ಕನ್ನಡ ಸಿನಿಮಾ ಪರಿಚಯ: ಮೂರು ಪುಸ್ತಕಗಳ ಬಿಡುಗಡೆ

ಶುಕ್ರವಾರ, ಮಾರ್ಚ್ 22, 2019
26 °C
ಕನ್ನಡ ಸಿನಿಮಾಗಳನ್ನು ಜಗತ್ತಿಗೆ ಪರಿಚಯಿಸುವ ಪ್ರಯತ್ನ

ಕನ್ನಡ ಸಿನಿಮಾ ಪರಿಚಯ: ಮೂರು ಪುಸ್ತಕಗಳ ಬಿಡುಗಡೆ

Published:
Updated:
Prajavani

ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ ‘11ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ಸೋಮವಾರ ಸಂಜೆ ಚಿತ್ರೋತ್ಸವದ ಸ್ಮರಣೆಗಾಗಿ ಒಂದು ಅಂಚೆ ಲಕೋಟೆ ಹಾಗೂ ಕನ್ನಡದ ಚಿತ್ರೋದ್ಯಮವನ್ನು ಕುರಿತ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಕಂಚೆ ಇಲಾಖೆಯ ಬೆಂಗಳೂರು ಪೂರ್ವ ವಿಭಾಗದ ಸೀನಿಯರ್‌ ಸುಪರಿಂಟೆಂಡೆಂಟ್‌ (ಎಸ್‌ಎಸ್‌ಪಿಒ) ಸಂದೇಶ್‌ ಮಹದೇವಪ್ಪ ಅವರು ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಿದರು. ಬಳಿಕ ಮಾತನಾಡುತ್ತ, ‘ಹಿರಿಯ ಸಾಧಕರಿಗೆ ಗೌರವ ಸಲ್ಲಿಸುವ ಮತ್ತು ಕೆಲವು ವಿಶೇಷ ಸಂದರ್ಭಗಳನ್ನು ಸ್ಮರಣೀಯಗೊಳಿಸುವ ಉದ್ದೇಶದಿಂದ ವಿಶೇಷ ಅಂಚೆ ಚೀಟಿ ಅಥವಾ ಅಂಚೆ ಲಕೋಟೆಗಳನ್ನು ಬಿಡುಗಡೆ ಮಾಡುವ ಸಂಪ್ರದಾಯ ಅಂಚೆ ಇಲಾಖೆಯಲ್ಲಿ ಇದೆ. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಈಗ ಜಗತ್ತಿನ ಗಮನ ಸೆಳೆಯುವ ಮಟ್ಟಕ್ಕೆ ಬೆಳೆದಿದ್ದು, ಆ ಯಶಸ್ಸಿಗೆ ನಮ್ಮ ಇಲಾಖೆಯು ಈ ಮೂಲಕ ಕಾಣಿಗೆ ಸಲ್ಲಿಸುತ್ತಿದೆ’ ಎಂದರು.

ಈ ವಿಶೇಷ ಅಂಚೆ ಲಕೋಟೆಗಳ ಕೇಂದ್ರ ಅಂಚೆ ಕಚೇರಿಯಲ್ಲಿ ಲಭ್ಯ ಇರುತ್ತವೆ. ಅಂಚೆಚೀಟಿ, ಅಂಚೆ ಲಕೋಟೆ ಸಂಗ್ರಹಿಸುವ ಹವ್ಯಾಸ ಇರುವವರು ಇವುಗಳನ್ನು ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳಬಹುದು’ ಎಂದರು.

ಇದಾದ ಬಳಿಕ ನಡೆದ ಸಮಾರಂಭದಲ್ಲಿ ಹಿರಿಯ ಚಿತ್ರ ವಿಮರ್ಶಕಿ ಅರುಣಾ ವಾಸುದೇವ್‌ ಅವರು ಮೂರು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು.

ಪುಟ್ಟಸ್ವಾಮಿ ಅವರು ಕನ್ನಡದಲ್ಲಿ ಬರೆದಿದ್ದ ‘ಸಿನಿಮಾ ಯಾನ’ ಕೃತಿಯ ಇಂಗ್ಲಿಷ್‌ ಅನುವಾದ ‘ಕನ್ನಡ ಟಾಕೀಸ್‌ –75’, ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ಸಿನಿಮಾ ಜೀವನದ ಬಗ್ಗೆ ಒ.ಪಿ. ಶ್ರೀವಾಸ್ತವ ಅವರು ಬರೆದ ‘ಲೈಫ್‌ ಇನ್‌ ಮೆಟಫರ್‌’ ಹಾಗೂ ಪತ್ರಕರ್ತರಾದ ಮುರಳೀಧರ ಖಜಾನೆ ಹಾಗೂ ವಿಶ್ವನಾಥ್‌ ಅವರು ಬರೆದ ‘ರ‍್ಯಾಂಡಂ ರಿಫ್ಲೆಕ್ಷನ್ಸ್‌’ ಸೋಮವಾರ ಬಿಡುಗಡೆಯಾದ ಕೃತಿಗಳು.

ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ಗಿರೀಶ್‌ ಕಾಸರವಳ್ಳಿ, ‘ಸಿನಿಮಾವನ್ನು ಬರಿಯ ಉದ್ಯಮವಾಗಿ ನೋಡಬಾರದು. ಅದು ಒಂದು ಸಾಂಸ್ಕೃತಿಕ ಪ್ರಕ್ರಿಯೆ. ಸಿನಿಮಾ ನಿರ್ವಾತದಲ್ಲಿ ಸೃಷ್ಟಿಯಾಗುವುದಲ್ಲ. ಅದು ಸಮಾಜದ ಕನ್ನಡಿ’ ಎಂದರು.

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್‌, ‘ಸಿನಿಮಾ ಕ್ಷೇತ್ರಕ್ಕೂ ಭಾರತದಲ್ಲಿ ಘನತೆ ಲಭಿಸಬೇಕಾದರೆ ಸಿನಿಮಾದ ಬಗ್ಗೆ ಹೆಚ್ಚು ಹೆಚ್ಚು ಉತ್ತಮ ಕೃತಿಗಳು ಬರಬೇಕು. ಆ ನಿಟ್ಟಿನಲ್ಲಿ ಅಕಾಡೆಮಿಯು ಚಿಂತನೆ ನಡೆಸಿದ್ದರ ಫಲವಾಗಿ ಈ ಪುಸ್ತಕಗಳು ಬಿಡುಗಡೆ ಆಗಿವೆ. ಈ ಮೂರೂ ಕೃತಿಗಳು ಕನ್ನಡ ಚಿತ್ರೋದ್ಯಮವನ್ನು ಜಗತ್ತಿಗೆ ಪರಿಚಯಿಸುವಂಥವುಗಳು. ಮುಂದಿನ ದಿನಗಳಲ್ಲಿ ಇನ್ನಷ್ಟು ಕೃತಿಗಳು ಬರಲಿವೆ’ ಎಂದರು.

ಪುಸ್ತಕದಲ್ಲಿ ಕ್ಯೂಆರ್‌ ಕೋಡ್‌: ಲೇಖಕ ಒ.ಪಿ. ಶ್ರೀವಾಸ್ತವ ಅವರು ಹಿಂದೆ ಗಿರೀಶ್‌ ಕಾಸರವಳ್ಳಿ ಅವರನ್ನು ಕುರಿತು ಒಂದು ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಿದ್ದರು. ಸಾಕ್ಷ್ಯಚಿತ್ರದಲ್ಲಿ ಹೇಳಲಾಗದಿರುವ ಅನೇಕ ವಿಚಾರಗಳನ್ನು ‘ಲೈಫ್‌ ಇನ್‌ ಮೆಟಫರ್‌’ ಕೃತಿಯಲ್ಲಿ ಹೇಳಿರುವುದಾಗಿ ಅವರು ತಿಳಿಸಿದರು. ಕೃತಿಯ ಕೊನೆಯ ಪುಟದಲ್ಲಿ ಕ್ಯೂಆರ್‌ ಕೋಡ್‌ ಅನ್ನು ಮುದ್ರಿಸಲಾಗಿದ್ದು, ಅದನ್ನು ಸ್ಕ್ಯಾನ್‌ ಮಾಡುವ ಮೂಲಕ ಓದುಗರು ಸಾಕ್ಷ್ಯಚಿತ್ರವನ್ನೂ ನೋಡಬಹುದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !