ಪೈಪೋಟಿ ರಾಜಕಾರಣದಲ್ಲಿ ನಲುಗಿದ ಲೋಕಸಭೆ

ಶುಕ್ರವಾರ, ಮಾರ್ಚ್ 22, 2019
21 °C

ಪೈಪೋಟಿ ರಾಜಕಾರಣದಲ್ಲಿ ನಲುಗಿದ ಲೋಕಸಭೆ

Published:
Updated:
Prajavani

2014ರ ಮೇ 22ರಂದು ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಬಿಜೆಪಿಯ ಸಂಸದೀಯ ಸಭೆ ನಡೆಯಲಿತ್ತು. 16ನೇ ಲೋಕಸಭೆ ಅಸ್ತಿತ್ವಕ್ಕೆ ಬರಲಿತ್ತು. ವಿಜಯೀ ಪಕ್ಷದ ನಾಯಕ ನರೇಂದ್ರ ಮೋದಿ, ಜನತಂತ್ರದ ದೇಗುಲದ ಮೆಟ್ಟಿಲುಗಳ ಮೇಲೆ ಮಂಡಿಯೂರಿ ಹಣೆ ತಾಕಿಸಿ ನಮಸ್ಕರಿಸಿದರು.

ಕೀಳು ರಾಜಕಾರಣದಲ್ಲಿ ಮುಳುಗದೆ, ನಿರ್ಮಲ ಮನಸ್ಸಿನ ಸರ್ಕಾರ ನಡೆಸುತ್ತೇವೆ ಎಂದು ಮುತ್ಸದ್ದಿಯಂತೆ ಮಾತನಾಡಿ ಭಾವುಕರಾದರು. ಆದರೆ ಅಂದು ಆಡಿದ ಈ ಮಾತುಗಳನ್ನು ಆನಂತರ ಸಂಪೂರ್ಣವಾಗಿ ಮರೆತರೇ ಎಂದು ಅನುಮಾನ ಮೂಡುವಷ್ಟು ಅವರ ನಡೆ– ನುಡಿಗಳು ಬದಲಾದವು. 2014ರಲ್ಲಿ ರಚನೆಯಾದ 16ನೇ ಲೋಕಸಭೆ ಮೊನ್ನೆ ಪರಿಸಮಾಪ್ತಿಯಾಯಿತು. ಕಾಂಗ್ರೆಸ್‌ಮುಕ್ತ ಭಾರತದ ಮಾತಾಡುತ್ತಲೇ ಆ ಪಕ್ಷದ ಮೇಲೆ ಪ್ರತಿ ಬಾರಿಯೂ ನಂಜಿನ ಪ್ರಹಾರ ನಡೆಸಿದ ಪ್ರಧಾನಿ ಭಾಷಣಗಳಿಗೆ ಈ ಲೋಕಸಭೆ ಸಾಕ್ಷಿಯಾಯಿತು.

‘ದ್ವೇಷವನ್ನು ಪ್ರೀತಿಯಿಂದ ಗೆಲ್ಲುತ್ತೇನೆ’ ಎಂದು ಹಠಾತ್ತನೆ ಪ್ರಧಾನಿ ಬಳಿ ಸಾರಿ ಅವರನ್ನು ಬಲವಂತದಿಂದ ಆಲಿಂಗಿಸಿಕೊಂಡ ರಾಹುಲ್ ಗಾಂಧಿ ಅವರ ನಾಟಕೀಯ ನಡೆಯನ್ನೂ ಕಂಡಿತು. ‘ಎಲ್ಲರ ಜೊತೆ- ಎಲ್ಲರ ಅಭಿವೃದ್ಧಿ’ (ಸಬ್ ಕಾ ಸಾಥ್- ಸಬ್ ಕಾ ವಿಕಾಸ್) ಎಂಬುದು ಮೋದಿ ನೇತೃತ್ವದ ಸರ್ಕಾರದ ಧ್ಯೇಯವಾಕ್ಯ. ಈ ಆಶಯವನ್ನು ಆಚರಣೆಗೆ ಇಳಿಸುವ ದಿಕ್ಕಿನಲ್ಲಿ ಎದ್ದು ಕಾಣುವ ಸಾಮಾಜಿಕ ಜನಪರ ಶಾಸನಗಳು ಈ ಅವಧಿಯಲ್ಲಿ ಕಾಣಬರಲಿಲ್ಲ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆ ಅಂಗೀಕರಿಸಲು ಸಂಸತ್ತಿನ ಜಂಟಿ ಅಧಿವೇಶನವನ್ನು ಮಧ್ಯರಾತ್ರಿ ಕರೆಯಲಾಯಿತು. ಐತಿಹಾಸಿಕ ಘಟನೆ ಎಂಬಂತೆ ಬಿಂಬಿಸಲಾಯಿತು. ಆದರೆ ಗ್ರಾಮೀಣ ಭಾರತವನ್ನು ಸುಡುತ್ತಿರುವ ಕೃಷಿ ಬಿಕ್ಕಟ್ಟನ್ನು ಚರ್ಚಿಸಲು ಪ್ರತ್ಯೇಕ ಅಧಿವೇಶನ ಕರೆಯಬೇಕೆಂಬ ನೂರಾರು ರೈತ ಸಂಘಟನೆಗಳ ಆಕ್ರಂದನ ಕಿವಿಗೆ ಬೀಳಲಿಲ್ಲ ಎಂಬಂತೆ ವರ್ತಿಸಿತು ಕೇಂದ್ರ ಸರ್ಕಾರ. ಆಳುವ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಸಂವಾದ ಸಾರಾಸಗಟಾಗಿ ಮುರಿದುಬಿದ್ದದ್ದು ಈ ಲೋಕಸಭೆಯ ದುರದೃಷ್ಟಕರ ವಾಸ್ತವ. 

ಹಲವಾರು ಮಸೂದೆಗಳನ್ನು ಮತ್ತು 2018ರ ಬಜೆಟ್- ಹಣಕಾಸು ಮಸೂದೆಯನ್ನು ಚರ್ಚೆಯ ಚಕಾರವೂ ಇಲ್ಲದೆ ಅಂಗೀಕರಿಸಲಾಯಿತು. ಮೇಲ್ಜಾತಿಗಳ ಬಡವರಿಗೆ ಶೇ 10ರಷ್ಟು ಮೀಸಲಾತಿ ಕಲ್ಪಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಹಠಾತ್ತನೆ ಮಂಡಿಸಿ ಎರಡೇ ದಿನಗಳಲ್ಲಿ ಅಂಗೀಕಾರ ನೀಡುವಂತೆ ಉಭಯ ಸದನಗಳನ್ನು ಬಗ್ಗಿಸಲಾಯಿತು. ಸಂಸದೀಯ ಇತಿಹಾಸಕ್ಕೆ ಸೇರಿಹೋದ ಕಪ್ಪು ಚುಕ್ಕೆಗಳಿವು. ಆದರೆ ಇಂತಹ ತಪ್ಪನ್ನು ಬಿಜೆಪಿ ಮಾತ್ರವೇ ಮಾಡಿಲ್ಲ. ಯುಪಿಎ-2ರ ಅವಧಿಯಲ್ಲಿ 2013ರ ಬಜೆಟ್ ಮತ್ತು 2014ರ ಆಂಧ್ರಪ್ರದೇಶ ಮರುವಿಂಗಡಣೆ ಮಸೂದೆಗಳು ಗದ್ದಲ–ಕೋಲಾಹಲದ ನಡುವೆ ಯಾವುದೇ ಚರ್ಚೆಯಿಲ್ಲದೆ ಅಂಗೀಕಾರ ಪಡೆದಿದ್ದವು.

15ನೇ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷ, ಆಳುವ ಯುಪಿಎ ಮೈತ್ರಿಕೂಟ ಸರ್ಕಾರದ ಆಧಾರಸ್ತಂಭವಾಗಿತ್ತು. ಬಿಜೆಪಿಯು ವಿರೋಧ ಪಕ್ಷದ ಸಾಲುಗಳಲ್ಲಿ ಕುಳಿತು ಶೇ 65ರಷ್ಟು ಕಲಾಪವನ್ನು ಧ್ವಸ್ತಗೊಳಿಸಿತು. ಅದರಿಂದ ಬಿಜೆಪಿ- ಕಾಂಗ್ರೆಸ್ ಪಕ್ಷಗಳು ಯಾವ ಪಾಠವನ್ನೂ ಕಲಿಯಲಿಲ್ಲ. 16ನೇ ಲೋಕಸಭೆಯಲ್ಲಿ ಗದ್ದಲ-ಕೋಲಾಹಲ ಎಬ್ಬಿಸುವಲ್ಲಿ ಕಾಂಗ್ರೆಸ್ ಪಕ್ಷವು 15ನೇ ಲೋಕಸಭೆಯ ವಿರೋಧಪಕ್ಷ ಬಿಜೆಪಿಯನ್ನೇನೂ ಸರಿಗಟ್ಟಲಿಲ್ಲ. 

ಆದರೆ ಕೈಲಾದಷ್ಟು ಮಟ್ಟಿಗೆ ಮುಯ್ಯಿಗೆ ಮುಯ್ಯಿ ತೀರಿಸಿಕೊಂಡ ಆಪಾದನೆಯಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಆಡಳಿತ ಸೂತ್ರ ಹಿಡಿದ ಬಿಜೆಪಿ ಕೂಡ ಅಂದಿನ ಅಧಿಕಾರಾರೂಢ ಕಾಂಗ್ರೆಸ್ ಪಕ್ಷದಂತೆಯೇ ಅಸೂಕ್ಷ್ಮವಾಗಿ ವರ್ತಿಸಿತು. ವಿರೋಧ ಪಕ್ಷಗಳನ್ನು ಲೆಕ್ಕಿಸದೆ ತಾನು ತುಳಿದದ್ದೇ ಹಾದಿ ಎಂಬಂತೆ ನಡೆದುಕೊಂಡಿತು. ಸಂಸತ್ ಭವನಕ್ಕೆ ಬಂದರೂ ಸದನಗಳತ್ತ ತಲೆ ಹಾಕಲಿಲ್ಲ ಎಂಬ ಆಪಾದನೆಗಳನ್ನು ಮೋದಿ ಹೊತ್ತರು. 

ವಿದೇಶ ಯಾತ್ರೆಗಳಲ್ಲಿ ನಿರತರಾಗಿರುವ ಪ್ರಧಾನಿ, ಭಾರತಕ್ಕೆ ಮತ್ತು ಸಂಸತ್ತಿಗೆ ಭೇಟಿ ನೀಡುವುದು ಯಾವಾಗ ಎಂಬ ಚುಚ್ಚುಮಾತುಗಳನ್ನು ಎದುರಿಸಬೇಕಾಯಿತು. ಅವರ ಆಳ್ವಿಕೆಯಲ್ಲಿ ಜನತಂತ್ರದ ಅವಸಾನ ಎಂದು ಇವರು ಬೊಬ್ಬೆ ಹಾಕಿದರು. ಇವರ ಆಳ್ವಿಕೆಯಲ್ಲಿ ಅವರು ಇದೇ ದೂರನ್ನು ಮುಂದಿಟ್ಟು ಕಿರುಚಿದರು. ಆತ್ಮಹತ್ಯೆಯ ವಿಧ್ವಂಸಕಾರಿ ವಿಷಚಕ್ರವಿದು. ಈ ಪರಸ್ಪರ ಪೈಪೋಟಿಯ ಪ್ರತೀಕಾರದಲ್ಲಿ ನಲುಗುತ್ತಿರುವುದು ಜನಪ್ರತಿನಿಧಿಗಳ ಪರಮೋಚ್ಚ ಸಭೆ ಎನಿಸಿದ ಲೋಕಸಭೆ ಮತ್ತು ಜನತಾಂತ್ರಿಕ ವ್ಯವಸ್ಥೆ.

ಸಂಸತ್ತಿನ ಇಂದಿನ ದುಃಸ್ಥಿತಿಗೆ ಮೋದಿ ನೇತೃತ್ವದ ಸರ್ಕಾರವೊಂದನ್ನೇ ದೂಷಿಸಲು ಬರುವುದಿಲ್ಲ. ದಶಕಗಳಿಂದ ನಡೆದು ಬರುತ್ತಿರುವ ಅವನತಿಯಿದು. ಬಿರುಗಾಳಿಯಂತಹ ನಾಯಕತ್ವ ಮತ್ತು 30 ವರ್ಷಗಳ ನಂತರ ಏಕಪಕ್ಷ ಬಹುಮತದ ಸರ್ಕಾರವನ್ನು ಕಂಡದ್ದು 16ನೇ ಲೋಕಸಭೆ. ಆದರೆ, ಲೋಕಸಭೆ ಕಲಾಪದ ಅವನತಿ ಇತ್ತೀಚಿನ ದಿನಗಳಲ್ಲಿ ರಭಸ ಪಡೆದುಕೊಂಡದ್ದು ಮಾತ್ರ ಕಟು ವಾಸ್ತವ.

Tags: 

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !