಿದ್ದರು. ಅವರು ದೇಶಕ್ಕೆ ಧರ್ಮರಾಯನ ಆಡಳಿತ ನೀಡಿದ್ದಾರೆ. ಅಂತಹ ನಾಯಕ ನಮ್ಮ ದೇಶಕ್ಕೆ ಸಿಕ್ಕಿದ್ದು ನಮ್ಮೆಲ್ಲರ ಅದೃಷ್ಟ’ ಎಂದರು.

‘ಮೋದಿ ಅವರನ್ನು ಸೋಲಿಸಲು 25ಕ್ಕೂ ಹೆಚ್ಚು ಪಕ್ಷಗಳು ಒಂದಾಗಿವೆ. ನಾಯಕ ಯಾರು ಎಂಬ ಬಗ್ಗೆ ಯಾರಿಗೂ ಗೊತ್ತಿಲ್ಲ. ಚುನಾವಣೆ ಬಳಿಕ ಹೇಳುತ್ತೇವೆ ಎನ್ನುತ್ತಿದ್ದಾರೆ. 1996ರ ಪರಿಸ್ಥಿತಿಯನ್ನು ಕಂಡಿದ್ದೇವೆ. ಕನ್ನಡಿಗ ಎಚ್‌.ಡಿ.ದೇವೇಗೌಡರು ಪ್ರಧಾನಿಯಾಗಿದ್ದು ನಮ್ಮೆಲ್ಲರ ಹೆಮ್ಮೆ. ಆದರೆ ಎಷ್ಟು ದಿನ ಅಧಿಕಾರದಲ್ಲಿ ಇದ್ದರು? 10 ತಿಂಗಳು ಮಾತ್ರ. ನಂತರ ಐ.ಕೆ.ಗುಜ್ರಾಲ್‌ ಪ್ರಧಾನಿಯಾದರು. ಇದು ಇತಿಹಾಸ, ಇಂತಹ ಅಸ್ಥಿರ ಸರ್ಕಾರ ಬೇಕೋ, ಐದು ವರ್ಷ ಸುಭ್ರದ್ರವಾಗಿರುವ ಸರ್ಕಾರ ಬೇಕೋ ಎಂದುದನ್ನು ತೀರ್ಮಾನಿಸಬೇಕು’ ಎಂದು ಹೇಳಿದರು.

‘ಮುಂಬರುವ ಲೋಕಸಭಾ ಚುನಾವಣೆ ದೇಶದ ಹಿತದೃಷ್ಟಿಯಿಂದ ಮಹತ್ವ ಸ್ಥಾನ ಪಡೆದಿದೆ. ಕಳೆದ 60 ವರ್ಷಗಳಲ್ಲಿ ನಡೆದ ಚುನಾವಣೆಗಿಂತಲೂ ಮುಂದಿನ ಚುನಾವಣೆ ಅತೀ ಮುಖ್ಯವಾದುದು. ಮೋದಿ ಬಂದ ನಂತರ ದೇಶ ಬದಲಾಗಿದ್ದು ಅವರ ಆಡಳಿತ ಮತ್ತೊಮ್ಮೆ ಬೇಕಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 45

  Happy
 • 2

  Amused
 • 2

  Sad
 • 2

  Frustrated
 • 18

  Angry

Comments:

0 comments

Write the first review for this !