ಶನಿವಾರ, 12–2–1994

7

ಶನಿವಾರ, 12–2–1994

Published:
Updated:

ಕನ್ನಡ ಅಭಿವೃದ್ಧಿ: ಸಮಗ್ರ ಯೋಜನೆಗೆ ಚದುರಂಗ ಆಗ್ರಹ

ಲಕ್ಷ್ಮಣ ಕೊಡಸೆ, ಎನ್. ಉದಯಕುಮಾರ್

ಮಹಾಕವಿ ಕುವೆಂಪು ಮಂಟಪ, ಮಂಡ್ಯ, ಫೆ. 11–ಕನ್ನಡದ ಅಭಿವೃದ್ಧಿಗೆ ಒಂದು ಸಮಗ್ರ ಯೋಜನೆ ತಯಾರಿ. ಕನ್ನಡವನ್ನು ಆಡಳಿತ ಭಾಷೆ ಮಾಡಲು ಮೊದಲು ಸಚಿವಾಲಯ ಮಟ್ಟದಲ್ಲಿ ಕನ್ನಡದ ಅನುಷ್ಠಾನ, ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ಅಗತ್ಯ ಆಡಳಿತಾತ್ಮಕ ಕ್ರಮಕ್ಕೆ ಆದೇಶ, ಸಾಹಿತ್ಯವನ್ನು ಸಾಮಾನ್ಯ ಜನತೆಗೆ ತಲುಪಿಸಲು ಸಾಕ್ಷರತಾ ಆಂದೋಲನಕ್ಕೆ ಇನ್ನಷ್ಟು ಗಮನ.

ಖ್ಯಾತ ಸಾಹಿತಿ ಚದುರಂಗ ಅವರು ಅರವತ್ತಮೂರನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಪೀಠದಿಂದ ಇವುಗಳಿಗಾಗಿ ಸರ್ಕಾರವನ್ನು ಇಂದು ಆಗ್ರಹಿಸಿದರು.

ಇಲ್ಲಿನ ಸರ್ ಎಂ.ವಿ. ಕ್ರೀಡಾಂಗಣದಲ್ಲಿ ನಿರ್ಮಿಸಿರುವ ವಿಶಾಲವಾದ ಮಹಾಕವಿ ಕುವೆಂಪು ಮಂಟಪದಲ್ಲಿ ಆರಂಭವಾದ ಸಮ್ಮೇಳನದಲ್ಲಿ ಮಾಡಿದ ಅಧ್ಯಕ್ಷ ಭಾಷಣದಲ್ಲಿ ಅವರು ನಾಡು–ನುಡಿಗೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ವಿಶ್ಲೇಷಣೆ ನಡೆಸಿ, ಕೊರತೆಗಳ ಕಡೆ ಬೆರಳು ಮಾಡಿ ಸಲಹೆ ಸೂಚನೆಗಳನ್ನು ಸರ್ಕಾರದ ಮತ್ತು ಜನತೆಯ ಮುಂದಿಟ್ಟರು. ಆಡಳಿತ ಮತ್ತು ಶಿಕ್ಷಣದಲ್ಲಿ ಕನ್ನಡ ಅನುಷ್ಠಾನದ ವಿಳಂಬದ ಬಗ್ಗೆ ಅವರ ಭಾಷಣದಲ್ಲಿ ಕಾಳಜಿ ಮತ್ತು ಆತಂಕ ವ್ಯಕ್ತವಾಯಿತು.

ಕರ್ನಾಟಕದಲ್ಲಿ ವಿದ್ಯಾಭ್ಯಾಸ ಮಾಡುವವರಿಗೆ ಕನ್ನಡ ಜ್ಞಾನ ಅಗತ್ಯ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಈ ಮಹತ್ವದ ತೀರ್ಪಿಗೆ ಕಾರಣರಾದವರೆಲ್ಲರನ್ನೂ ಮನಸಾರೆ ಅಭಿನಂದಿಸಬೇಕಾಗಿದೆ. ಈ ತೀರ್ಪಿಗೆ ಅನುಗುಣವಾಗಿ 1994–95ರ ಶೈಕ್ಷಣಿಕ ವರ್ಷ ಆರಂಭವಾಗುವುದರೊಳಗೆ ಅಗತ್ಯವಾದ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗೆ ಮುಖ್ಯಮಂತ್ರಿಗಳು ಆಜ್ಞೆ ಮಾಡಬೇಕಾದುದು ಅತ್ಯಗತ್ಯ ಎಂದು ಚದುರಂಗ ಹೇಳಿದರು.

ಮೂರು ವರ್ಷಕ್ಕೆ ಒಮ್ಮೆ ಸಮ್ಮೇಳನ?

ಪ್ರತಿವರ್ಷ ಸಾಹಿತ್ಯ ಸಮ್ಮೇಳನವನ್ನು ನಡೆಸುವುದು ಆರ್ಥಿಕವಾಗಿ ಪ್ರಬಲವಾಗಿಲ್ಲದ ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊರೆಯಾಗುವ ಕಾರಣ ಮೂರು ವರ್ಷಕ್ಕೆ ಒಮ್ಮೆ ವಿಶ್ವ ಕನ್ನಡ ಮೇಳದ ಮಾದರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸಿದರೆ ಒಳ್ಳೆಯದಲ್ಲವೇ?

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ತಮ್ಮ ಪ್ರಸ್ತಾವನಾ ಭಾಷಣದಲ್ಲಿ ಎತ್ತಿದ ಪ್ರಶ್ನೆಗೆ ಉತ್ತರ ನೀಡಿದ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ಈ ಸಲಹೆಯನ್ನು ತಾತ್ವಿಕವಾಗಿ ಒಪ್ಪಿಕೊಂಡಂತೆ ತೋರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !