ಕರಿಯಪ್ಪನ ಸಂಪೂರ್ಣ ರಾಮಾಯಣ

ಶುಕ್ರವಾರ, ಮಾರ್ಚ್ 22, 2019
26 °C

ಕರಿಯಪ್ಪನ ಸಂಪೂರ್ಣ ರಾಮಾಯಣ

Published:
Updated:
Prajavani

‘ನನ್ನ ಒರಿಜಿನಲ್‌ ಹೆಂಡ್ತಿಯೂ ನಂಗೆ ಅಷ್ಟೊಂದು ಬೈದಿಲ್ಲ. ಸಿನಿಮಾದಲ್ಲಿ ಹಿಗ್ಗಾಮುಗ್ಗಾ ಬೈದಿದ್ದಾರೆ’ ಎಂದ ಪೋಷಕ ನಟ ತಬಲ ನಾಣಿ, ತನ್ನ ಎಡಬದಿಯಲ್ಲಿ ಕುಳಿತಿದ್ದ ಪೋಷಕ ನಟಿ ಅಪೂರ್ವಾ ಅವರತ್ತ ತಿರುಗಿದರು. ಈ ಮಾತು ಕೇಳಿ ಅಪೂರ್ವಾ ಮೆಲ್ಲನೆ ನಕ್ಕರು. ಬಳಿಕ ನಾಣಿಯ ಮಾತು ಕರಿಯಪ್ಪನ ಸಂಪೂರ್ಣ ರಾಮಾಯಣದತ್ತ ಹೊರಳಿತು.

‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಚಿತ್ರ ಈ ಶುಕ್ರವಾರ ತೆರೆಗೆ ಬರುತ್ತಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು. 

ಇದು ಮಂಡ್ಯದ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆ ಆಧರಿಸಿದ ಕಥೆಯಂತೆ. ಮಾತೇ ಈ ಸಿನಿಮಾದ ಬಂಡವಾಳ. ‘ಮಗ, ಸೊಸೆ, ಹೆಂಡತಿ ಮತ್ತು ಗಂಡನ ನಡುವೆ ನಡೆಯುವ ಕಥೆ ಇದು. ಪ್ರತಿ ಮನೆಯಲ್ಲೂ ಸಮಸ್ಯೆಗಳು ಇರುತ್ತವೆ. ಎಲ್ಲರೂ ಕುಳಿತು ಚರ್ಚಿಸಿದರೆ ಅವುಗಳು ಪರಿಹಾರ ಕಾಣುತ್ತದೆ. ಕರಿಯಪ್ಪ ತನ್ನ ಸಾಂಸಾರಿಕ ಜಂಜಡಗಳನ್ನು ಹೇಗೆ ಪರಿಹರಿಸುತ್ತಾನೆ ಎನ್ನುವುದೇ ಕಥೆ. ಅದಕ್ಕೆ ಕಾಮಿಡಿ ಬೆರೆಸಿ ಹೇಳಿದ್ದೇವೆ’ ಎಂದರು ತಬಲ ನಾಣಿ.

ನ್ಯಾನೊ ಕಾರು ಮತ್ತು ಬಜಾಜ್ ಸ್ಕೂಟರ್‌ ಸಿನಿಮಾವನ್ನು ಆವರಿಸಿಕೊಳ್ಳುತ್ತವೆಯಂತೆ. ‘ಐಷಾರಾಮಿ ವಿಧಾನದಡಿ ಸಿನಿಮಾ ಮಾಡಿಲ್ಲ. ಕಥೆ ಸರಳವಾಗಿ ಸಾಗುತ್ತದೆ. ನೋಡುಗರಿಗೆ ನಗುವಿನ ಕಚಗುಳಿ ಇಡುತ್ತದೆ. ಚಿತ್ರದ ಟೈಟಲ್‌ ಅನ್ನು ಕರಿಯ‍ಪ್ಪ ಎಂದು ಇಡುವ ಬದಲು ನ್ಯಾನೊ ನಾರಾಯಣಪ್ಪ ಎಂದು ಹೆಸರಿಸಬೇಕಿತ್ತು’ ಎಂದು ಇಂಗಿತ ವ್ಯಕ್ತಪಡಿಸಿದರು.

ನಿರ್ದೇಶಕ ಕುಮಾರ್‌ಗೆ ಇದು ಎರಡನೇ ಚಿತ್ರ. ‘ಮಗನಿಗೆ ತಂದೆಯೇ ಹೀರೊ. ಸಂಸಾರ ಎನ್ನುವುದು ಸಾಗರ. ಅಲ್ಲಿ ಅಲೆಗಳು ಎದ್ದಾಗ ನಿಭಾಯಿಸುವ ಶಕ್ತಿ ಇರುವುದು ತಂದೆಗೆ ಮಾತ್ರ. ಚಿತ್ರದಲ್ಲಿ ಅದನ್ನು ತಬಲ ನಾಣಿ ಸಮರ್ಥವಾಗಿ ನಿಭಾಯಿಸಿದ್ದಾರೆ’ ಎಂದು ಹೊಗಳಿದರು.

ಚಂದನ್‌ ಆಚಾರ್ಯ ಈ ಚಿತ್ರದ ನಾಯಕ. ‘ಮನರಂಜನೆ ನೀಡುವುದಷ್ಟೇ ನಮ್ಮ ಕಾಯಕ. ಅದನ್ನು ಚೆನ್ನಾಗಿ ನಿಭಾಯಿಸಿರುವ ಖುಷಿಯಿದೆ’ ಎಂದಷ್ಟೇ ಹೇಳಿದರು.

ಸಂಜನಾ ಆನಂದ್‌ಗೆ ಇದು ಮೊದಲ ಸಿನಿಮಾ. ಡಾ.ಡಿ.ಎಸ್‌. ಮಂಜುನಾಥ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶಿವ ಸೀನ ಅವರ ಛಾಯಾಗ್ರಹಣವಿದೆ. ಅರವ್‌ ರಿಶಿಕ್‌ ಸಂಗೀತ ಸಂಯೋಜಿಸಿದ್ದಾರೆ. ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !