ಉತ್ಸವ ಮುಗಿಯಿತು; ಅಭಿವೃದ್ಧಿ?

ಮಂಗಳವಾರ, ಮಾರ್ಚ್ 26, 2019
31 °C
ಉತ್ಸವದ ವೇಳೆ ಹೊರತುಪಡಿಸಿ ಹಂಪಿ ‘ಮರೆತುಹೋದ ಸಾಮ್ರಾಜ್ಯ’ವೇ ಆಗಿದೆ

ಉತ್ಸವ ಮುಗಿಯಿತು; ಅಭಿವೃದ್ಧಿ?

Published:
Updated:

ಜನರ ಆಗ್ರಹದ ಬಳಿಕ ಹಂಪಿ ಉತ್ಸವವನ್ನು ಎರಡು ದಿನ ಮೊಟುಕುಗೊಳಿಸಿ, ಬೇಸಿಗೆ ಕಾಲದಲ್ಲಿ ರಾಜ್ಯ ಸರ್ಕಾರ ಸರಳವಾಗಿಯೇ ಆಚರಿಸಿದ್ದಾಯಿತು. ಆದರೆ ಹಂಪಿಯನ್ನು ವಿಶ್ವ ಪ್ರವಾಸೋದ್ಯಮ ದರ್ಜೆಗೆ ತಕ್ಕಂತೆ ಅಭಿವೃದ್ಧಿಪಡಿಸುವುದು ಯಾವಾಗ ಎಂಬ ಪ್ರಶ್ನೆ ಮಾತ್ರ ಅನಾಥವಾಗಿಯೇ ಉಳಿದಿದೆ.

ಹಂಪಿ ಎಂದಿಗೂ ಮುಗಿಯದ ಚಾರಿತ್ರಿಕ ಹಾಗೂ ಪಾರಂಪರಿಕ ಬೆರಗು. ಇತಿಹಾಸ, ಸಾಹಿತ್ಯ, ಕಲೆ, ಸಂಸ್ಕೃತಿ, ಜನಪದ, ಸಾಹಸ ಕ್ರೀಡೆ, ಶಾಸನ, ಕನ್ನಡ–ತೆಲುಗು ಅನುಸಂಧಾನ, ಚಾರಣ ಹಾಗೂ ಪ್ರವಾಸ ಕ್ಷೇತ್ರದಲ್ಲಿ ಹಂಪಿಗೆ ಇರುವ ಸಾಧ್ಯತೆಗಳಿಗೆ ಲೆಕ್ಕವೇ ಇಲ್ಲ. ಹಂಪಿಯ ಸಮಗ್ರ ಪರಿಸರಸ್ನೇಹಿಯಾದ ಪ್ರವಾಸೋದ್ಯಮ ಅಭಿವೃದ್ಧಿ ಇಂದಿಗೂ ಮರೀಚಿಕೆಯಾಗಿಯೇ ಉಳಿದಿದೆ.

ಪ್ರತಿವರ್ಷ ಸಾವಿರಾರು ವಿದೇಶಿ ಪ್ರವಾಸಿಗರು, ಲಕ್ಷಾಂತರ ದೇಶಿ ಪ್ರವಾಸಿಗರು ಭೇಟಿ ನೀಡುವ ಈ ಪುಟ್ಟ ಗ್ರಾಮ ಪಂಚಾಯಿತಿ ಕೇಂದ್ರಕ್ಕೆ ಇರುವ ಮಹತ್ವವನ್ನು ಸಂಬಂಧಿಸಿದ ಯಾವುದೇ ಇಲಾಖೆಯು ಸ್ವಚ್ಛ ಕಣ್ಣುಗಳಿಂದ ನೋಡಿಯೇ ಇಲ್ಲವೇನೋ ಎಂಬಂತೆ ಹಂಪಿ ಹಳೇ ವೈಭವವನ್ನು ಮೆಲುಕು ಹಾಕುತ್ತಿರುವಂತೆ ಕಾಣುತ್ತದೆ. ತನ್ನ ಸ್ಮಾರಕಗಳಾಚೆಗೂ ಇರುವ ವೈವಿಧ್ಯಮಯ ಚಹರೆಗಳನ್ನು ಆಧರಿಸಿ ಹಂಪಿಯನ್ನು ಅಭಿವೃದ್ಧಿಪಡಿಸುವ ಕೆಲಸ ಮಾತ್ರ ಇನ್ನೂ ಕೈಗೂಡಿಲ್ಲ.

ಇಲ್ಲಿನ ಬಂಡೆಗಳಲ್ಲಿ ಸಾಹಸ ಚಟುವಟಿಕೆಗಳನ್ನು ಹಮ್ಮಿಕೊಳ್ಳಲೆಂದೇ ಹಲವು ದೇಶಗಳಿಂದ ಸಾಹಸ ಚಾರಣಿಗರು ಬರುತ್ತಾರೆ. ಈ ಚಟುವಟಿಕೆಗಳನ್ನು ಸಂಘಟಿತ ರೂಪದಲ್ಲಿ ನಡೆಸುವ ಪ್ರಯತ್ನದ ಕಡೆಗೆ ಪ್ರವಾಸೋದ್ಯಮ ಇಲಾಖೆ ಗಮನವನ್ನೇ ಹರಿಸಿಲ್ಲ. ಈ ನೆಲದ ಯುವಜನರಲ್ಲೂ ಸಾಹಸ ಕ್ರೀಡೆಗಳ ಕುರಿತು ಆಸಕ್ತಿ ಮೂಡಿಸುವ ಅಪಾರ ಸಾಧ್ಯತೆಗಳನ್ನೂ ಮರೆತುಬಿಟ್ಟಿದೆ. ಇದು ಒಂದು ಸಣ್ಣ ಉದಾಹರಣೆ ಅಷ್ಟೇ. ‘ಒಂದು ರಾಜ್ಯ, ಹಲವು ಜಗತ್ತು’ ಎಂದು ತನ್ನ ಪ್ರಚಾರ ಕರಪತ್ರಗಳಲ್ಲಿ, ವೆಬ್‌ಸೈಟ್‌ನಲ್ಲಿ ಹಾಕಿಕೊಂಡಿರುವ ಇಲಾಖೆಯು ಹಂಪಿಯಲ್ಲಿರುವ ಹಲವು ಜಗತ್ತುಗಳನ್ನು ಬೇಕೆಂದೇ ಮರೆತಂತಿದೆ.

ಯುನೆಸ್ಕೊ 1986ರಲ್ಲೇ ಹಂಪಿಯನ್ನು ವಿಶ್ವ ಪಾರಂಪರಿಕ ತಾಣ ಎಂದು ಘೋಷಿಸಿದೆ. ಅದಾಗಿ ಮೂರು ದಶಕಗಳ ಮೇಲೆ ಮೂರು ವರ್ಷವಾಗಿದೆ. ಈ ಅವಧಿಯಲ್ಲಿ ಪ್ರತಿವರ್ಷವೂ ಒಂದೊಂದು ಜಗತ್ತನ್ನು ಅಭೂತಪೂರ್ವವಾಗಿ ಅಭಿವೃದ್ಧಿಪಡಿಸಿ ತೆರೆದಿಡುವ ಸಾಧ್ಯತೆ ಇತ್ತು. ಇಲ್ಲಿನ ಹಲವು ಸ್ಮಾರಕಗಳು ಅಳಿವಿನಂಚಿನಲ್ಲಿವೆ ಎಂದೂ ಯುನೆಸ್ಕೊ ಗುರುತಿಸಿ ಹಲವು ವರ್ಷಗಳಾಗಿವೆ. ಆದರೂ ಇವುಗಳ ಸಂರಕ್ಷಣೆ ವಿಷಯದಲ್ಲಿ ಪುರಾತತ್ವ ಇಲಾಖೆಯು ಬಸವನಹುಳುವಿಗೆ ಸಡ್ಡು ಹೊಡೆದಂತೆ ಕೆಲಸ ಮಾಡುತ್ತಿದೆ.

ಹಂಪಿಯ ಕೃಷ್ಣ ದೇಗುಲದ ಕಂಬಗಳನ್ನು ನಾಲ್ವರು ಯುವಕರು ಉರುಳಿಸಿ ಕೇಕೆ ಹಾಕಿ ನಕ್ಕ ವಿಡಿಯೊ ವೈರಲ್‌ ಆದ ಬಳಿಕ ಇಲಾಖೆಯು ಸಿ.ಸಿ.ಟಿ.ವಿ ಕ್ಯಾಮೆರಾಗಳ ಮೊರೆ ಹೋಗಿದೆ. ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ಗಮನಹರಿಸಿದೆ. ಕಂಬಗಳನ್ನು ಉರುಳಿಸಿದ ಯುವಕರಿಂದ ಇಲಾಖೆಯು ಕೋರ್ಟ್‌ ಆದೇಶದಂತೆ ತಲಾ ₹70 ಸಾವಿರದಂತೆ ದಂಡ ಶುಲ್ಕ ವಸೂಲು ಮಾಡಿ, ಅವರಿಂದಲೇ ಕಂಬಗಳನ್ನು ಎತ್ತಿನಿಲ್ಲಿಸುವ ಕೆಲಸ ಮಾಡಿಸಿದ್ದು, ಸ್ಮಾರಕಗಳ ಕುರಿತು ಲಘುವಾಗಿ ಆಲೋಚಿಸುವವರಿಗೆ ತಕ್ಕ ಪಾಠವೇ ಸರಿ.

ಸಂರಕ್ಷಿತ ಸ್ಮಾರಕಗಳ ಕೆಲವು ನೂರು ಮೀಟರ್‌ ವ್ಯಾಪ್ತಿಯಲ್ಲಿ ಯಾವುದೇ ಸಾರ್ವಜನಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತಿಲ್ಲ ಎನ್ನುತ್ತವೆ ನಿಯಮಗಳು. ಆದರೆ ಸರ್ಕಾರವೇ ಈ ನಿಯಮಗಳನ್ನು ಉತ್ಸವದ ಹೆಸರಿನಲ್ಲಿ ಉಲ್ಲಂಘಿಸಿ, ಸ್ಮಾರಕಗಳ ಆವರಣದಲ್ಲೇ ಕಾರ್ಯಕ್ರಮಗಳನ್ನು ಸಂಘಟಿಸಿ ಸಾವಿರಾರು ಜನರನ್ನು ಕರೆಯುತ್ತದೆ. ಈ ಬಾರಿಯ ಉತ್ಸವಕ್ಕಾಗಿ ಏರ್ಪಡಿಸಿದ್ದ ಐದು ವೇದಿಕೆಗಳೂ ಸ್ಮಾರಕಗಳ ತಪ್ಪಲಿನಲ್ಲೇ ಇದ್ದವು. ಉತ್ಸವದ ಸಂದರ್ಭದಲ್ಲಿ ಇಡೀ ಹಂಪಿ ಬಯಲು ಶೌಚಾಲಯವಾಗಿ ಬದಲಾಗಿದ್ದು ಇನ್ನೊಂದು ದುರಂತ. ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮಾತ್ರ ಸಂಚಾರಿ ಶೌಚಾಲಯಗಳನ್ನು ಸ್ಥಾಪಿಸಿದ್ದ ಆಡಳಿತವು ಜನರಿಗೆ ಸಮೂಹ ತಾತ್ಕಾಲಿಕ ಶೌಚಾಲಯಗಳನ್ನು ಏರ್ಪಡಿಸುವ ಕಡೆಗೆ ಗಮನವನ್ನೇ ಹರಿಸಿರಲಿಲ್ಲ.

ಉತ್ಸವದ ಸಂದರ್ಭದಲ್ಲಿ ಮಾತ್ರ ಆಡಳಿತಕ್ಕೆ ಹಂಪಿ ನೆನಪಾಗುತ್ತದೆ. ಉಳಿದ ಎಲ್ಲ ಕಾಲದಲ್ಲೂ ಹಂಪಿ ನಿಜವಾದ ಅರ್ಥದಲ್ಲಿ ‘ಮರೆತು ಹೋದ ಸಾಮ್ರಾಜ್ಯ’ವೇ. ಹಂಪಿಯ ಅಭಿವೃದ್ಧಿ ಬಗ್ಗೆ ಪ್ರವಾಸೋದ್ಯಮ ಇಲಾಖೆ, ಗ್ರಾಮ ಪಂಚಾಯಿತಿ, ಹಂಪಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾಡಳಿತ, ಪುರಾತತ್ವ ಇಲಾಖೆಯ ನಡುವೆ ಒಂದು ಒಗ್ಗಟ್ಟಿನ ಸಭೆ ಇದುವರೆಗೂ ನಡೆದಿಲ್ಲ. ಈ ಇಲಾಖೆಗಳು, ಆಡಳಿತ ಸಂಸ್ಥೆಗಳು ಹಂಪಿಯಲ್ಲಿ ಹರಡಿಕೊಂಡಿರುವ ಬಂಡೆಗಳಂತೆಯೇ ಪ್ರತ್ಯೇಕವಾಗಿ ನಿಂತು ಕಾರ್ಯ ನಿರ್ವಹಿಸುತ್ತಿರುವುದು ಕೂಡ, ಇಲ್ಲಿ ನಮ್ಮ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂಬುದನ್ನು ಹೇಳುತ್ತದೆ. ಕೆಲವು ವರ್ಷಗಳ ಹಿಂದೆ ನಡೆದ, ಹಂಪಿಯ ಪ್ರಸಿದ್ಧ ವಿರೂಪಾಕ್ಷೇಶ್ವರ ಗುಡಿಯ ಎದುರಿನ ರಸ್ತೆ ವಿಸ್ತರಣೆಯ ಬಳಿಕ ಅಲ್ಲಿ ಎದ್ದು ಕಾಣುವ ‘ಅಭಿವೃದ್ಧಿ ಗುರುತು’ ಮೂಡಿಲ್ಲ. ದೇವಾಲಯದ ಪಕ್ಕದಲ್ಲೇ ಹರಿಯುವ ತುಂಗಭದ್ರಾ ನದಿಯಲ್ಲಿ ಮುಳುಗೇಳುವ ಮಹಿಳೆಯರು ಬಟ್ಟೆ ಬದಲಿಸಲು ಈಗಲೂ ಅಲ್ಲಿ ಸುರಕ್ಷಿತ ವ್ಯವಸ್ಥೆ ಇಲ್ಲ. ಹಂಪಿಗೆ ಬರುವ ಮಹಿಳೆಯರ ಬಗ್ಗೆ ಅಧಿಕಾರಸ್ಥರ ನಿಲುವು ಏನು ಎಂಬುದಕ್ಕೆ ಇದು ಕನ್ನಡಿ ಹಿಡಿಯುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !