ಯುದ್ಧದ ಅಂತ್ಯ ಕಂಡವರು ಯಾರು?

ಸೋಮವಾರ, ಮಾರ್ಚ್ 18, 2019
31 °C
ನಾವು ಟ್ವಿಟರ್ ಯುದ್ಧದಿಂದ ಹೊರಬರೋಣ; ಸೈನಿಕರ ಕೈ ಬಲಪಡಿಸೋಣ

ಯುದ್ಧದ ಅಂತ್ಯ ಕಂಡವರು ಯಾರು?

Published:
Updated:

‘ಯೋಧ ತರಬೇತಿ ಪಡೆದಿರುವುದು ಯುದ್ಧ ಮಾಡುವುದಕ್ಕಾದರೂ, ಆತ ಶಾಂತಿಪ್ರಿಯ. ಏಕೆಂದರೆ ಯುದ್ಧದಲ್ಲಿ ಅತಿಹೆಚ್ಚಿನ ನೋವು ಅನುಭವಿಸುವವ ಆತನೇ’ ಎಂಬ ಮಾತಿದೆ. ಹಾಗಾಗಿ ಯುದ್ಧದಾಹಿ ಟಿ.ವಿ. ಕಾರ್ಯಕ್ರಮ ನಿರೂಪಕರು, ರಾಜಕೀಯ ಪಕ್ಷಗಳ ವಕ್ತಾರರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವವರು ವಿಷ ಕಾರುವುದನ್ನು ನಿಲ್ಲಿಸಬೇಕು.

ಪುಲ್ವಾಮಾದಲ್ಲಿ ಸೈನಿಕರ ಮೇಲೆ ದಾಳಿ ನಡೆದ ನಂತರ ದೇಶ ಆಘಾತಕ್ಕೆ ಒಳಗಾಗಿತ್ತು. ಸುದ್ದಿವಾಹಿನಿಗಳ ನಿರೂಪಕರು ತಮ್ಮ ಪ್ರೈಮ್‌ ಟೈಮ್‌ ಕಾರ್ಯಕ್ರಮಗಳಿಗೆ ವೀಕ್ಷಕರನ್ನು ಆಕರ್ಷಿಸಲು, ಪ್ರತೀಕಾರ ತೆಗೆದುಕೊಳ್ಳುವಂತೆ ಪ್ರಧಾನಿಯವರನ್ನು ಆಗ್ರಹಿಸಲು ಆರಂಭಿಸಿದರು. ಆದರೆ, ಸೇನೆ ಮಾತ್ರ ಎಲ್ಲ ಆಯ್ಕೆಗಳ ಬಗ್ಗೆ ಲೆಕ್ಕಾಚಾರ ಹಾಕಿ, ಸ್ಥಿತಪ್ರಜ್ಞ ಮೌನ ಕಾಯ್ದುಕೊಂಡಿತು. ಪುಲ್ವಾಮಾ ದಾಳಿಯ ಹನ್ನೆರಡು ದಿನಗಳ ನಂತರ, ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳ ಮೇಲೆ ವಾಯು ದಾಳಿ ನಡೆಸಲಾಯಿತು. 2016ರ ಉರಿ ದಾಳಿಯ ನಂತರ ಭಾರತ ನಡೆಸಿದ ನಿರ್ದಿಷ್ಟ ದಾಳಿಯ ಮಾದರಿಯಲ್ಲಿ ಪ್ರತಿದಾಳಿ ನಡೆಯಬಹುದು ಎಂಬ ನಿರೀಕ್ಷೆಯಲ್ಲಿ ಪಾಕಿಸ್ತಾನ ಇದ್ದಿದ್ದರೂ, ಇಂಥದ್ದೊಂದು ದಾಳಿಯನ್ನು ಊಹಿಸಿರಲಿಲ್ಲ.

ದಾಳಿಯಲ್ಲಿ ಎಷ್ಟು ಜನ ಉಗ್ರರು ಸತ್ತರು ಎಂಬುದನ್ನು ಮುಂದಿನ ದಿನಗಳಲ್ಲಿ ಗುಪ್ತಚರ ಮೂಲಗಳ ಮೂಲಕ ಕಂಡುಕೊಳ್ಳಬೇಕು. ಆದರೆ, ಎರಡೂ ದೇಶಗಳ ಬಳಿ ಅಣ್ವಸ್ತ್ರಗಳು ಇದ್ದರೂ ಭಾರತವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ, ಪಾಕಿಸ್ತಾನದ ನೆಲದಲ್ಲಿರುವ ಉಗ್ರರ ನೆಲೆಗಳ ಮೇಲೆ ತನ್ನ ಸಂಪೂರ್ಣ ಶಕ್ತಿಯೊಂದಿಗೆ ದಾಳಿ ನಡೆಸುತ್ತದೆ ಎಂಬ ಸ್ಪಷ್ಟ ಸಂದೇಶವಂತೂ ರವಾನೆ
ಯಾಗಿದೆ. ಮಿಲಿಟರಿ ಎದುರಾಳಿಯೊಬ್ಬ ಪುಂಡನಂತೆ ವರ್ತಿಸುತ್ತಿರುವ ಸಂದರ್ಭದಲ್ಲಿ ಇಂತಹ ಪ್ರತಿಕ್ರಿಯೆ ಸೂಕ್ತವೇ ಆಗಿತ್ತು.

ಯುಪಿಎ ಆಡಳಿತದ ಅವಧಿಯಲ್ಲಿ ಮುಂಬೈ ಮೇಲೆ ಉಗ್ರರ ದಾಳಿ ನಡೆದಾಗ, ವಾಜಪೇಯಿ ನೇತೃತ್ವದ ಎನ್‌ಡಿಎ ಆಡಳಿತದ ಅವಧಿಯಲ್ಲಿ ಸಂಸತ್ತಿನ ಮೇಲೆ ದಾಳಿ ನಡೆದಾಗ ಭಾರತ ಗಡಿ ನಿಯಂತ್ರಣ ರೇಖೆಯನ್ನು ದಾಟಿರಲಿಲ್ಲ. ಭಾರತ ಈ ಬಾರಿ ದಾಳಿ ನಡೆಸಿದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಉನ್ಮಾದ ಆವರಿಸಿತು. ಇದರಿಂದ ಪ್ರಭಾವಿತರಾದ ಮುಖ್ಯವಾಹಿನಿಯ ಮಾಧ್ಯಮಗಳ ಕೆಲವರು ಯುದ್ಧೋನ್ಮಾದಕ್ಕೆ ಒಳಗಾದರು, ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗಿದೆ ಎಂದು ಜಂಬಪಟ್ಟರು.

ಆಡಳಿತ ಪಕ್ಷದ ವಕ್ತಾರರ ಎದೆ ತಟ್ಟಿಕೊಳ್ಳುವ ಕೆಲಸ ಹಾಗೂ ವಿರೋಧ ಪಕ್ಷಗಳು ಪ್ರಧಾನಿಯವರ ಬಗ್ಗೆ ಮಾಡಿದ ಟೀಕೆಗಳು ಸಶಸ್ತ್ರ ಪಡೆಗಳ ನೈತಿಕತೆ ಹಿಗ್ಗಿಸುವ ಕೆಲಸವನ್ನೇನೂ ಮಾಡಲಿಲ್ಲ. ಪಾಕಿಸ್ತಾನ ಪ್ರತಿದಾಳಿ ನಡೆಸಿ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಸೆರೆಹಿಡಿದಾಗ ಭಾರತದಲ್ಲಿದ್ದ ಸಂಭ್ರಮ ಹಾರಿಹೋಯಿತು. ಪಾಕಿಸ್ತಾನವು ಅಣ್ವಸ್ತ್ರ ಬಳಸಬಹುದು ಎಂಬ ಭೀತಿಯಿಂದ ಭಾರತ ಪ್ರತಿದಾಳಿ ನಡೆಸಲಿಕ್ಕಿಲ್ಲ, ಹಾಗಾಗಿ ಭಾರತದ ಮೇಲೆ ದಾಳಿ ನಡೆಸಬಹುದು ಎಂಬ ಒತ್ತಡ ಇಮ್ರಾನ್ ಖಾನ್ ಮೇಲೆ ಅಲ್ಲಿನ ಮಿಲಿಟರಿಯಿಂದ ಬಂದಿತ್ತು.

ಈ ಹೊತ್ತಿನಲ್ಲಿ ಭಾರತದಲ್ಲಿ ಹಠಾತ್ತನೆ ಕಾರ್ಮೋಡ ಕವಿದಿತ್ತು. ಮೋದಿ ಮುಂದಿನ ಆಯ್ಕೆಗಳ ಬಗ್ಗೆ ಚರ್ಚಿಸುತ್ತಿದ್ದ ಹೊತ್ತಿನಲ್ಲಿ ಇಮ್ರಾನ್ ಆಶ್ಚರ್ಯದ ಹೆಜ್ಜೆ ಇರಿಸಿದರು– ಅಭಿನಂದನ್ ಅವರನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದರು. ಅಂತರರಾಷ್ಟ್ರೀಯ ಸಮುದಾಯದಿಂದ ‘ಮುತ್ಸದ್ದಿ’ ಎಂದು ಕರೆಸಿಕೊಳ್ಳಲು ಅವರು ಬಯಸಿದ್ದಿರಬಹುದು ಅಥವಾ ಪೂರ್ಣ ಪ್ರಮಾಣದ ಯುದ್ಧವನ್ನು ತಡೆಯಲು ಬಯಸಿದ್ದಿರಬಹುದು.

ಆದರೆ, ಸಾಮಾಜಿಕ ಜಾಲತಾಣಗಳಲ್ಲಿನ ಕೆಲವರು ಹಾಗೂ ಮುಖ್ಯವಾಹಿನಿಯ ಟಿ.ವಿ. ಮಾಧ್ಯಮಗಳ ಕೆಲವರು ಇದನ್ನು ಮೂರ್ಖರ ರೀತಿಯಲ್ಲಿ ‘ಮೋದಿ ಅವರ ವಿಜಯ’ ಎಂಬಂತೆ ಬಿಂಬಿಸಿದರು– ಆ ಮೂಲಕ ಅಭಿನಂದನ್ ಅವರ ಬಿಡುಗಡೆ ಪ್ರಕ್ರಿಯೆಯನ್ನೇ ಅಪಾಯಕ್ಕೆ ಸಿಲುಕಿಸಿದರು. ಏಕೆಂದರೆ, ಆ ಸಂದರ್ಭದಲ್ಲಿ ಪೈಲಟ್‌ ಇನ್ನೂ ಪಾಕಿಸ್ತಾನದ ವಶದಲ್ಲಿದ್ದರು. ಹುಚ್ಚನೊಬ್ಬನ ಬಳಿ ಪಿಸ್ತೂಲು ಇದ್ದಾಗ, ಆತನ ಕೈಯಲ್ಲಿ ನಿಮ್ಮ ಮಗು ಒತ್ತೆಯಾಳಾಗಿ ಇದ್ದಾಗ ನೀವು ಎಚ್ಚರಿಕೆಯಿಂದ ಹೆಜ್ಜೆ ಇರಿಸಬೇಕಾಗುತ್ತದೆ.

ರಾಜಕೀಯ ವಲಯದಲ್ಲಿ ನಡೆದ ಲಾಭನಷ್ಟಗಳ ಲೆಕ್ಕಾಚಾರ, ಟಿ.ವಿ. ವಾಹಿನಿಗಳ ಸ್ಟುಡಿಯೊಗಳಲ್ಲಿ ನಡೆದ ‘ಯುದ್ಧ’ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಡೆದ ವಿವೇಕಹೀನ ದಾಳಿ–ಪ್ರತಿದಾಳಿಗಳ ನಡುವೆ ಬಲಿಯಾಗಿದ್ದು ವಿವೇಕ ಮತ್ತು ವಸ್ತುನಿಷ್ಠೆ.

ಭಯೋತ್ಪಾದನೆ ವಿರುದ್ಧ ಹೋರಾಡಲು ಬೇಕಿರುವ ರೀತಿಯಲ್ಲಿ ನಮ್ಮ ಸಶಸ್ತ್ರ ಪಡೆಗಳನ್ನು ಸಜ್ಜುಗೊಳಿಸುವ ವಿಚಾರದಲ್ಲಿ ನಾವು ವಿಫಲರಾಗಿದ್ದೇವೆ. ಸಶಸ್ತ್ರ ಪಡೆಗಳು ಕಳೆದ ಮೂರು ದಶಕಗಳಿಂದ ಮಾಡಿರುವ ಮನವಿಗಳ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಂಡಿಲ್ಲ. ಕಾರ್ಗಿಲ್ ಯುದ್ಧದ ವೇಳೆ ವಾಯುಪಡೆಯ ಮುಖ್ಯಸ್ಥರಾಗಿದ್ದ ಟಿಪ್ನಿಸ್, ಕಾರ್ಗಿಲ್ ಯುದ್ಧದ ನಂತರ ಅಂದಿನ ಪ್ರಧಾನಿ ವಾಜಪೇಯಿ ಅವರಲ್ಲಿ ಒಂದು ಮಾತು ಹೇಳಿದ್ದರು. ‘ವಾಯುಪಡೆಗೆ ಅನುಮತಿ ನೀಡಿರುವ ಯುದ್ಧವಿಮಾನ ಸ್ಕ್ವಾಡ್ರನ್‌ಗಳ ಸಂಖ್ಯೆ 40. ಆದರೆ ವಾಯುಪಡೆ ಬಳಿ ಇರುವುದು 30 ಸ್ಕ್ವಾಡ್ರನ್‌ಗಳು ಮಾತ್ರ. ಅದರಲ್ಲೂ ಯುದ್ಧಸನ್ನದ್ಧ ಸ್ಥಿತಿಯಲ್ಲಿರುವ ಸ್ಕ್ವಾಡ್ರನ್‌ಗಳ ಸಂಖ್ಯೆ 25 ಅಷ್ಟೆ. ಆಮೂಲಾಗ್ರ ಬದಲಾವಣೆ ತಂದು ಅನುಮತಿ‌ ಇರುವ ಸ್ಕ್ವಾಡ್ರನ್‌ಗಳ ಸಂಖ್ಯೆಯನ್ನು 50ಕ್ಕೆ ಹೆಚ್ಚಿಸಬೇಕು’ ಎಂಬುದು ಆ ಮಾತು. ಇದನ್ನು ಅವರು ಪುಲ್ವಾಮಾ ದಾಳಿ ನಂತರ ಟಿ.ವಿ. ವಾಹಿನಿಯೊಂದರಲ್ಲಿ ಹೇಳಿದ್ದರು. ‘ಕಾರ್ಗಿಲ್ ಯುದ್ಧ ಮುಗಿದ 20 ವರ್ಷಗಳ ನಂತರವೂ ಭಾರತದ ಬಳಿ ಇರುವುದು 25 ಯುದ್ಧ ಸನ್ನದ್ಧ ಸ್ಕ್ವಾಡ್ರನ್‌ಗಳು ಮಾತ್ರ’ ಎಂದೂ ಹೇಳಿದ್ದರು.

ನಾವು ನಮ್ಮ ಸಾಂಪ್ರದಾಯಿಕ ಯುದ್ಧ ಸಾಮರ್ಥ್ಯ ಮತ್ತು ಅಣ್ವಸ್ತ್ರ ಸಮರ ಎದುರಾದಲ್ಲಿ ಅದನ್ನು ನಿಭಾಯಿಸುವ ತಾಕತ್ತು ಹೆಚ್ಚಿಸಿಕೊಳ್ಳಲು ತಳಮಟ್ಟದಲ್ಲಿ ಕೆಲಸ ಆರಂಭಿಸಬೇಕು. ಆದರೆ, ಪಾಕಿಸ್ತಾನದ ಜೊತೆಗಿನ ಯುದ್ಧವನ್ನು ‘ಭಯೋತ್ಪಾದನೆ’ಯನ್ನು ಎದುರಿಸುವ ಮೂಲಕ ನಡೆಸಬೇಕು. ಏಕೆಂದರೆ, ಭಾರತವನ್ನು ಮಣಿಸಲು ಪಾಕಿಸ್ತಾನ ಹೂಡಿರುವ ಯುದ್ಧ ತಂತ್ರವೇ ಭಯೋತ್ಪಾದನೆ. ಅದಕ್ಕೆ ಬೇಕಿರುವುದು ಯುದ್ಧದ ತಂತ್ರಗಾರಿಕೆಯಲ್ಲಿನ ಸ್ಪಷ್ಟತೆ ಮಾತ್ರವೇ ಅಲ್ಲ. ಅದಕ್ಕೆ ತಂತ್ರಜ್ಞಾನ ಹಾಗೂ ಗೂಢಚರ ಕೆಲಸಗಳ ಮೂಲಕ ಮಾಹಿತಿ ಸಂಗ್ರಹಣೆ ಮೇಲಿನ ಹೂಡಿಕೆ ಹೆಚ್ಚಿಸಬೇಕು. ತಂತ್ರಜ್ಞಾನದ ಬಳಕೆಯಲ್ಲಿ ನಿಪುಣರಾದ ಯುವಕರನ್ನು ನೇಮಿಸಿಕೊಂಡು, ಭಯೋತ್ಪಾದನೆಯನ್ನು ತಡೆಯುವ ಹಾಗೂ ಅದನ್ನು ಮಣಿಸುವ ಕೆಲಸ ಆಗಬೇಕು.

ಇದಕ್ಕೆಲ್ಲ ಸಮಯ ಬೇಕು. ಹಾಗಾಗಿ ಕೆಲಸಗಳು ಈಗಿನಿಂದಲೇ, ಸದ್ದು ಮಾಡದೆಯೇ ಆರಂಭವಾಗಬೇಕು. ಇವೆಲ್ಲ ರಾತ್ರೋರಾತ್ರಿ ಕಲಿಯುವ ವಿಡಿಯೊ ಗೇಮ್‌ಗಳೂ ಅಲ್ಲ, ವಾಟ್ಸ್‌ಆ್ಯಪ್‌ ವಿಡಿಯೊಗಳೂ ಅಲ್ಲ. ‘ಸೇನೆಯು ಏಕಾಂಗಿಯಾಗಿ ಭಯೋತ್ಪಾದನೆಯ ಸಮಸ್ಯೆ ಬಗೆ ಹರಿಸಲಾಗದು’ ಎಂದು ಸೇನೆಯ ಮುಖ್ಯಸ್ಥರಾಗಿದ್ದವರೆಲ್ಲ ಹೇಳಿದ ಮಾತುಗಳು ನೆನಪಿನಲ್ಲಿ ಉಳಿದು
ಕೊಳ್ಳಬೇಕು. ಭಯೋತ್ಪಾದನೆಯನ್ನು ಮಣಿಸುವ ಕೆಲಸಕ್ಕೆ ವಿವೇಕಯುತವಾದ ರಾಜಕೀಯ ಕ್ರಮಗಳು, ಒಳ್ಳೆಯ ಆಡಳಿತ, ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯ ಕೆಲಸಗಳು ಆಗಬೇಕು. ಈ ವಿಚಾರದಲ್ಲಿ ನಾಲ್ಕು ದಶಕಗಳ ಎಲ್ಲ ಸರ್ಕಾರಗಳೂ ವಿಫಲವಾಗಿವೆ.

ಈಗ ನಾವು ಟ್ವಿಟರ್‌ ಯುದ್ಧದಿಂದ ಹೊರಬರೋಣ. ಟಿ.ವಿ. ವಾಹಿನಿಗಳ ಸ್ಡುಡಿಯೊಗಳಲ್ಲಿ ಕುಳಿತು ಪಟಾಕಿ ಹೊತ್ತಿಸುವುದನ್ನು ನಿಲ್ಲಿಸೋಣ. ಸೈನಿಕರ ಕೈಬಲಪಡಿಸುವ ಕೆಲಸಕ್ಕೆ ಕುಳಿತುಕೊಳ್ಳೋಣ. ದೇಶಕ್ಕಾಗಿ ಯುದ್ಧ ಗೆದ್ದುಕೊಡುವ ಶಪಥ ಮಾಡಿರುವ ಸೈನಿಕರು ಯುದ್ಧದಾಹಿಗಳಲ್ಲ ಎಂಬುದು ವಿಚಿತ್ರವಾದರೂ ಸತ್ಯ.

ಲೇಖಕ, 1971ರ ಭಾರತ–ಪಾಕಿಸ್ತಾನ ಯುದ್ಧದಲ್ಲಿ ಪಾಲ್ಗೊಂಡಿದ್ದರು ಮತ್ತು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸಿದ್ದರು

ಬರಹ ಇಷ್ಟವಾಯಿತೆ?

 • 22

  Happy
 • 1

  Amused
 • 1

  Sad
 • 2

  Frustrated
 • 3

  Angry

Comments:

0 comments

Write the first review for this !