ಲಾಹೋರ್ ದಾಳಿಗೆ ಒಂದು ದಶಕ

ಮಂಗಳವಾರ, ಮಾರ್ಚ್ 26, 2019
31 °C
ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ದಾಳಿ ಮಾಡಿದ್ದ ಭಯೋತ್ಪಾದಕರು

ಲಾಹೋರ್ ದಾಳಿಗೆ ಒಂದು ದಶಕ

Published:
Updated:

ಲಾಹೋರ್ : ಕ್ರಿಕೆಟ್ ಅಂಪೈರ್ ಎಹಸಾನ್ ರಝಾ ಅವರು ಹತ್ತು ವರ್ಷಗಳ ಹಿಂದಿನ ಆ ಘಟನೆಯನ್ನು ನೆನಪಿಸಿಕೊಂಡಾಗಲೆಲ್ಲ ಬೆಚ್ಚಿಬೀಳುತ್ತಾರೆ. ದುಃಖದ ಛಾಯೆ ಅವರ ಮನಸ್ಸನ್ನು ಆವರಿಸುತ್ತದೆ.

ದಶಕದ ಹಿಂದೆ ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡವು ಮೈದಾನಕ್ಕೆ ತೆರಳುತ್ತಿದ್ದ ಬಸ್‌ ಮೇಲೆ ನಡೆದ ಭಯೋತ್ಪಾದನಾ ದಾಳಿಯಲ್ಲಿ ಎಹಸಾನ್ ಗಾಯಗೊಂಡಿದ್ದರು. ಆ ಪಂದ್ಯದಲ್ಲಿ ಕಾಯ್ದಿಟ್ಟ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಬಸ್‌ ಹಿಂದೆ ಸಾಗುತ್ತಿದ್ದ ಕಾರಿನಲ್ಲಿದ್ದರು. ಅವರ ಶ್ವಾಸಕೋಶಕ್ಕೆ ಎರಡು ಗುಂಡುಗಳು ಹೊಕ್ಕಿದ್ದವು. ಕೋಮಾಕ್ಕೆ ಜಾರಿದ್ದ ಅವರು ಹಲವು ದಿನಗಳ ನಂತರ ಚೇತರಿಸಿಕೊಂಡಿದ್ದರು. ಘಟನೆಯ ಆರು ತಿಂಗಳ ನಂತರ ಅವರು ನಡೆದಾಡಲು ಆರಂಭಿಸಿದ್ದರು. ಆ ಘಟನೆಯಲ್ಲಿ ಎಂಟು ಜನ ಪೊಲೀಸರು ಸೇರಿದಂತೆ ಹತ್ತು ಮಂದಿ ಸತ್ತಿದ್ದರು. ಆರು ಜನ ಗಾಯಗೊಂಡಿದ್ದರು.

‘ ಆ ಘಟನೆಯನ್ನು ನನ್ನ ಬದುಕನ್ನು ಛಿದ್ರಗೊಳಿಸಿತ್ತು. ಅಷ್ಟೇ ಅಲ್ಲ ಪಾಕಿಸ್ತಾನದ ಕ್ರಿಕೆಟ್‌ ಮೇಲೂ ಕರಾಳ ಛಾಯೆ ಆವರಿಸುವಂತೆ ಮಾಡಿತು’ ಎಂದು ಎಹಸಾನ್ ಬೇಸರವ್ಯಕ್ತಪಡಿಸುತ್ತಾರೆ.

ಆ ಘಟನೆಯ ನಂತರ  ಬಹುತೇಕ ಎಲ್ಲ ದೇಶಗಳ ಕ್ರಿಕೆಟ್‌ ತಂಡಗಳು ಪಾಕ್‌ನಲ್ಲಿ ಕ್ರಿಕೆಟ್ ಆಡಲು ನಿರಾಕರಿಸಿದ್ದವು. ಇಂದಿಗೂ ಪರಿಸ್ಥಿತಿ ಬದಲಾಗಿಲ್ಲ.

 ‘ಆ ದುರ್ಘಟನೆಯನ್ನು ನೆನಪು ಮಾಡದಂತೆ ನಾನು ಹಲವರಲ್ಲಿ ಪದೇ ಪದೇ ವಿನಂತಿಸುತ್ತೇನೆ. ನನ್ನ ದೇಹದ ಗಾಯಗಳು ಗುಣಮುಖವಾಗಿವೆ. ಆದರೆ, ಮನಸ್ಸಿನಲ್ಲಿ ಅಚ್ಚೊತ್ತಿರುವ ಆ ಕರಾಳ ಘಟನೆ ಇನ್ನೂ ಮಾಸಿಲ್ಲ’ ಎಂದು ಎಹಸಾನ್ ಹೇಳುತ್ತಾರೆ.

ದಾಳಿಯ ನಂತರ ಆರು ವರ್ಷಗಳವರೆಗೆ ಪಾಕಿಸ್ತಾನವು ತನ್ನ ನೆಲದಲ್ಲಿ ಯಾವುದೇ ಟೂರ್ನಿಯನ್ನು ಆಯೋಜಿಸಿರಲಿಲ್ಲ.2015ರಲ್ಲಿ ಜಿಂಬಾಬ್ವೆ ತಂಡವು ಪಾಕ್‌ ಪ್ರವಾಸ ಕೈಗೊಂಡಿತ್ತು.

ಆದರೆ,ಪಾಕ್‌ನಲ್ಲಿ ಭಯೋತ್ಪಾದನೆ ದಾಳಿಗಳ ಹಿನ್ನೆಲೆಯಲ್ಲಿ  ಪ್ರಮುಖ ತಂಡಗಳು ಪ್ರವಾಸ ಮಾಡಲು ನಿರಾಕರಿಸಿದ್ದವು. ಆದ್ದರಿಂದ  ಪಾಕಿಸ್ತಾನ ಕ್ರಿಕೆಟ್ ತಂಡವು ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ)ಯನ್ನು ತನ್ನ ತವರನ್ನಾಗಿ ಮಾಡಿಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !