ಚುನಾವಣೆ ನೆಪದಲ್ಲಿ ಕಿರುಕುಳ ಬೇಡ: ಪೊಲೀಸರಿಗೆ ಸಚಿವ ಖಾದರ್‌ ಸೂಚನೆ

ಬುಧವಾರ, ಮಾರ್ಚ್ 20, 2019
31 °C

ಚುನಾವಣೆ ನೆಪದಲ್ಲಿ ಕಿರುಕುಳ ಬೇಡ: ಪೊಲೀಸರಿಗೆ ಸಚಿವ ಖಾದರ್‌ ಸೂಚನೆ

Published:
Updated:
Prajavani

ಮಂಗಳೂರು: ಆಕಸ್ಮಿಕವಾಗಿ ಕ್ರಿಮಿನಲ್‌ ಪ್ರಕರಣಗಳಲ್ಲಿ ಸಿಲುಕಿದವರು ಮತ್ತು ಅಪರಾಧ ಕೃತ್ಯಗಳಿಂದ ದೂರ ಇರುವವರಿಗೆ ಚುನಾವಣೆಯನ್ನು ನೆಪವಾಗಿಟ್ಟುಕೊಂಡು ಕಿರುಕುಳ ನೀಡಬಾರದು ಎಂದು ಜಿಲ್ಲೆಯ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಧಾರ್ಮಿಕ ಕೇಂದ್ರಗಳಲ್ಲಿ ನಡೆದ ಗಲಾಟೆಗಳು, ಕ್ರೀಡಾಕೂಟಗಳ ಸಮಯದಲ್ಲಿನ ಘರ್ಷಣೆಗಳು ಸೇರಿದಂತೆ ಕೆಲವರ ವಿರುದ್ಧ ಆಕಸ್ಮಿಕವಾಗಿ ಪ್ರಕರಣಗಳು ದಾಖಲಾಗಿವೆ. ಅಪರಾಧ ಜಗತ್ತಿನ ಸಂಪರ್ಕವೇ ಇಲ್ಲದ ಇಂತಹವರನ್ನು ಚುನಾವಣೆ ಸಮಯದಲ್ಲಿ ಪೊಲೀಸರು ಅಪರಾಧಿಗಳ ರೀತಿ ನಡೆಸಿಕೊಳ್ಳುತ್ತಾರೆ. ಆ ರೀತಿ ವರ್ತಿಸದಂತೆ ಅಧಿಕಾರಿಗಳಿಗೆ ಸೂಚಿಸುವಂತೆ ನಗರ ಪೊಲೀಸ್‌ ಕಮಿಷನರ್‌ಗೆ ಸೂಚಿಸಲಾಗಿದೆ. ಜಿಲ್ಲೆಯ ಎಸ್‌ಪಿಯವರಿಗೂ ಈ ವಿಚಾರ ತಿಳಿಸಲಾಗುವುದು’ ಎಂದರು.

ಕೆಲವರು ವಿರುದ್ಧ ಎಷ್ಟೋ ವರ್ಷಗಳ ಹಿಂದೆ ಒಂದು ಪ್ರಕರಣ ದಾಖಲಾಗಿರುತ್ತದೆ. ಅಂತಹವರನ್ನು ಈಗಲೂ ರೌಡಿಗಳ ಪಟ್ಟಿಯಲ್ಲಿ ಇರಿಸಿಕೊಳ್ಳಲಾಗಿದೆ. ಚುನಾವಣೆ ಬಂದಾಗಲೆಲ್ಲ ಅವರನ್ನು ಪೊಲೀಸ್‌ ಠಾಣೆ, ಎಸಿಪಿ ಕಚೇರಿ, ಡಿಸಿಪಿ ಕಚೇರಿಗೆ ಕರೆಸಿ ಬೆರಳಚ್ಚು, ಭಾವಚಿತ್ರ ಸಂಗ್ರಹಿಸಲಾಗುತ್ತಿದೆ. ಸೆಕ್ಷನ್‌ 107ರ ಅಡಿ ಪ್ರಕರಣ ದಾಖಲಿಸಿ ಜಾಮೀನು ಮತ್ತು ಭದ್ರತೆ ಪಡೆಯಲಾಗುತ್ತದೆ. ಅಪರಾಧ ಜಗತ್ತಿನಿಂದ ದೂರ ಇರುವವರು, ವಯಸ್ಸಾದವರನ್ನುಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.

ಪೊಲೀಸ್‌ ಕಮಿಷನರ್‌ ಜೊತೆ ಮಂಗಳವಾರ ಚರ್ಚೆ ನಡೆಸಲಾಗಿದೆ. ಚುನಾವಣೆಯ ಸಮಯದಲ್ಲಿ ಕ್ರಿಮಿನಲ್‌ ಹಿನ್ನೆಲೆಯ ವ್ಯಕ್ತಿಗಳ ವಿರುದ್ಧ ಯಾವ ರೀತಿ ಕ್ರಮ ಜರುಗಿಸಬೇಕು ಎಂಬುದರ ಕುರಿತು ಚುನಾವಣಾ ಆಯೋಗದ ಮಾರ್ಗಸೂಚಿ ಇದೆ. ಆ ಪ್ರಕಾರವೇ ಪ್ರಕ್ರಿಯೆಗಳನ್ನು ನಡೆಸುವಂತೆ ಸೂಚಿಸಲಾಗಿದೆ ಎಂದರು.

ವರದಿ ಸಲ್ಲಿಸಲು ಸೂಚನೆ: ‘ಕಾವೂರಿನಲ್ಲಿ ಸೋಮವಾರ ರಾತ್ರಿ ಪೊಲೀಸರು ಶಿವರಾತ್ರಿ ಜಾಗರಣೆಗೆ ಅಡ್ಡಿಪಡಿಸಿರುವುದು ಸರಿಯಲ್ಲ. ರಾತ್ರಿ 1 ಗಂಟೆ ಸುಮಾರಿಗೆ ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯ ದೀಪಕ್‌ ಪೂಜಾರಿ ದೂರವಾಣಿ ಕರೆಮಾಡಿ ವಿಷಯ ತಿಳಿಸಿದರು. ತಕ್ಷಣವೇ ಮಧ್ಯ ಪ್ರವೇಶಿಸಿ ಕಾರ್ಯಕ್ರಮ ಮುಂದುವರಿಸಲು ಅವಕಾಶ ನೀಡುವಂತೆ ನಿರ್ದೇಶನ ನೀಡಿದ್ದೆ. ಪೊಲೀಸ್‌ ಅಧಿಕಾರಿಯ ವರ್ತನೆ ಕುರಿತು ದೂರು ಬಂದಿದೆ. ಈ ಬಗ್ಗೆ ವಿಚಾರಣೆ ನಡೆಸಿ, ವರದಿ ಸಲ್ಲಿಸುವಂತೆ ನಗರ ಪೊಲೀಸ್ ಕಮಿಷನರ್‌ ಅವರಿಗೆ ಸೂಚಿಸಿದ್ದೇನೆ’ ಎಂದು ತಿಳಿಸಿದರು.

ಪೊಲೀಸ್ ಅಧಿಕಾರಿಗಳು ಒಂದು ಸ್ಥಳದಲ್ಲಿ ಕೆಲಸ ಮಾಡುವಾಗ ಕಾನೂನಿನ ಜೊತೆಯಲ್ಲಿ ಅಲ್ಲಿನ ಪರಂಪರೆ, ಸಂಪ್ರದಾಯಗಳ ಬಗ್ಗೆಯೂ ಅರಿವು ಹೊಂದಿರಬೇಕು. ಕರಾವಳಿಯಲ್ಲಿ ದೇವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿ ರಾತ್ರಿ ಕಾರ್ಯಕ್ರಮಗಳು ನಡೆಯುತ್ತವೆ. ಅಲ್ಲಿ ಹೋಗಿ ಅಸಭ್ಯವಾಗಿ ವರ್ತಿಸುವುದು ಸರಿಯಲ್ಲ ಎಂದರು.

ಬಿಎಸ್‌ವೈ ಪ್ರಶ್ನಿಸಲು ಧೈರ್ಯವಿಲ್ಲ: ‘ಕಾಂಗ್ರೆಸ್‌ಗೆ ಭಯೋತ್ಪಾದಕರ ಚಿಂತೆ’ ಎಂಬ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಖಾದರ್‌, ‘ಸೇನೆಯ ದಾಳಿಯನ್ನು ರಾಜಕೀಯವಾಗಿ ಬಳಸಿಕೊಂಡವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ. ಶ್ರೀನಿವಾಸ ಪೂಜಾರಿಯವರು ಯಡಿಯೂರಪ್ಪ ಅವರನ್ನು ಪ್ರಶ್ನಿಸಬೇಕಿತ್ತು. ಅವರಿಗೆ ಆ ಧೈರ್ಯವಿಲ್ಲದ ಕಾರಣ ಕಾಂಗ್ರೆಸ್‌ ಪಕ್ಷವನ್ನು ಟೀಕಿಸುತ್ತಾರೆ’ ಎಂದು ದೂರಿದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !