ಇಜ್ತೆಮಾ: ಭದ್ರತೆಗೆ ಎಂಟು ಸಾವಿರ ಪೊಲೀಸರು

7
ಮೂರು ದಿನಗಳ ಕಾರ್ಯಕ್ರಮ: ಡ್ರೋಣ್ ಕ್ಯಾಮೆರಾ ಮೂಲಕ ಕಣ್ಗಾವಲು

ಇಜ್ತೆಮಾ: ಭದ್ರತೆಗೆ ಎಂಟು ಸಾವಿರ ಪೊಲೀಸರು

Published:
Updated:
Prajavani

ಬಾಗಲಕೋಟೆ: ‘ಕಲಾದಗಿಯಲ್ಲಿ ಫೆಬ್ರುವರಿ 16 ರಿಂದ ಆರಂಭವಾಗಲಿರುವ ಬಡೇ ಇಜ್ತೆಮಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಾನೂನು, ಶಾಂತಿ, ಸುವ್ಯವಸ್ಥೆ  ಕಾಪಾಡುವ ನಿಟ್ಟಿನಲ್ಲಿ ಎಂಟು ಸಾವಿರ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ.

ಮೂರು ದಿನಗಳ ಕಾಲ ನಡೆಯಲಿರುವ ಇಜ್ತೆಮಾ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಶಾಂತಿಭಂಗ ಉಂಟು ಮಾಡುವವರ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ. 

ಕಾನೂನು ಸುವ್ಯವಸ್ಥೆಗೆ ಭಂಗ ತರುವ ಯಾವುದೇ ಘಟನೆಗಳು ಕಂಡು ಬಂದಲ್ಲಿ ತಕ್ಷಣವೇ ಮುಲಾಜಿಲ್ಲದೇ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರ ಹಿತಾಸಕ್ತಿ ವಿಚಾರದಲ್ಲಿ ಶೂನ್ಯ ಪ್ರಮಾಣದ ಸಹಿಷ್ಣುತೆ ಹೊಂದಲಾಗಿದೆ. ಕಾರ್ಯಕ್ರಮ ಸ್ಥಳದಲ್ಲಿ ಯಾವುದೇ ರೀತಿಯ ಮಾಲಿನ್ಯ ಜರುಗದಂತೆ ನಿಗಾ ವಹಿಸಲು ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗೆ ನಿರ್ದೇಶನ ನೀಡಲಾಗಿದೆ.

ಸುತ್ತಮುತ್ತಲಿನ ಜಾಗದವರಿಂದ ತಕರಾರು ಆಗದಂತೆ ಸರ್ವೆ ಇಲಾಖೆಯಿಂದ ಗಡಿಗಳನ್ನು ಗುರುತಿಸಲಾಗಿದೆ. ತುರ್ತು ಚಿಕಿತ್ಸೆಗಾಗಿ ಆರೋಗ್ಯ ಇಲಾಖೆಯಿಂದ ಏಳು  ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಎಂಟು ಮಂದಿ ವೈದ್ಯಾಧಿಕಾರಿಗಳು, ಒಬ್ಬರು ತಜ್ಞ ವೈದ್ಯರು ಹಾಗೂ ಎರಡು ಆ್ಯಂಬುಲೆನ್ಸ್‌ ವ್ಯವಸ್ಥೆ ಸಹ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಮಸೀದಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ:

ಜಿಲ್ಲೆಯ ಎಲ್ಲ ಮಸೀದಿಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಯಾವುದೇ ಸಂಶಯಾಸ್ಪದ ಸಂಗತಿ ಕಂಡು ಬಂದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಜೊತೆಗೆ ಫೆಬ್ರುವರಿ 13 ರಿಂದ ಕಾರ್ಯಕ್ರಮ ಮುಗಿಯುವವರೆಗೂ ಮದ್ಯ ಮಾರಾಟ, ಜಾನುವಾರು ಸಂತೆ ಹಾಗೂ ಕಸಾಯಿ ಖಾನೆಗಳನ್ನು ಸಹ ಬಂದ್ ಮಾಡಲಾಗಿದೆ. ಸಮಾರಂಭದ ಸ್ಥಳದಲ್ಲಿ ಕೇವಲ ಸಸ್ಯಾಹಾರಕ್ಕೆ ಅನುಮತಿ ನೀಡಲಾಗಿದೆ. ಮಾಂಸಾಹಾರ  ನಿಷೇಧಿಸಲಾಗಿದೆ.

ಐದು ಕಡೆ ಚೆಕ್‌ಪೋಸ್ಟ್ ನಿರ್ಮಾಣ:

ಜಿಲ್ಲೆಯ ಐದು ಕಡೆ ಪೊಲೀಸ್ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ. ವಾಹನಗಳನ್ನು ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲೆಯ ಎಲ್ಲ ಪ್ರಮುಖ ವೃತ್ತಗಳಲ್ಲಿಯೂ ನಿಗಾ ವಹಿಸಲಾಗಿದೆ. ಕಾರ್ಯಕ್ರಮದ ಸ್ಥಳದ ಹತ್ತಿರ ಹೊರತುಪಡಿಸಿ ಬೇರೆಡೆ ಫ್ಲೆಕ್ಸ್‌, ಬಂಟಿಂಗ್ ಅಳವಡಿಕೆ ನಿಷೇಧಿಸಲಾಗಿದೆ.

ಕಾರ್ಯಕ್ರಮ ಸಂಘಟಕರಿಂದ ಸದ್ವರ್ತನೆ ಕುರಿತು ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗಿದೆ. ಸಿಸಿಟಿವಿ, ಡ್ರೋನ್ ಕ್ಯಾಮೆರಾ ಮೂಲಕವೂ ಕಾರ್ಯಕ್ರಮದ ಮೇಲೆ ನಿಗಾ ವಹಿಸಲಾಗಿದೆ. ಕಾರ್ಯಕ್ರಮದಲ್ಲಿ ವದಂತಿಗೆ ಭಂಗ ತರುವ ಪ್ರಚೋದನಾಕಾರಿ ಭಾಷಣಗಳನ್ನು ನಿಷೇಧಿಸಲಾಗಿದೆ. ಭಾಷಣಗಳನ್ನು ವಿಡಿಯೊ ಚಿತ್ರೀಕರಣ ಮಾಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

 

 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !