ವಿದರ್ಭಕ್ಕೆ ವಾಡಕರ್ ಅರ್ಧಶತಕದ ಆಸರೆ

7
ಇರಾನಿ ಕಪ್ ಕ್ರಿಕೆಟ್: ಗೌತಮ್, ಧರ್ಮೇಂದ್ರಸಿಂಹ ಕೈಚಳಕ

ವಿದರ್ಭಕ್ಕೆ ವಾಡಕರ್ ಅರ್ಧಶತಕದ ಆಸರೆ

Published:
Updated:
Prajavani

ನಾಗಪುರ : ಮೊದಲ ನಿರೀಕ್ಷಿಸಿದಂತೆ ಜಮ್ತಾ ಕ್ರೀಡಾಂಗಣದ ಪಿಚ್‌ ಬುಧವಾರ ಸ್ಪಿನ್ ಬೌಲರ್‌ಗಳಿಗೆ ನೆರವು ನೀಡಿತು.

ಇದರಿಂದಾಗಿ ಭಾರತ ಇತರೆ ತಂಡದ ಕೃಷ್ಣಪ್ಪ ಗೌತಮ್ (33ಕ್ಕೆ2) ಮತ್ತು ಧರ್ಮೇಂದ್ರಸಿಂಹ ಜಡೇಜ (66ಕ್ಕೆ2) ಅವರು ವಿದರ್ಭ ಬ್ಯಾಟಿಂಗ್ ಪಡೆಗೆ ಭೀತಿಯೊಡ್ಡಿದರು. ಆದರೆ, ಕೆಳಕ್ರಮಾಂಕದ ಬ್ಯಾಟ್ಸ್‌ಮನ್ ಅಕ್ಷಯ್ ವಾಡಕರ್ (ಬ್ಯಾಟಿಂಗ್ 50; 96ಎಸೆತ) ಮತ್ತು ಅಕ್ಷಯ್ ಕರ್ಣೇವರ್ (ಬ್ಯಾಟಿಂಗ್ 15) ಅವರಿಬ್ಬರ ಆಟದ ಬಲದಿಂದ ಆತಿಥೇಯರು ಫಾಲೋ ಆನ್ ಆತಂಕದಿಂದ ತಪ್ಪಿಸಿಕೊಂಡಿದ್ದಾರೆ.

ಅಜಿಂಕ್ಯ ರಹಾನೆ ನಾಯಕತ್ವದ ಇತರೆ ಭಾರತ ತಂಡವು ಮಂಗಳವಾರ 330 ರನ್‌ ಗಳಿಸಿತ್ತು. ಅದಕ್ಕುತ್ತರವಾಗಿ ವಿದರ್ಭ ತಂಡವು ಎರಡನೇ ದಿನದಾಟದ ಕೊನೆಗೆ 90 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 245 ರನ್ ಗಳಿಸಿತು.

ಬೆಳಿಗ್ಗೆ ಇನಿಂಗ್ಸ್‌ ಶುರು ಮಾಡಿದ ವಿದರ್ಭ ತಂಡಕ್ಕೆ ನಾಯಕ ಫೈಜ್ ಫಜಲ್ ಮತ್ತು ಸಂಜಯ್ ರಾಮಸ್ವಾಮಿ (65;166ಎ) ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 50 ರನ್‌ ಗಳಿಸಿ ಉತ್ತಮ ಆರಂಭ ನೀಡಿದರು.

ಫಜಲ್ ಔಟಾದ ನಂತರ  ಅಥರ್ವ ತೈಡೆ ಕೂಡ ಬೇಗನೆ ನಿರ್ಗಮಿಸಿದರು.  ಸಂಜಯ್ ಜೊತೆಗೂಡಿದ ಗಣೇಶ್ ಸತೀಶ್ ಮೂರನೇ ವಿಕೆಟ್ ಜೊತೆಯಾಟದಲ್ಲಿ 62 ರನ್‌ ಸೇರಿಸಿದರು. ಆದರೆ ಧರ್ಮೇಂದ್ರಸಿಂಹ ಜಡೇಜ ತಮ್ಮ ಕೈಚಳಕ ತೋರಿದರು. ಜೊತೆಯಾಟಕ್ಕೆ ತಡೆಯೊಡ್ಡಿದರು. ಇಬ್ಬರ ವಿಕೆಟ್‌ಗಳನ್ನೂ ತಮ್ಮ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಸಫಲರಾದರು.

ಇದರಿಂದಾಗಿ 168 ರನ್‌ಗಳಿಗೆ ಐದು ವಿಕೆಟ್‌ ಕಳೆದುಕೊಂಡ ತಂಡವು ಬೇಗನೆ ಪತನವಾಗುವ ಆತಂಕವಿತ್ತು. ಅಕ್ಷಯ್ ವಾಡಕರ್ ತಾಳ್ಮೆಯಿಂದ ಇನಿಂಗ್ಸ್‌ ಕಟ್ಟಿದರು. ತಮಗೆ ಉತ್ತಮ ಜೊತೆ ನೀಡಿದ ಆದಿತ್ಯ ಸರವಟೆ (18 ರನ್) ಅವರೊಂದಿಗೆ ಆರನೇ ವಿಕೆಟ್‌ಗೆ 58 ರನ್‌ ಸೇರಿಸಿದ್ದರಿಂದ 200 ಗಡಿ ದಾಟಿತು.  ದಿನದಾಟದ ಮುಕ್ತಾಯದ ಕೆಲವು ನಿಮಿಷಗಳ ಮುನ್ನ ಸರವಟೆ ಅವರು ಆಂಕಿತ್ ರಜಪೂತ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ಕ್ರೀಸ್‌ಗೆ ಬಂದ ಎಡಗೈ ಬ್ಯಾಟ್ಸ್‌ಮನ್ ಅಕ್ಷಯ್ ಕರ್ಣೇವರ್ ವೇಗವಾಗಿ ರನ್‌ ಗಳಿಸಿದರು. ಮೂರು ಬೌಂಡರಿಗಳನ್ನು ಸಿಡಿಸಿದರು. ಇದರೊಂದಿಗೆ ವಿಕೆಟ್ ಪತನ ತಡೆದರು. ಮೂರನೇ ದಿನಕ್ಕೆ ತಮ್ಮ ಆಟವನ್ನೂ ಬಾಕಿ ಇಟ್ಟುಕೊಂಡಿದ್ದಾರೆ. ಮೊದಲ ಇನಿಂಗ್ಸ್‌ ಮುನ್ನಡೆ ಪಡೆಯಲು ವಿದರ್ಭ ತಂಡವು ಇನ್ನೂ 85 ರನ್ ಗಳಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !