ಬಿಡಿಎ ಅಧಿಕಾರಿಗಳಿಗೆ ₹ 17 ಲಕ್ಷ ದಂಡ: ಹೈಕೋರ್ಟ್‌ ಆದೇಶ

ಬುಧವಾರ, ಮಾರ್ಚ್ 20, 2019
23 °C

ಬಿಡಿಎ ಅಧಿಕಾರಿಗಳಿಗೆ ₹ 17 ಲಕ್ಷ ದಂಡ: ಹೈಕೋರ್ಟ್‌ ಆದೇಶ

Published:
Updated:

ಬೆಂಗಳೂರು: ‘ಬಡಾವಣೆ ಅಭಿವೃದ್ಧಿಗಾಗಿ ಜಮೀನು ನೀಡಿ ಹದಿನಾರು ವರ್ಷ ಕಳೆದರೂ ಸೂಕ್ತ ಪರಿಹಾರ ನೀಡಿಲ್ಲ ಎಂದು ಆಕ್ಷೇಪಿಸಿರುವ ಪ್ರಕರಣದಲ್ಲಿ ತಪ್ಪೆಸಗಿದ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳು ₹ 17 ಲಕ್ಷ ದಂಡ ಪಾವತಿಸಬೇಕು’ ಎಂದು ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ನಗರದ ಪಿ.ಜಿ.ಬೆಳ್ಳಿಯಪ್ಪ ಎಂಬ ಹಿರಿಯ ನಾಗರಿಕರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ.

ಪ್ರಕರಣವೇನು? : ಬನಶಂಕರಿ ಬಡಾವಣೆಯ 6ನೇ ಹಂತದ ಅಭಿವೃದ್ಧಿಗೆ ಬಿಡಿಎ 2002ರಲ್ಲಿ ಅರ್ಜಿದಾರರ 63,162 ಚದರ ಅಡಿ ಜಮೀನು ವಶಪಡಿಸಿಕೊಂಡಿತ್ತು. ಇದಕ್ಕೆ ಪರಿಹಾರವಾಗಿ ವಶಪಡಿಸಿಕೊಂಡ ಜಮೀನನಲ್ಲಿ ಅರ್ಧದಷ್ಟನ್ನು ಬಡಾವಣೆ ಅಭಿವೃದ್ಧಿ ಪಡಿಸಿದ ನಂತರ ನೀಡುವುದಾಗಿ ನಿರ್ಣಯ ಸ್ವೀಕರಿಸಿತ್ತು.

ಆದರೆ, ‘ಈ ತನಕ ಈ ನಿರ್ಣಯಕ್ಕೆ ಬದ್ಧವಾಗಿ ಬಿಡಿಎ ನಡೆದುಕೊಂಡಿಲ್ಲ ಮತ್ತು ನನಗೆ ಸೂಕ್ತ ಪರಿಹಾರ ನೀಡಿಲ್ಲ’ ಎಂದು ಆಕ್ಷೇಪಿಸಿ ಬೆಳ್ಳಿಯಪ್ಪ ಹೈಕೋರ್ಟ್‌ ಮೊರೆ ಹೊಕ್ಕಿದ್ದರು.

ಅರ್ಜಿ ವಿಚಾರಣೆ ಪೂರೈಸಿ ಗುರುವಾರ ಆದೇಶ ನೀಡಿರುವ ನ್ಯಾಯಪೀಠ, ‘ಬಿಡಿಎ, ಅರ್ಜಿದಾರರಿಗೆ 31,613 ಚದರ ಅಡಿ ಜಮೀನನ್ನು ಅದೇ ಬಡಾವಣೆಯಲ್ಲಿ ನೀಡಬೇಕು. ಇಲ್ಲವೇ ಅಭಿವೃದ್ಧಿ ಹೊಂದಿದ ಹತ್ತಿರದ ಬಡಾವಣೆಯಲ್ಲಿ ಈ ಅಳತೆಯ ಜಮೀನಿನ ಮಾರುಕಟ್ಟೆ ದರಕ್ಕೆ ಸಮವಾಗಿ ಪರ್ಯಾಯ ರೂಪದಲ್ಲಿ ನೀಡಬೇಕು’ ಎಂದು ಆದೇಶಿಸಿದೆ.

‘ಇದೇ ವೇಳೆ ಅರ್ಜಿದಾರರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಿ ನಷ್ಟ ಎಸಗಿದ ಅಧಿಕಾರಿಗಳು ವರ್ಷವೊಂದಕ್ಕೆ ₹ 1 ಲಕ್ಷದಂತೆ ಪರಿಹಾರ ನೀಡಬೇಕು. ಈ ಅಧಿಕಾರಿಗಳ ಸೇವಾ ದಾಖಲೆಗಳಲ್ಲಿ ಇವರ ಕರ್ತವ್ಯ ಲೋಪವನ್ನು ನಮೂದು ಮಾಡಬೇಕು’ ಎಂದು ಆದೇಶದಲ್ಲಿ ತಾಕೀತು ಮಾಡಲಾಗಿದೆ.

 

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !