ಸಮಸ್ಯೆ ‘ಚಕ್ಕರ್’ ಮಾತ್ರ ಅಲ್ಲ

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಶೈಕ್ಷಣಿಕ ಗುಣಮಟ್ಟ ಕುಸಿತಕ್ಕೆ ಹಲವು ಸಂಕೀರ್ಣ ಕಾರಣಗಳಿವೆ

ಸಮಸ್ಯೆ ‘ಚಕ್ಕರ್’ ಮಾತ್ರ ಅಲ್ಲ

Published:
Updated:
Prajavani

ಶೈಕ್ಷಣಿಕ ಗುಣಮಟ್ಟ ಕುಸಿಯಲು ಶಾಲೆಗೆ ಶಿಕ್ಷಕರ ಚಕ್ಕರ್ ಪ್ರಮುಖ ಕಾರಣ ಎಂಬುದು ಶಿಕ್ಷಣ ಇಲಾಖೆ ಸಹಯೋಗದಲ್ಲೇ ನಡೆದಿರುವ ಸಮೀಕ್ಷೆಯ ಮುಖ್ಯಾಂಶ. ಆದರೆ ಗುಣಮಟ್ಟ ಕುಸಿತಕ್ಕೆ ಇದೂ ಒಂದು ಕಾರಣ ಇರಬಹುದಾದರೂ ಅದು ತೀರಾ ಗೌಣ.

ಎಲ್ಲಾ ಶಿಕ್ಷಕರೂ ಎಂದಿಗೂ ತಪ್ಪಿಸಿಕೊಳ್ಳದೆ ಶಾಲೆಗೆ ಹಾಜರಾಗಿಬಿಟ್ಟರೆ ಶಿಕ್ಷಣದ ಗುಣಮಟ್ಟ ಆಕಾಶಕ್ಕೇರುವುದಿಲ್ಲ. ಗುಣಮಟ್ಟದ ಶಿಕ್ಷಣವೆಂದರೇನು ಎಂಬುದು ನಮಗಿನ್ನೂ ಸ್ಪಷ್ಟವೇ ಆಗಿಲ್ಲದಿರುವುದು ಒಂದು ಅತಿ ಮುಖ್ಯ ಕಾರಣ. ಜೊತೆಗೆ ನಮ್ಮ ಅರಿವಿಗೇ ಬಾರದಿರುವ ಹಲವು ಸಂಕೀರ್ಣ ಕಾರಣಗಳೂ ಇವೆ.

ಹೌದು, ಕೇವಲ ಸಂಬಳ ಮತ್ತು ಆ ಮೂಲಕ ಜೀವನದಲ್ಲಿ ಭದ್ರತೆ ಎಂದುಕೊಳ್ಳುವ ಮನೋಧರ್ಮದ ಎಷ್ಟೋ ಶಿಕ್ಷಕರು ನಮ್ಮ ನಡುವೆ ಇದ್ದಾರೆ. ಸಂಬಳ ಹೆಚ್ಚುತ್ತದೆ ಎಂಬ ಒಂದೇ ಕಾರಣಕ್ಕೆ, ಅಡ್ಡದಾರಿ ಹಿಡಿದಾದರೂ ಪದವಿ ಪ್ರಮಾಣಪತ್ರ ಪಡೆದು ಹೈಸ್ಕೂಲು, ಕಾಲೇಜುಗಳಿಗೆ ಮೇಷ್ಟ್ರುಗಳಾಗಿ ಹೋಗಿರುವ ಮತ್ತು ಹೋಗಲು ಹಪಹಪಿಸುವ ಒಂದು ದೊಡ್ಡ ಗುಂಪೂ ಇದೆ ಮತ್ತು ಅವರು ನೀಡುವ ಮೊತ್ತಕ್ಕೆ ಅನುಸಾರವಾಗಿ ಬೇಕಾದ ಪ್ರಮಾಣಪತ್ರ ಒದಗಿಸಿಕೊಡುವ ಮಾಫಿಯಾಗಳೂ ಇವೆ. ಬೆಳಗಿನಿಂದ ಸಂಜೆಯವರೆಗೆ ಶಾಲೆಯಲ್ಲಿದ್ದೂ ಮಕ್ಕಳಿಗೆ ಪಾಠ ಹೇಳದೆ ಕೇವಲ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಮತ್ತು ಆಫೀಸು ರೂಮುಗಳಲ್ಲೇ ಕಾಡುಹರಟೆ ಹೊಡೆದು ಹೋಗುವ ಗುಂಪೂ ಇದೆ.

ನಿಮಿಷಕ್ಕೆ (ಗಮನಿಸಿ, ಶಾಲಾ ಅವಧಿಗೆ ಮಾತ್ರ ಸಂಬಳ ಎಂದುಕೊಂಡರೂ) ಅಂದಾಜು ₹5ರಿಂದ ₹8 ವೇತನ ಪಡೆದೂ ಶಾಲೆಯಲ್ಲಿ ಮಕ್ಕಳಿಗೆ ಏನೂ ಕಲಿಸದೆ ಸಮಯ ಕೊಲ್ಲುವ ಶಿಕ್ಷಕರು ಇದ್ದಾರೆ. ತಮ್ಮ ಮುಂದೆ ಕುಳಿತಿರುವ ಮಕ್ಕಳ ಪೋಷಕರೆಲ್ಲರ ಒಟ್ಟು ಆದಾಯ ನಿಮಿಷದ ಲೆಕ್ಕದಲ್ಲಿ ₹5ಕ್ಕಿಂತ ಎಷ್ಟೋ ಕಡಿಮೆ ಇರುತ್ತದೆ ಎಂಬ ಸಾಮಾನ್ಯ ಗ್ರಹಿಕೆಯೂ ಇಂತಹವರಿಗೆ ಇರುವುದಿಲ್ಲ. ನಾಡಿನ ಜನ ಕಟ್ಟುತ್ತಿರುವ ತೆರಿಗೆಯ ಒಂದು ಭಾಗವೇ ನಮಗೆ ವೇತನವಾಗಿ ಬರುತ್ತದೆ ಎಂಬ ತಿಳಿವಳಿಕೆ ಸಹ ಇರುವುದಿಲ್ಲ. ಸಮಾಜ ನೀಡಿದ್ದಕ್ಕೆ ಪ್ರತಿಯಾಗಿ ಏನನ್ನಾದರೂ ವಾಪಸ್‌ ನೀಡಿ ಋಣ ತೀರಿಸುವ ಅವಕಾಶ ಇದು ಎಂದು ಭಾವಿಸದ ಶಿಕ್ಷಕರು ಇಂತಹ ಅವ್ಯವಸ್ಥೆಗೆ ಕೊಡುಗೆ ನೀಡುತ್ತಿದ್ದಾರೆ.

ತರಗತಿ ಸಮಯದಲ್ಲಿ ತಮ್ಮ ಪಾಡಿಗೆ ತಾವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳುವುದರಲ್ಲೇ ಮುಳುಗಿಹೋಗಿರುವ ಅದೆಷ್ಟೋ ಶಿಕ್ಷಕರಿದ್ದಾರೆ. ಆರ್‌ಟಿಇಯಲ್ಲೇ ತಿಳಿಸಿರುವಂತೆ, ಮಕ್ಕಳಿಗೆ ಕಲಿಸುವ ಸಮಯ ಮಾತ್ರವಲ್ಲ ಕಲಿಸಲು ಸಿದ್ಧತೆಯ ಅವಧಿಯೂ (ಶಾಲಾ ಅವಧಿಯನ್ನು ಹೊರತುಪಡಿಸಿ) ನಮ್ಮ ಕರ್ತವ್ಯದ ಭಾಗ ಎಂಬ ಅತಿಮುಖ್ಯ ಅಂಶವೂ ಕೆಲವು ಶಿಕ್ಷಕರಿಗೆ ತಿಳಿದಿರುವುದಿಲ್ಲ. ಇಂದಿನ ಮಕ್ಕಳೆಲ್ಲರೂ ದಡ್ಡರು, ಅವಿಧೇಯರು ಎಂಬ ಹಣೆಪಟ್ಟಿ ಕಟ್ಟಿ ಅವರನ್ನು ತೀರಾ ನಿಕೃಷ್ಟವಾಗಿ ಕಾಣುವ ಮನಸ್ಥಿತಿ ಹಲವು ಶಿಕ್ಷಕರಲ್ಲಿದೆ. ಕಲಿಯುವ ಸಾಮರ್ಥ್ಯವೊಂದು ಮಕ್ಕಳ ಮನೋಲೋಕದಲ್ಲಿ ಚೂರುಚೂರಾಗೇ ಕಟ್ಟಿಕೊಳ್ಳುವ ಕ್ರಿಯೆಯನ್ನು ಗಮನಿಸಲಾರದ, ತಾಳ್ಮೆಯಿಲ್ಲದ ಶಿಕ್ಷಕರೂ ಶಿಕ್ಷಣ ಕ್ಷೇತ್ರದ ದುಃಸ್ಥಿತಿಗೆ ಕಾರಣ.

ಸಮಾಜ, ಶಿಕ್ಷಣ, ಪ್ರಗತಿಯ ಬಗ್ಗೆ ಒಂದು ಸಣ್ಣ ಒಳನೋಟ ಸಹ ಇಲ್ಲದ ಶಿಕ್ಷಕರೂ, ಶಿಕ್ಷಕರ ಸಂಘಗಳೂ ಇವೆ. ಮನೆಗೆ ಹತ್ತಿರವಿರಲಿ ಎಂಬ ಒಂದೇ ಉದ್ದೇಶದಿಂದ ಇಲಾಖೆಯಲ್ಲೇ ಬೇರೆ ಸ್ವರೂಪದ ಕೆಲಸಗಳಿಗೆ ಎಡತಾಕುವವರೂ ಇದ್ದಾರೆ. ಎಲ್ಲಾ ಶಿಕ್ಷಕರೂ ಶ್ರಮಜೀವಿಗಳು, ಸರ್ಕಾರದಿಂದ ಅವರಿಗೆ ಅನ್ಯಾಯವಾಗುತ್ತಿದೆ, ಸರ್ಕಾರದ ಹಲವು ಅನವಶ್ಯಕ ಯೋಜನೆಗಳಿಂದ ಶಿಕ್ಷಕರಿಗೆ ಬಿಡುವೇ ಇಲ್ಲದಂತಾಗಿದೆ ಎಂದೆಲ್ಲಾ ಕೆಲವರು ವಿತಂಡವಾದ ಮಂಡಿಸುತ್ತಾರೆ.

ಕೆಲವು ಅಧಿಕಾರಿಗಳು ಶಾಲೆಯ ಆಫೀಸ್ ರೂಮ್‌ಗಳಲ್ಲಿ ಕುಳಿತು, ಶಿಕ್ಷಕರು ನೀಡುವ ವರದಿಗಳನ್ನು ಮಾತ್ರ ನೋಡಿ ಸಹಿ ಮಾಡಿ ಹೋಗುವುದೂ ಇದೆ ಅಥವಾ ಅಲ್ಲೊಬ್ಬ ಇಲ್ಲೊಬ್ಬ ಹುಡುಗರನ್ನು ಮಾತ್ರ ಯಾವುದೋ ಒಂದು ಪ್ರಶ್ನೆ ಕೇಳಿ, ಇಡೀ ಶಾಲೆಯ ಕಲಿಕಾ ಮಟ್ಟವನ್ನು ನಿರ್ಧರಿಸಿಬಿಡುವುದೂ ಇದೆ. ಸಂಘಗಳಿಗೆ ಸೊಪ್ಪು ಹಾಕುತ್ತಾ ಶಾಲೆಗಳ ಪುನಶ್ಚೇತನ ನಿರ್ಧಾರಗಳನ್ನು, ಪ್ರಯತ್ನಗಳನ್ನು ಕೈ ಬಿಡುವ ಇಲಾಖೆಯ ವರ್ತನೆ ಸಹ ಖಂಡನೀಯ. 

ದೇಶದ ಪ್ರಜೆಗಳು ಎಂದರೆ, ವೋಟು ಹಾಕಲಿಕ್ಕಾಗಿ ಮಾತ್ರ ಇರುವ ಯಃಕಶ್ಚಿತ್ ಜೀವಿಗಳು ಎಂದು ಭಾವಿಸಿರುವ ಜನಪ್ರತಿನಿಧಿಗಳಿದ್ದಾರೆ. ಇವೆಲ್ಲವೂ ಒಂದರೊಳಗೊಂದು ಹೆಣೆದುಕೊಂಡು ಕಾರಣಗಳು ಗೋಜಲು ಗೋಜಲಾಗಿವೆ. ಎಲ್ಲವೂ, ಎಲ್ಲರೂ ಕಾರಣವಾಗಿದ್ದರೂ ಕೇವಲ ‘ಚಕ್ಕರ್’ ಹೊಡೆಯುವ ಶಿಕ್ಷಕರನ್ನು ಹೊಣೆಗಾರರನ್ನಾಗಿ ಮಾಡುವುದೆಂದರೆ ಅಸಲೀ ಕಾರಣಗಳನ್ನು, ಕಾರಣಕರ್ತರನ್ನು ಮರೆಮಾಚಿದಂತೆಯೇ ಸರಿ.

ಶಿಕ್ಷಕರಲ್ಲಿ ಬದ್ಧತೆ ಮೂಡಿಸಲು ತರಬೇತಿಗಳನ್ನು ನೀಡಬೇಕೆನ್ನುವುದು ಮತ್ತೊಂದು ತಮಾಷೆಯ ಸಂಗತಿ. ಬದ್ಧತೆ ಎನ್ನುವುದು ತರಬೇತಿಯಿಂದ ಬರುವಂತಹುದಲ್ಲ ಎಂಬುದು ವಾಸ್ತವ. ಮೀನುಗಳಿಗೆ ಈಜಿನ ತರಬೇತಿ ನೀಡಬೇಕಿಲ್ಲ. ಅವು ತರಬೇತಿ ಬಯಸುತ್ತಿವೆ ಎಂದಾದರೆ ಅವು ಮೀನುಗಳೇ ಅಲ್ಲ. ಮೀನುಗಳ ವೇಷದಲ್ಲಿರುವ ಉಪದ್ರವಕಾರಿ ಕೀಟಗಳಾಗಿರುತ್ತವೆ ಅಷ್ಟೆ. ಮೀನುಗಳ ಸಂತತಿ ಉಳಿಯಬೇಕಾದರೆ ಆ ಕೀಟಗಳನ್ನು ನೀರಿನಿಂದ ಎತ್ತಿ ಹೊರಗೆ ಒಗೆಯಬೇಕು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !