ಮುರಿದ ಸರಪಳಿ

ಮಂಗಳವಾರ, ಮಾರ್ಚ್ 19, 2019
20 °C

ಮುರಿದ ಸರಪಳಿ

Published:
Updated:

‘ರೀ, ಸರಪಳಿ ಕಿತ್ಹೋಯ್ತು’, ನನ್ನವಳು ಕನಲಿದಳು.

‘ಕಬ್ಬಿಣದ್ದಾ?’ ಒದರಿದೆ, ಗೊರವಯ್ಯನ ಮಾತುಗಳೇ ತಲೆಯಲ್ಲಿ ಓಡುತ್ತಿದ್ದರಿಂದ.
‘ನಮ್ಮ ಮನೆಯಲ್ಲಿ ಉಯ್ಯಾಲೆ ಇಲ್ಲಪ್ಪ...’ ಪುಟ್ಟಿಯ ಉತ್ತರ. 

‘ಮತ್ತೆ... ನಾಯಿ ಕುತ್ತಿಗೆಗೆ ಕಟ್ಟಿದ್ದೋ ಅಥವಾ ನಿನ್ನ ಲೇಡಿಬರ್ಡ್ ಸೈಕಲ್ ಚೈನೋ?’

‘ಇಲ್ಲಪ್ಪ ಅವೆಲ್ಲ ಗಟ್ಟಿಯಾಗೇ ಇವೆ... ಅಮ್ಮ ನಿನಗೇ ಹೇಳ್ತಿರೋದು, ನೀನೇ ಕೇಳ್ಕೊ’ ಎಂದಳು ಸ್ಮಾರ್ಟ್ ಫೋನ್‌ನಲ್ಲಿ ಮುಳುಗಿ.

‘ಸರಪಳಿ ಎಂದರೆ ಕನಿಷ್ಠಪಕ್ಷ ಮೂರೋ ನಾಲ್ಕೋ ಲಿಂಕ್ ಇರಬೇಕಲ್ಲ? ಮಹಾಘಟಬಂಧನವೆಂಬೋ ಸರಪಳಿಯೋ...? ’ ಕಂಠಿ ತೂಕಡಿಸುತ್ತಲೇ ತರ್ಕ ನುಡಿದ, ಕಬ್ಬಿಣದ ಸರಪಳಿಯನ್ನು ರಾಜಕೀಯವಾಗಿಸಿ.

‘ನಾ ಹೇಳಿದ್ದು ಕೇಳಿಸ್ತಾ?’ ನೇರ ಸೀನ್‌ಗೆ ಬಂದಳು ನನ್ನವಳು.

‘ಅದೇ, ಯಾವುದು ಅಂತ ಯೋಚಿಸ್ತಿದ್ದೆ’ ಕೊಂಚ ನಟಿಸಿದೆ.

‘ಒಂದು ವರ್ಷ ಗ್ಯಾರಂಟಿ ಅಂದಿದ್ರು ತೊಗೊಳ್ಳೊವಾಗ. ಈಗ ಆರು ತಿಂಗಳಿಗೇ ಮುರಿದುಬಿದ್ದಿದೆ’ ಸಿಡಿಮಿಡಿಗೊಂಡಳು.

‘ಅಯ್ಯೋ, ಹೇಳೋದು ಐದು ವರ್ಷ ಅಂತ. ಎರಡು ತಿಂಗಳಿಗೇ ಮುನಿಸು ಅನ್ನೋ ಬಿರುಕು ಕಾಣಿಸ್ಕೊಳ್ಳುತ್ತೆ. ಆಗಾಗ ಅಧಿಕಾರ, ಪೊಸಿಷನ್ನು ಅನ್ನೋ ಬೆಸುಗೆ ಹಾಕ್ತಿರಬೇಕು’ ಕಂಠಿ ಮತ್ತೆ ತೂಕಡಿಸುತ್ತಲೇ ವಟಗುಟ್ಟಿದ.

ನನ್ನವಳು ಅರ್ಥವಾಗದೇ ಹುಬ್ಬೇರಿಸಿದಳು. ‘ನಿಜ, ವ್ಯಾಪಾರ ಕುದುರಬೇಕಾದರೆ ನೂರೆಂಟು ವಾರಂಟಿಗಳು, ಕೆಟ್ಟು ಕೂತಾಗ ‘ನೀವು ಹುಷಾರಾಗಿ ಮೇಂಟೆಯ್ನ್ ಮಾಡಲಿಲ್ಲ’ ಅಂತ ಕೈತೊಳ್ಕೊಳ್ತಾರೆ. ವಸ್ತು ಬದಲಾಯಿಸಿ ಕೊಡೋಲ್ಲ, ತೇಪೆ ಹಾಕಿಕೊಡ್ತೀವಿ ಅಂತಾರೆ’ ನನ್ನ ಬುದ್ಧಿಯನ್ನು ಝಳಪಿಸಿದೆ.

‘ಈ ಕೆನ್ನೆ ಸರಪಳಿ ಒನ್ ಗ್ರಾಂ ಗೋಲ್ಡ್‌ದು, ಅದೇ ಗೋಳು. ಅದರ ತಂಟೆನೇ ಬೇಡ, ಗಟ್ಟಿಯಾಗಿ ಗೋಲ್ಡ್‌ದು ತಂದ್ಬಿಡೋಣ. ಸ್ವಲ್ಪಕ್ಕೆ ರಾಜಿ ಮಾಡ್ಕೊಂಡ್ರೆ ಹೀಗೇ’ ಎನ್ನುತ್ತಾ, ಹರಿದ ಕೆನ್ನೆ ಸರಪಳಿಯನ್ನು ಬಿಸುಟಿದಳು.
ಪುಟ್ಟಿ ಕಿಸಕ್ಕನೆ ನಕ್ಕಳು.

Tags: 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !