ವಾತ್ಸಲ್ಯದ ಕಥೆ ಹೇಳಿದ ರಾಘಣ್ಣ

ಶನಿವಾರ, ಮಾರ್ಚ್ 23, 2019
34 °C

ವಾತ್ಸಲ್ಯದ ಕಥೆ ಹೇಳಿದ ರಾಘಣ್ಣ

Published:
Updated:
Prajavani

ನಟ ರಾಘವೇಂದ್ರ ರಾಜ್‌ಕುಮಾರ್‌ ‘ಅಮ್ಮನ ಮನೆ’ ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚಿದ್ದಾರೆ. ಇದೇ ಶುಕ್ರವಾರ ಕರ್ನಾಟಕ ಸೇರಿದಂತೆ ವಿಶ್ವದಾದ್ಯಂತ ಏಕಕಾಲಕ್ಕೆ ಈ ಚಿತ್ರ ಬಿಡುಗಡೆಯಾಗುತ್ತಿದೆ. ‘ಪ್ರಜಾವಾಣಿ’ ಕಚೇರಿಗೆ ಚಿತ್ರತಂಡದೊಂದಿಗೆ ಭೇಟಿ ನೀಡಿದ್ದ ಅವರು ಅಮ್ಮನೊಟ್ಟಿಗೆ(ಪಾರ್ವತಮ್ಮ ರಾಜ್‌ಕುಮಾರ್) ಕಳೆದ ಕೊನೆಯ ದಿನಗಳು, ಮತ್ತೆ ಬಣ್ಣ ಹಚ್ಚಿದ ಹಿನ್ನೆಲೆ ಬಗ್ಗೆ ಮೆಲುಕು ಹಾಕಿದರು. ವರನಟ ಡಾ.ರಾಜ್‌ಕುಮಾರ್‌ ಮತ್ತು ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್ ಅವರ ನಡುವಿನ ಒಡನಾಟದ ಪ್ರಸಂಗವನ್ನೂ ಹಂಚಿಕೊಂಡರು.

‘ನೀವು ಶೂಟಿಂಗ್‌ ಸ್ಥಳಕ್ಕೆ ಹೋಗುವುದಕ್ಕೂ ಮೊದಲು ಪಾತ್ರಕ್ಕೆ ಯಾವ ರೀತಿ ತಯಾರಿ ನಡೆಸುತ್ತೀರಿ’ ಎಂದು ಅಪ್ಪಾಜಿಗೆ ಅಮಿತಾಬ್‌ ಬಚ್ಚನ್‌ ಕೇಳಿದರಂತೆ. ಆಗ ರಾಜ್‌ಕುಮಾರ್‌ ಅವರು, ‘ನಾನು ಸೆಟ್‌ಗೆ ಬಿಳಿಹಾಳೆಯಂತೆ ಹೋಗುತ್ತೇನೆ. ನಿರ್ದೇಶಕ ತನಗೆ ಬೇಕಾದಂತೆ ಆ ಹಾಳೆಯಲ್ಲಿ ಬರೆದುಕೊಳ್ಳಬಹುದು. ನಾನು ಏನಾದರೂ ಬರೆದುಕೊಂಡು ಹೋದರೆ ಅವರಿಗೆ ಎರಡು ಕೆಲಸವಾಗುತ್ತದೆ. ನನ್ನದನ್ನು ಅಳಿಸಿ ಬೇರೆಯದನ್ನು ಬರೆಯಬೇಕಾಗುತ್ತದೆ. ನಾನು ಪ್ಲೇನ್‌ ಆಗಿ ಹೋದರೆ ನಿರ್ದೇಶಕ ಏನು ಬೇಕೋ ಅದನ್ನು ಬರೆದುಕೊಳ್ಳುತ್ತಾನೆ. ನಿರ್ದೇಶಕನನ್ನು ತೃಪ್ತಿಪಡಿಸಿದರೆ ನನ್ನ ಕೆಲಸ ಮುಗಿಯಿತು. ಇನ್ನು ಜನರನ್ನು ತೃಪ್ತಿಪಡಿಸಿದರೆ ನಿರ್ದೇಶಕನ ಕೆಲಸ ಮುಗಿಯಿತು. ಅ‍ಪ್ಪಾಜಿ ಹೇಳಿದ ಈ ಮಾತೇ ನನಗೆ ಸ್ಫೂರ್ತಿ. ನಾನು ‘ಅಮ್ಮನ ಮನೆ’ಯ ಚಿತ್ರದ ಸೆಟ್‌ಗೆ ಹೋಗಿದ್ದು ಈ ಮನಸ್ಥಿತಿಯಲ್ಲಿಯೇ’ ಎಂದು ವಿವರಿಸಿದರು ರಾಘಣ್ಣ.

‘ನಾನು ಹಲವು ವರ್ಷದಿಂದ ನಟನೆಯಿಂದ ದೂರವಿದ್ದೆ. ಆದರೆ, ಸಿನಿಮಾದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೆ. ಮನೆಯಲ್ಲಿ ನನ್ನದೇ ಆದ ಜವಾಬ್ದಾರಿ ಇತ್ತು. ಹಾಗಾಗಿ, ಬಣ್ಣ ಹಚ್ಚಲಿಲ್ಲ. ಆ ವೇಳೆ ಮಾರುಕಟ್ಟೆಯೂ ವಿಸ್ತಾರವಾಗಿರಲಿಲ್ಲ. ತಮ್ಮನ(ಪುನೀತ್‌ ರಾಜ್‌ಕುಮಾರ್) ಕೆರಿಯರ್‌ ಬಗ್ಗೆ ಗಮನ ಹೋಯಿತು. ಈ ನಡುವೆ ನನಗೂ ಅನಾರೋಗ್ಯ ಕಾಡಿತು. ದೇವರು ನನಗೆ ಈಗಲೇ ನರಕ ಕೊಟ್ಟಿದ್ದಾನೆ. ಇಂತಹ ಆಲೋಚನೆಗಳಲ್ಲಿಯೇ ಮುಳುಗಿದ್ದೆ. ಮಕ್ಕಳಿಗೆ ಸುಂದರವಾದ ಬದುಕು ಕಟ್ಟಿಕೊಟ್ಟರೆ ಸಾಕು ಎನ್ನುತ್ತಿರುವಾಗಲೇ ಅಮ್ಮನಿಗೆ ಕ್ಯಾನ್ಸರ್‌ ಕಾಡಿತು’ ಎಂದು ಭಾವುಕರಾದರು.

‘ನನ್ನ ಸ್ಥಿತಿ ನೋಡಿ ಅವರೂ ನೊಂದುಕೊಂಡರು. ನಿನ್ನ ಮೇಲೆ ನಾನು ಒತ್ತಡ ಹೇರಿದೆ. ಇದಕ್ಕೆಲ್ಲಾ ನಾನೇ ಕಾರಣ ಎಂದು ಅಮ್ಮ ಹೇಳುತ್ತಿದ್ದರು. ಮತ್ತೆ ನಟನೆಗೆ ವಾಪಸ್‌ ಬರುವುದಾಗಿ ಅಮ್ಮನಿಗೆ ಹೇಳುತ್ತಿದ್ದೆ. ಈ ನಡುವೆಯೇ ಅಮ್ಮನನ್ನು ಕಳೆದುಕೊಂಡೆ. ಆಗ ನನ್ನ ಬದುಕಿನಲ್ಲಿ ಸಂಪೂರ್ಣ ಕತ್ತಲು ಕವಿಯಿತು. ಆಗ ನನಗೆ ಬೆಳಕಾಗಿ ಬಂದಿದ್ದೇ ನಿರ್ದೇಶಕ ನಿಖಿಲ್‌ ಮಂಜೂ ಲಿಂಗಯ್ಯ. ‘ಅಮ್ಮನ ಮನೆ’ ಸಿನಿಮಾ ಮಾಡುವ ಪ್ರಸ್ತಾವ ಮುಂದಿಟ್ಟರು’ ಎಂದು ವಿವರಿಸಿದರು.

‘ನನಗೆ ಮಾರುಕಟ್ಟೆ ಇಲ್ಲ. ಸಿನಿಮಾ ಶುರುವಾದ ಮೇಲೆ ನನ್ನ ಅನಾರೋಗ್ಯ ಮತ್ತಷ್ಟು ಉಲ್ಬಣಿಸಿದರೆ ನಿಮಗೆ ತೊಂದರೆಯಾಗಲಿದೆ ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟೆ. ಕೊನೆಗೆ, ಅವರು ಹೇಳಿದ ಮಾತುಗಳೇ ನಾನು ಮತ್ತೆ ನಟಿಸಲು ಪ್ರೇರಣೆ ನೀಡಿತು’ ಎಂದರು.

‘ನನ್ನ ಹಣೆಬರಹ ಬದಲಾಯಿಸಿದ ಸಿನಿಮಾ ಇದು. ಜೀವನದ ಕಾಲಘಟ್ಟದಲ್ಲಿ ತಾಯಿ, ಹೆಂಡತಿ ಮತ್ತು ಮಗಳನ್ನು ಮಗ ಹೇಗೆ ಬ್ಯಾಲೆನ್ಸ್‌ ಮಾಡುತ್ತಾನೆ ಎನ್ನುವುದೇ ಚಿತ್ರದ ಕಥಾಹಂದರ’ ಎಂದರು ರಾಘಣ್ಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !