ಏಕದಿನ ಕ್ರಿಕೆಟ್ ಪಂದ್ಯ: ಭಾರತಕ್ಕೆ ಜಯದ ಸಿಹಿ ತಂದ ಕೇದಾರ್–ಮಹಿ

ಭಾನುವಾರ, ಮಾರ್ಚ್ 24, 2019
27 °C
ಸರಣಿಯಲ್ಲಿ 1–0 ಮುನ್ನಡೆ

ಏಕದಿನ ಕ್ರಿಕೆಟ್ ಪಂದ್ಯ: ಭಾರತಕ್ಕೆ ಜಯದ ಸಿಹಿ ತಂದ ಕೇದಾರ್–ಮಹಿ

Published:
Updated:

ಹೈದರಾಬಾದ್: ವಿದ್ಯುತ್ ಹರಿಯುವ ತಂತಿಗೆ ಸಿಲುಕಿದ ಗಾಳಿಪಟವನ್ನು ಸುರಕ್ಷಿತವಾಗಿ ತೆಗೆಯುವ ಮಾದರಿಯಲ್ಲಿಯೇ ಮಹೇಂದ್ರಸಿಂಗ್ ಧೋನಿ ಮತ್ತು ಕೇದಾರ್ ಜಾಧವ್ ಅವರು ಶನಿವಾರ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು.

ರಾಜೀವಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ತಂಡವು ನೀಡಿದ್ದ 236 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು ಆರಂಭದಲ್ಲಿ ಎಡವಿತು. ಆದರೆ,  ‘ಫಿನಿಷರ್’ ಧೋನಿ (ಅಜೇಯ 59) ಮತ್ತು ‘ಆಲ್‌ರೌಂಡರ್‌’ ಕೇದಾರ್ ಜಾಧವ್ (ಅಜೇಯ 81) ಮುರಿಯದ ಐದನೇ ವಿಕೆಟ್ ಜೊತೆಯಾಟದಲ್ಲಿ ಸೇರಿಸಿದ 141 ರನ್‌ಗಳ ನೆರವಿನಿಂದ ತಂಡವು  ಆರು ವಿಕೆಟ್‌ಗಳಿಂದ ಜಯಿಸಿತು. ಐದು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆಯೊಂದಿಗೆ ಶುಭಾರಂಭ ಮಾಡಿತು.  

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ  ಆಸ್ಟ್ರೇಲಿಯಾ ತಂಡವನ್ನು  50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 236 ರನ್‌ಗಳ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ  ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ ಮತ್ತು ಸ್ಪಿನ್ನರ್ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಯಶಸ್ವಿಯಾದರು. ಮೂವರು ಬೌಲರ್‌ಗಳೂ ತಲಾ ಎರಡು ವಿಕೆಟ್ ಕಬಳಿಸಿದರು. ಆದರೆ ಈ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡವು ಜಯಿಸಲು ಬಹಳಷ್ಟು ಪ್ರಯಾಸಪಡಬೇಕಾಯಿತು.

ಎರಡನೇ ಓವರ್‌ನಲ್ಲಿ ಶಿಖರ್ ಧವನ್ ಔಟಾದ ಮೇಲೆ ರೋಹಿತ್ ಶರ್ಮಾ (37 ರನ್) ಮತ್ತು ವಿರಾಟ್ ಕೊಹ್ಲಿ (44) ಎರಡನೇ ವಿಕೆಟ್‌ಗೆ 76 ರನ್‌ಗಳನ್ನು ಸೇರಿಸಿದರು. ಅರ್ಧಶತಕದ ಸನಿಹ ಸಾಗಿದ್ದ ಕೊಹ್ಲಿಯನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ ಸ್ಪಿನ್ನರ್ ಆ್ಯಡಂ ಜಂಪಾ ಖುಷಿಯಲ್ಲಿ ತೇಲಿದರು. ಇದಾಗಿ ನಾಲ್ಕು ಓವರ್‌ಗಳ ನಂತರ ರೋಹಿತ್ ಕೆಟ್ಟ ಹೊಡೆತವಾಡಿ ಆ್ಯರನ್‌ ಫಿಂಚ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.

ಕ್ರೀಸ್‌ನಲ್ಲಿದ್ದ ಅಂಬಟಿ ರಾಯುಡು ಅವರೊಂದಿಗೆ ಸೇರಿದ ಮಹೇಂದ್ರಸಿಂಗ್ ಧೋನಿ ತಾಳ್ಮೆಯಿಂದ ಇನಿಂಗ್ಸ್ ಕಟ್ಟುವತ್ತ ಹೆಜ್ಜೆ ಇಟ್ಟರು.

ಆದರೆ, ಪಿಚ್‌ ನಲ್ಲಿದ್ದ ಸತ್ವವನ್ನು ಬಳಸಿಕೊಂಡು ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದ ಸ್ಪಿನ್ನರ್ ಆ್ಯಡಂ ಜಂಪಾ  ಎದುರು ಅಂಬಟಿ ಲಯ ಕಂಡುಕೊಳ್ಳಲು ಪರದಾಡಿದರು. ಕೊನೆಗೂ ಅವರ ಎಸೆತವೊಂದು ರಾಯುಡು ಬ್ಯಾಟ್ ಅಂಚು ಸವರಿ ವಿಕೆಟ್‌ಕೀಪರ್ ಅಲೆಕ್ಸ್‌ ಕ್ಯಾರಿ ಕೈಗವಸು ಸೇರಿತು.  ಆಗ ಸ್ಕೋರ್‌ಬೋರ್ಡ್‌ನಲ್ಲಿ 23.3 ಓವರ್‌ಗಳಲ್ಲಿ 4ಕ್ಕೆ99 ಸ್ಕೋರ್ ಮಿನುಗುತ್ತಿತ್ತು. ಕ್ರೀಡಾಂಗಣದಲ್ಲಿ ಸೇರಿದ್ದ ಭಾರತದ ಅಭಿಮಾನಿಗಳು ತಲೆಮೇಲೆ ಕೈಹೊತ್ತು ಕೂತರು.

ಕೇದಾರ್ ಆತ್ಮವಿಶ್ವಾಸ; ಮಹಿ ತಾಳ್ಮೆ

ತಣ್ಣನೆಯ ಸ್ವಭಾವದ  ಧೋನಿಯೊಂದಿಗೆ ಸೇರಿದ 33 ವರ್ಷದ ಕೇದಾರ್ ಜಾಧವ್ ತಂಡದ ಚಿಂತೆ ದೂರ ಮಾಡಿದರು. ಆತ್ಮವಿಶ್ವಾಸದಿಂದ ಆಡಿದರು. ಆದರೆ ವಿಕೆಟ್‌ ಬೀಳದಂತೆ ನೋಡಿಕೊಳ್ಳುವ ಒತ್ತಡ ಇವರಿಬ್ಬರ ಮೇಲೆಯೂ ಇತ್ತು. ಆದ್ದರಿಂದ ಹೆಚ್ಚು ಅವಸರ ಪಡದೇ ಎಸೆತಗಳನ್ನು ಎಚ್ಚರಿಕೆಯಿಂದ ಎದುರಿಸಿದರು. ಇದರಿಂದಾಗಿ ಗೆಲುವಿಗೆ ಅಗತ್ಯವಾದ ರನ್‌ಗಳು ಮತ್ತು ಎದುರಿಸಬೇಕಾದ ಎಸೆತಗಳ ಅಂತರ ಒಂದು ಅಥವಾ ಎರಡು ಎಸೆತಗಳಷ್ಟೇ ಇತ್ತು. 33ನೇ ಓವರ್‌ನಿಂದಲೇ ಈ ಪರಿಸ್ಥಿತಿ ಇತ್ತು.

 ಆದರೂ ಪುಣೆಯ ಕೇದಾರ್ ಆವರು ಧೋನಿಗಿಂತ ಹೆಚ್ಚು ವೇಗವಾಗಿ ರನ್‌ ಗಳಿಸಿದರು. ಅವರಿಗಿಂತ ಮೊದಲೇ ಅರ್ಧಶತಕದ ಗಡಿ ಮುಟ್ಟಿದರು. ಧೋನಿ ಕೂಡ ಕೇದಾರ್‌ ಸ್ಟ್ರೈಕ್ ಮಾಡಲು ಹೆಚ್ಚು ಅವಕಾಶ ಕೊಟ್ಟರು.  ಒಂದು ಮತ್ತು ಎರಡು ರನ್‌ಗಳನ್ನು ಚುರುಕಾಗಿ ಓಡಿ ಫೀಲ್ಡರ್‌ಗಳ ಮೇಲೆ ಒತ್ತಡ ಹೆಚ್ಚಿಸಿದರು.

ಇನಿಂಗ್ಸ್‌ ನಡುವೆ ತೊಡೆಯ ಸ್ನಾಯುಸೆಳೆತ ಅನುಭವಿಸಿದ ಧೋನಿ ತಂಡದ ಫಿಸಿಯೊ ಫರ್ಹಾಟ್ ಅವರಿಂದ ಚಿಕಿತ್ಸೆ ಪಡೆದು ಆಟ ಮುಂದುವರಿಸಿದರು. ಕೊನೆಯ ಮೂರು ಓವರ್‌ಗಳಲ್ಲಿ 16 ರನ್‌ಗಳ ಅಗತ್ಯವಿತ್ತು. 48ನೇ ಓವರ್‌ನ ಮೊದಲ ಎಸೆತದಲ್ಲಿ ಧೋನಿ ಒಂದು ರನ್ ಗಳಿಸಿ ಅರ್ಧಶತಕದ ಗಡಿ ಮುಟ್ಟಿದರು.  ನಂತರದ ಎಸೆತದಲ್ಲಿ ಜಾಧವ್ ಒಂದು, ನಾಲ್ಕನೇ ಎಸೆತದಲ್ಲಿ ಧೋನಿ ಒಂದು ರನ್ ಗಳಿಸಿದರು. ಐದನೇ ಎಸೆತದಲ್ಲಿ ಎರಡು ರನ್ ಹೊಡೆದ ಜಾಧವ್, ಆರನೇ ಎಸೆತವನ್ನು  ಸಿಕ್ಸರ್‌ಗೆ ಎತ್ತಿದರು. ಕೊನೆಯ ಎರಡು ಓವರ್‌ಗಳಲ್ಲಿ ಗೆಲುವಿಗೆ ಐದು ರನ್‌ಗಳ ಅಗತ್ಯ ಮಾತ್ರ ಇತ್ತು. ಡಗ್‌ಔಟ್‌ನಲ್ಲಿದ್ದ ಕೊಹ್ಲಿ ಬಳಗವು ಎದ್ದು ನಿಂತು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಓವರ್‌ನ ಮೊದಲ ಎರಡೂ ಎಸೆತಗಳನ್ನು ಧೋನಿ ಬೌಂಡರಿಗೆರೆ ದಾಟಿಸಿದರು.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 2

  Frustrated
 • 2

  Angry

Comments:

0 comments

Write the first review for this !