ಕಲಾದಗಿ ಬಡೇ ಇಜ್ತೆಮಾ: ಪಾಕಿಸ್ತಾನದಿಂದ ಯಾರೂ ಬರುವುದಿಲ್ಲ

7
ಸಂಘಟಕರ ಸ್ಪಷ್ಟನೆ

ಕಲಾದಗಿ ಬಡೇ ಇಜ್ತೆಮಾ: ಪಾಕಿಸ್ತಾನದಿಂದ ಯಾರೂ ಬರುವುದಿಲ್ಲ

Published:
Updated:
Prajavani

ಬಾಗಲಕೋಟೆ: ‘ಕಲಾದಗಿಯಲ್ಲಿ ಫೆಬ್ರುವರಿ 16 ರಿಂದ ನಡೆಯಲಿರುವ ಬಡೇ ಇಜ್ತೆಮಾಕ್ಕೆ ಪಾಕಿಸ್ತಾನದ ಪ್ರಜೆಗಳಾಗಲಿ, ಇಲ್ಲವೇ ಅಲ್ಲಿನ ಧರ್ಮ ಗುರುಗಳಾಗಲೀ ಪಾಲ್ಗೊಳ್ಳುತ್ತಿಲ್ಲ’ ಎಂದು ತಬ್ಲೀಕ್ ಜಮಾತ್‌ನ ಮುಖಂಡ ಅಬ್ದುಲ್ ಯಾಸಿನ್ ಮೊಮಿನ್ ಹೇಳಿದರು.

ಕಲಾದಗಿಯ ಬಡೇ ಇಜ್ತೆಮಾ ಸ್ಥಳದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ‘ಇಲ್ಲಿಯವರೆಗೂ ದೇಶದ ವಿವಿಧೆಡೆ ನಡೆದಿರುವ ಇಜ್ತೇಮಾಗಳಿಗೆ ಪಾಕಿಸ್ತಾನದಿಂದ ಬಂದ ಯಾವುದೇ ಧರ್ಮಗುರು ಪಾಲ್ಗೊಂಡಿರುವ ಇತಿಹಾಸವಿಲ್ಲ’ ಎಂದರು.

‘ಕಾರ್ಯಕ್ರಮಕ್ಕೆ ವಿದೇಶಗಳಿಂದ 300 ಜನ ಮಾತ್ರ ಬರುತ್ತಿದ್ದಾರೆ. ವಿದೇಶದವರು ಯಾರೂ ಕೂಡಾ ಇಲ್ಲಿ ಪ್ರವಚನ ನೀಡುವುದಿಲ್ಲ’ ಎಂದರು.

ಫೆ.17ಕ್ಕೆ ಸಾಮೂಹಿಕ ವಿವಾಹ:

‘ಮೂರು ದಿನದ ಕಾರ್ಯಕ್ರಮದಲ್ಲಿ ಪ್ರತಿದಿನ ಬೆಳಿಗ್ಗೆ ಪ್ರಾರ್ಥನೆಯ ನಂತರ ಧರ್ಮಗುರುಗಳಿಂದ ಪ್ರವಚನ, ನಂತರ 10 ರಿಂದ ಕುರಾನ್‌ ಕಲಿಕೆ, ನಂತರ ಇಜ್ತೆಮಾ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಬಳಿಕ ಪ್ರವಚನ ನಡೆಯುತ್ತದೆ. ಫೆಬ್ರುವರಿ 17 ರಂದು ಸಂಜೆ ಪ್ರಾರ್ಥನೆ ಬಳಿಕ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ’ ಎಂದರು.

ಹಜರತ್‌ ಮೌಲಾನ್ ಸಾದ್‌ ಭಾಗಿ:

‘ದೆಹಲಿಯ ಹಜರತ್‌ ಮೌಲಾನ್‌ ಇಲಿಯಾಸ್ ಮೊದಲ ಬಾರಿಗೆ ಇಜ್ತೆಮಾ ಆರಂಭಿಸಿದರು ಈಗ ಅವರ ಮರಿಮೊಮ್ಮಗ ಹಜರತ್ ಮೌಲಾನ್ ಸಾದ್ ಮುಖ್ಯ ಪ್ರವಚನಕಾರರಾಗಿ ಪಾಲ್ಗೊಳ್ಳುತ್ತಿದ್ದಾರೆ. ಅವರೊಂದಿಗೆ ವಿವಿಧ ರಾಜ್ಯಗಳಿಗೆ ಸೇರಿದ 900 ಮಂದಿ ಧರ್ಮಗುರುಗಳು ಪಾಲ್ಗೊಳ್ಳಲಿದ್ದಾರೆ’ ಎಂದರು.

 ‘ಬೆಳಗಾವಿ ಜಿಲ್ಲೆಯ 10 ತಾಲ್ಲೂಕಿನವರು ಕೂಡಿ ಇಜ್ತೆಮಾದಲ್ಲಿ ಪಾಲ್ಗೊಳ್ಳುತ್ತಿರುವ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದರೆ, ವಿಜಯಪುರ ಜಿಲ್ಲೆಯವರು ಕುಡಿಯುವ ನೀರಿನ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜನರು ಮೂರು ದಿನದ ಇಜ್ತೆಮಾದ ಪಾರ್ಕಿಂಗ್ ವ್ಯವಸ್ಥೆ ನೋಡಿಕೊಳ್ಳುತ್ತಿರುವ ಜೊತೆಗೆ ಒಂದು ತಿಂಗಳಿಂದ ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿದವರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ’ ಎಂದರು.

‘ನಾವು ಸಹ ಹಿಂದುಸ್ಥಾನಿಗಳು, ಪೈಗಂಬರ್ ಗೋ ವಧೆ ವಿರೋಧಿಸಿದ್ದಾರೆ. ಹಸುವಿನ ತುಪ್ಪ ಆರೋಗ್ಯಕ್ಕೆ ಪೂರಕ ಎಂದು ಪೈಗಂಬರ್ ಹೇಳಿದ್ದಾರೆ. ಹಾಗಾಗಿ ನಾವು ಗೋ ವಧೆ ಮಾಡುವುದಿಲ್ಲ’ ಎಂದರು.

ಮಜ್ಜಿಗೆ, ಶರಬತ್ ಹಂಚಿಕೆ:

‘ನಮ್ಮ ಕಾರ್ಯಕ್ರಮಕ್ಕೆ ನೆರವಾಗಲು ಹಿಂದು ಸಮಾಜದ ಯುವಕರು ಮಜ್ಜಿಗೆ ಹಾಗೂ ಶರಬತ್ ಹಂಚಲು ಮುಂದೆ ಬಂದಿದ್ದಾರೆ. ನಾವು ಸಹ ಅದಕ್ಕೆ ಒಪ್ಪಿಗೆ ಸೂಚಿಸಿದ್ದೇವೆ’ ಎಂದರು. 

ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಸಲಿಂ ಶೇಖ್, ಬಂದೇನವಾಜ್ ಸೌದಾಗರ, ಮಕ್ಬುಲ್ ಅಹಮದ್ ಹುಬ್ಬಳ್ಳಿ, ಹಿದಾಯತ್ ಉಲ್ಲಾ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !