ಕಾಂಗ್ರೆಸ್‌ಗೆ ಭಯೋತ್ಪಾದಕರದ್ದೇ ಚಿಂತೆ: ಕೋಟ ಶ್ರೀನಿವಾಸ ಪೂಜಾರಿ

ಶನಿವಾರ, ಮಾರ್ಚ್ 23, 2019
21 °C

ಕಾಂಗ್ರೆಸ್‌ಗೆ ಭಯೋತ್ಪಾದಕರದ್ದೇ ಚಿಂತೆ: ಕೋಟ ಶ್ರೀನಿವಾಸ ಪೂಜಾರಿ

Published:
Updated:
Prajavani

ಮಂಗಳೂರು: ‘ಬಿಜೆಪಿಗೆ ದೇಶ ಮತ್ತು ನಮ್ಮ ಸೈನಿಕರ ಚಿಂತೆ. ಆದರೆ, ಕಾಂಗ್ರೆಸ್ ಪಕ್ಷಕ್ಕೆ ಯಾವಾಗಲೂ ಭಯೋತ್ಪಾದಕರ ಚಿಂತೆ' ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದರು.

ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಗೆ ಸೀಟಿನ ಚಿಂತೆ ಎಂದು ಸಚಿವ ಯು.ಟಿ.ಖಾದರ್ ಟೀಕಿಸಿದ್ದರು. ಅದು ಸತ್ಯವಲ್ಲ. ಬಿಜೆಪಿ ಯಾವಾಗಲೂ ದೇಶ ಮತ್ತು ಸೈನಿಕರ ಬಗ್ಗೆ ಚಿಂತಿಸುತ್ತದೆ' ಎಂದರು.

ಭಯೋತ್ಪಾದನಾ ತರಬೇತಿ ಶಿಬಿರದ ಮೇಲೆ ದಾಳಿ ನಡೆಸಿರುವುದನ್ನು ಉಗ್ರ ಮಸೂದ್ ಅಜರ್ ನ ಸಹೋದರನೇ ಖಚಿತಪಡಿಸಿದ್ದಾನೆ. ಆದರೆ, ಮಹಾಘಟಬಂಧನದ ಕೆಲವು ಮುಖಂಡರು ಮತ್ತು ಭಾರತದ ಕೆಲವು ಬುದ್ಧಿಜೀವಿಗಳು ಸಾಕ್ಷ್ಯ ಕೇಳುತ್ತಿದ್ದಾರೆ. ಜಗತ್ತಿನ ಯಾವ ರಾಷ್ಟ್ರವೂ ಪಾಕಿಸ್ತಾನವನ್ನು ಬೆಂಬಲಿಸುತ್ತಿಲ್ಲ. ಮಹಾಘಟಬಂಧನದ ಮುಖಂಡರು ಮತ್ತು ಬುದ್ಧಿಜೀವಿಗಳೇ ಪಾಕಿಸ್ತಾನಕ್ಕೆ ಆಸರೆ ಎಂದರು.

ಭಯೋತ್ಪಾದಕರ ಮೇಲೆ ಭಾರತದ ವಾಯುಸೇನೆ ದಾಳಿ ನಡೆಸಿದಾಗ ಸಂಭ್ರಮಾಚರಣೆ ಮಾಡದಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿರುವುದು ಖಂಡನೀಯ. ಆ ಹೇಳಿಕೆಯನ್ನು ಅವರು ವಾಪಸು ಪಡೆಯಬೇಕು ಎಂದು ಆಗ್ರಹಿಸಿದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಭಯೋತ್ಪಾದಕರ ಮೇಲಿನ ವಾಯು ದಾಳಿಯಂತಹ ಕಠಿಣ ನಿರ್ಧಾರಗಳ ಕಾರಣಕ್ಕೆ ಜನರು ಮತ್ತೆ ಪ್ರಧಾನಿಯವರನ್ನು ಬೆಂಬಲಿಸುತ್ತಾರೆ ಎಂದು ಹೇಳಿದ್ದರು. ಅದನ್ನು ತಪ್ಪಾಗಿ ಬಿಂಬಿಸಲಾಗಿದೆ. ಅವರ ಹೇಳಿಕೆ ಸಹಜವಾಗಿಯೇ ಇತ್ತು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರತಿಭಟನೆಯ ಎಚ್ಚರಿಕೆ: ಕೇಂದ್ರ ಸರ್ಕಾರದ ಕೃಷಿ ಸಮ್ಮಾನ್ ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಆಸಕ್ತಿ ತೋರುತ್ತಿಲ್ಲ. ರಾಜ್ಯದಲ್ಲಿ 76 ಲಕ್ಷ ಫಲಾನುಭವಿಗಳಿದ್ದಾರೆ. ಆದರೆ, ಈವರೆಗೆ 16 ಲಕ್ಷ ಜನರಿಂದ ಮಾತ್ರ ಅರ್ಜಿ ಸ್ವೀಕರಿಸಲಾಗಿದೆ. ಅಟಲ್‌ ಜೀ ಜನಸ್ನೇಹಿ ಕೇಂದ್ರಗಳು ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಸುಧಾರಿಸದಿದ್ದರೆ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ಅಳವಡಿಸಿದ 16,000 ಶುದ್ಧ ಕುಡಿಯುವ ನೀರಿನ ಘಟಕಗಳು ಈಗ ಕೆಲಸ ಮಾಡುತ್ತಿಲ್ಲ. ಕೆಲವು ಘಟಕಗಳಿಗೆ ₹ 3.5 ಲಕ್ಷ ವೆಚ್ಚ ಮಾಡಿದ್ದರೆ, ಕೆಲವಕ್ಕೆ ₹ 9.5 ಲಕ್ಷ ವೆಚ್ಚ ಮಾಡಲಾಗಿದೆ. ₹ 1,000 ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿದೆ. ತನಿಖೆಗೆ ಸದನ ಸಮಿತಿ ರಚಿಸಲು ಸರ್ಕಾರ ಒಪ್ಪಿಲ್ಲ. ಬಿಜೆಪಿಯಿಂದಲೇ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಶ್ರೀನಿವಾಸ ಪೂಜಾರಿ ತಿಳಿಸಿದರು.

ಉದ್ಘಾಟನೆಗೆ ಸೀಮಿತ: ಈ ಸರ್ಕಾರ ಮತ್ತಷ್ಟು ಹೊಸ ತಾಲ್ಲೂಕುಗಳ ರಚನೆಯನ್ನು ಘೋಷಿಸಿದೆ. ಹಿಂದಿನ ವರ್ಷ ಘೋಷಿಸಿದ್ದ ತಾಲ್ಲೂಕುಗಳ ರಚನೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಹೊಸ ತಾಲ್ಲೂಕುಗಳಿಗೆ ಸರ್ಕಾರಿ ಕಚೇರಿಗಳ ಸ್ಥಳಾಂತರವೇ ಆಗಿಲ್ಲ ಎಂದರು.

‘ಹೊಸ ತಾಲ್ಲೂಕುಗಳ ರಚನೆ ಉದ್ಘಾಟನೆಗೆ ಸೀಮಿತವಾಗಿದೆ. ಹಿಂದಿನ ಅವಧಿಯಲ್ಲಿ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಅವರು ಹಲವು ತಾಲ್ಲೂಕುಗಳನ್ನು ಉದ್ಘಾಟಿಸಿದ್ದರು. ಅಲ್ಲಿ ಯಾವ ಬೆಳವಣಿಗೆಯೂ ಆಗಿಲ್ಲ. ಈಗ ಮತ್ತಷ್ಟು ತಾಲ್ಲೂಕುಗಳ ಉದ್ಘಾಟನೆ ನಡೆಯಲಿದೆ’ ಎಂದು ಟೀಕಿಸಿದರು.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !