ವಿಜಯಾ ಬ್ಯಾಂಕ್, ಆಳ್ವಾಸ್ ತಂಡ ಚಾಂಪಿಯನ್

ಬಾಗಲಕೋಟೆ: ತಾಲ್ಲೂಕಿನ ಬೇವೂರಿನಲ್ಲಿ ಭಾನುವಾರ ತಡರಾತ್ರಿ ಮುಕ್ತಾಯವಾದ ಅಖಿಲ ಭಾರತಮಟ್ಟದ ‘ಎ ಗ್ರೇಡ್’ ಕಬಡ್ಡಿ ಪಂದ್ಯಾವಳಿಯಲ್ಲಿ ಪುರುಷರ ವಿಭಾಗದಲ್ಲಿ ವಿಜಯಾ ಬ್ಯಾಂಕ್ ಹಾಗೂ ಮಹಿಳೆಯರ ವಿಭಾಗದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ತಂಡ ಚಾಂಪಿಯನ್ ಶ್ರೇಯ ಪಡೆದವು.
ಪುರುಷರ ವಿಭಾಗದ ಫೈನಲ್ನಲ್ಲಿ ಕರ್ನಾಟಕ ಸೀನಿಯರ್ ತಂಡದ ವಿರುದ್ಧ ಎಂಟು ಅಂಕಗಳ ಅಂತರದಲ್ಲಿ ಜಯಗಳಿಸಿದ ವಿಜಯಾಬ್ಯಾಂಕ್ (37–29 ಅಂಕಗಳು) ₹1 ಲಕ್ಷ ನಗದು ಹಾಗೂ ಪ್ರಶಸ್ತಿ ಪಡೆಯಿತು. ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟ ಕರ್ನಾಟಕ ಸೀನಿಯರ್ ತಂಡ ₹60 ಸಾವಿರ ನಗದು ಜೇಬಿಗಿಳಿಸಿಕೊಂಡಿತು.
ಮಹಿಳೆಯರ ವಿಭಾಗದಲ್ಲಿ ಪುಣೆಯ ಧರ್ಮವೀರ ತಂಡದ ವಿರುದ್ಧ ನಾಲ್ಕು ಅಂಕಗಳ ಅಂತರದಲ್ಲಿ (20–16) ಆಳ್ವಾಸ್ ತಂಡದ ಆಟಗಾರ್ತಿಯರು ಗೆಲುವು ಸಾಧಿಸಿ ₹30 ಸಾವಿರ ನಗದು ಬಹುಮಾನ ಪಡೆದರು. ಎರಡನೇ ಸ್ಥಾನ ಪಡೆದ ಪುಣೆ ತಂಡ ₹20 ಸಾವಿರ ನಗದು ಬಹುಮಾನ ಪಡೆಯಿತು.
ಪುರುಷರ ವಿಭಾಗದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಹಾಗೂ ತಮಿಳುನಾಡಿನ ಬಾಲು ಮೆಮೋರಿಯಲ್ ತಂಡಗಳು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದವು. ಬೆಸ್ಟ್ ರೈಡರ್ ಹಾಗೂ ಬೆಸ್ಟ್ ಕ್ಯಾಚರ್ ಆಗಿ ಕರ್ನಾಟಕ ಸೀನಿಯರ್ ತಂಡದ ಆನಂದ ನಾಯಕ್ ಹಾಗೂ ಚೇತನ್ ಹೊರಹೊಮ್ಮಿದರು. ವಿಜಯಾಬ್ಯಾಂಕ್ನ ಪ್ರಶಾಂತ್ ರೈ ಬೆಸ್ಟ್ ಆಲ್ರೌಂಡರ್ ಶ್ರೇಯ ಪಡೆದರು.
ಮಹಿಳೆಯರ ವಿಭಾಗದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಹಾಗೂ ಮಹಾರಾಷ್ಟ್ರ ಪೊಲೀಸ್ ತಂಡಗಳು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದವು. ಕರ್ನಾಟಕ ಅರಣ್ಯ ಇಲಾಖೆ ತಂಡದ ಪ್ರಮೀಳಾ ಬೆಸ್ಟ್ ರೈಡರ್ ಎನಿಸಿದರೆ, ಅದಿತಿ ಜಾಧವ್ ಬೆಸ್ಟ್ ಕ್ಯಾಚರ್ ಹಾಗೂ ಆಳ್ವಾಸ್ನ ಸೌಮ್ಯಾ ಆಲ್ರೌಂಡರ್ ಶ್ರೇಯ ಪಡೆದರು.
‘ಭಾರತೀಯ ದಲಿತ ಯುವ ಸಂಘಟನೆ, ಅಖಿಲ ಭಾರತ ‘ಎ ಗ್ರೇಡ್’ ಅಮೆಚೂರ ಕಬಡ್ಡಿ ಅಸೋಸಿಯೇಷನ್ ಜಿಲ್ಲಾ ಘಟಕದ ವತಿಯಿಂದ ಫೆಬ್ರುವರಿ 8ರಿಂದ ಪಂದ್ಯಾವಳಿ ಆರಂಭವಾಗಿದ್ದವು. ಮೂರು ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ₹10 ಸಾವಿರ ನಗದು ಬಹುಮಾನ ನೀಡಲಾಯಿತು.
ಬರಹ ಇಷ್ಟವಾಯಿತೆ?
0
0
0
0
0
0 comments
View All