ಕಪ್ಪು ಚುಕ್ಕೆ ಇಲ್ಲದ ಆಡಳಿತ

ಮಂಗಳವಾರ, ಮಾರ್ಚ್ 26, 2019
31 °C
ಬಿಜೆಪಿ ವತಿಯಿಂದ ನಗರದಲ್ಲಿ ‘ಕಮಲ ಸಂಕಲ್ಪ’ ಬೈಕ್ ರ್‍ಯಾಲಿ

ಕಪ್ಪು ಚುಕ್ಕೆ ಇಲ್ಲದ ಆಡಳಿತ

Published:
Updated:
Prajavani

ಚಿಕ್ಕಬಳ್ಳಾಪುರ: ‘ಅನೇಕ ದಶಕಗಳ ಕಾಲ ದೇಶದ ಆಡಳಿತ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಬಡ ಜನರ ನೋವಿಗೆ ಸ್ಪಂದಿಸಲಿಲ್ಲ. ಬದಲಿಗೆ ಭ್ರಷ್ಟಾಚಾರದಲ್ಲಿ ಮುಳುಗಿ ತಮ್ಮ ಸ್ವಾರ್ಥ ಆಡಳಿತ ನಡೆಸಿತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನಡೆಸಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಡಾ ಜಿ.ವಿ.ಮಂಜುನಾಥ್ ಹೇಳಿದರು.

ನಗರದಲ್ಲಿ ಶನಿವಾರ ಬಿಜೆಪಿ ವತಿಯಿಂದ ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಸಾಧನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ‘ಕಮಲ ಸಂಕಲ್ಪ’ ಬೈಕ್ ರ್‍ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಸಂಸತ್ ಪ್ರವೇಶ ಮಾಡುವಾಗ ಕೇಂದ್ರ ಸರ್ಕಾರ ಬಡವರ ಪರವಾಗಿರುವ ಸರ್ಕಾರ ಎಂದು ಹೇಳಿದ್ದರು. ಅದು ಸತ್ಯವಾಗಿದೆ. ಇವತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶ ಗುರುತಿಸಿಕೊಳ್ಳುತ್ತಿರುವುದಕ್ಕೆ ಮೋದಿ ಅವರೇ ಕಾರಣ’ ಎಂದು ಅಭಿಪ್ರಾಯಪಟ್ಟರು.

‘ಕೇಂದ್ರ ಸರ್ಕಾರ ಕಳೆದ ಐದು ವರ್ಷದಲ್ಲಿ 10 ಕೋಟಿ ಶೌಚಲಯಗಳನ್ನು ನಿರ್ಮಿಸಿದೆ. 3,60 ಲಕ್ಷ ಗ್ರಾಮ ಪಂಚಾಯಿತಿಗಳಲ್ಲಿ ಇಂಟರ್ ನೆಟ್ ಸೇವೆಯನ್ನು ಕಲ್ಪಿಸಿದೆ. ಬಡಜನರಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ವಿತರಿಸಿದೆ. ಸ್ವಚ್ಛ ಭಾರತ ಕಾರ್ಯಕ್ರಮಗಳಂತಹ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದೆ’ ಎಂದು ತಿಳಿಸಿದರು.

‘ಬಿಜೆಪಿಗೆ ಮಾತ್ರ ದೇಶದ ಬಗ್ಗೆ ಕಾಳಜಿ ಇದೆ. ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಜಾರಿ ತಂದಿರುವ ಯೋಜನೆಗಳು, ಕಾರ್ಯಕ್ರಮಗಳ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸಲು ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ . ಕಾರ್ಯಕರ್ತರು ಮುಂಬರುವ ಲೋಕಸಸಭೆ ಚುನಾವಣೆಯಲ್ಲಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಸಂಘಟಿತರಾಗಿ, ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಶ್ರಮಿಸಬೇಕು’ ಎಂದರು.

‘ಕಾಂಗ್ರೆಸ್ ಆಡಳಿತದಲ್ಲಿ ಗಡಿ ಕಾಯುವ ಯೋಧರ ಬಗ್ಗೆ ಹೆಚ್ಚು ಕಾಳಜಿ ಇರಲಿಲ್ಲ. ಇವತ್ತು ಮೋದಿ ಸರ್ಕಾರ ಯೋಧರನ್ನು ಆತ್ಮೀಯವಾಗಿ ಗೌರವಿಸುತ್ತಿದೆ. ನಮ್ಮ ದೇಶದ ಮೇಲೆ ಶಕ್ತಿ ಪ್ರದರ್ಶಿಸುವ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ಹೆದರಿಕೆ ಹುಟ್ಟಿಸುವಂತೆ ಮಾಡಿದ್ದಾರೆ’ ಎಂದು ಹೇಳಿದರು.

ನಗರದ ಮರಳುಸಿದ್ದೇಶ್ವರ ದೇವಾಲಯದಿಂದ ಆರಂಭವಾದ ರ್‍ಯಾಲಿ ಎಂ.ಜಿ ರಸ್ತೆಯ ಮಾರ್ಗವಾಗಿ ವಾಪಸಂದ್ರ, ಶಿಡ್ಲಘಟ್ಟ ಸರ್ಕಲ್, ಬಜಾರ್ ರಸ್ತೆ, ಕಂದವಾರ ಬಾಗಿಲು ಮಾರ್ಗವಾಗಿ ನಂದಿ, ಕಳವಾರ, ಮುದ್ದೇನಹಳ್ಳಿ, ಅಗಲಗುರ್ಕಿ ವರೆಗೆ ನಡೆಯಿತು.

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಸುಬ್ಬರಾಜು, ತಾಲ್ಲೂಕು ಘಟಕ ಅಧ್ಯಕ್ಷ ಅಗಲಗುರ್ಕಿ ಚಂದ್ರಶೇಖರ್, ನಗರ ಘಟಕದ ಅಧ್ಯಕ್ಷ ಎನ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್, ಎಸ್ಸಿ ಮೋರ್ಚಾದ ಜಿಲ್ಲಾ ಘಟಕ ಅಧ್ಯಕ್ಷ ಹನುಮಂತಪ್ಪ, ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ರಾಮಣ್ಣ, ಯುವ ಮೋರ್ಚಾ ಮಂಡಲ ಅಧ್ಯಕ್ಷ ಮಂಜುನಾಥ್, ಜಿಲ್ಲಾ ವಕ್ತಾರ ಎಚ್.ಕೆ.ಲಕ್ಷ್ಮೀಪತಿ, ಯುವ ಮೋರ್ಚಾ ನಗರ ಅಧ್ಯಕ್ಷ ಮಧುಚಂದ್ರ ಮುಖಂಡರಾದ ಪವನ್ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !