ಭಾರತದ ಗ್ಲಾಸಿಗೆ ಸ್ಪೇನ್‌ನ ಥ್ರಿಲ್ಲರ್ ಮದ್ಯ!

ಗುರುವಾರ , ಮಾರ್ಚ್ 21, 2019
32 °C

ಭಾರತದ ಗ್ಲಾಸಿಗೆ ಸ್ಪೇನ್‌ನ ಥ್ರಿಲ್ಲರ್ ಮದ್ಯ!

Published:
Updated:
Prajavani

ಚಿತ್ರ: ಬದ್ಲಾ (ಹಿಂದಿ)
ನಿರ್ಮಾಣ: ಗೌರಿ ಖಾನ್, ಸುನಿರ್, ಅಕ್ಷಯ್ ಪುರಿ, ಗೌರವ್ ವರ್ಮಾ
ನಿರ್ದೇಶನ: ಸುಜೊಯ್ ಘೋಷ್
ತಾರಾಗಣ: ಅಮಿತಾಭ್ ಬಚ್ಚನ್, ತಾಪ್ಸಿ ಪನ್ನು, ಟೋನಿ ಲ್ಯೂಕ್, ಅಮೃತಾ ಸಿಂಗ್, ಮಾನವ್ ಕೌಲ್, ತನ್ವೀರ್ ಘನಿ

–––

ಒರಿಯೋಲ್ ಪಾಲೊ ಬರೆದು ನಿರ್ದೇಶಿಸಿದ್ದ ‘ದಿ ಇನ್‌ವಿಸಿಬಲ್ ಗೆಸ್ಟ್‌’ ಸ್ಪೇನ್‌ ಸಿನಿಮಾ ಸರಿಯಾಗಿ ಎರಡು ವರ್ಷಗಳ ಹಿಂದೆ ಸದ್ದು ಮಾಡಿತ್ತು. ಬಿಗಿಯಾದ ಬಂಧದ ಈ ಮಿಸ್ಟರಿ ಕ್ರೈಮ್ ಥ್ರಿಲ್ಲರ್‌, ಅಂಥದ್ದೇ ಶೈಲಿಯನ್ನು ಮುದ್ದಿಸುವ ನಿರ್ದೇಶಕ ಸುಜೊಯ್ ಘೋಷ್ ಕೈಗೆ ಸಿಕ್ಕಿದೆ. ಅವರು ಸ್ಪೇನ್‌ ದೇಶದ ಮದ್ಯವನ್ನು ಅನಾಮತ್ತು ಭಾರತದ ಲೋಟಕ್ಕೆ ಬಗ್ಗಿಸಿಕೊಂಡಿದ್ದಾರೆ. ಮೂಲ ಸಿನಿಮಾದ ಪ್ರಮುಖ ಗಂಡು ಪಾತ್ರ ಇಲ್ಲಿ ಹೆಣ್ಣಾಗಿದೆ ಎನ್ನುವುದನ್ನು ಬಿಟ್ಟರೆ ಸೃಜನಶೀಲತೆಯ ಋಣಭಾರ ಸ್ಪೇನ್‌ ಚಿತ್ರದ ಮೇಲೆಯೇ ಇದೆಯೆನ್ನಬೇಕು.

ನಾಯಕಿ ತಾಪ್ಸಿ ಪನ್ನು ಉಳಿದುಕಂಡ ಫ್ಲ್ಯಾಟ್‌ಗೆ ಅಮಿತಾಭ್ ಬಚ್ಚನ್ ಹೋಗುವುದರೊಂದಿಗೆ ಸಿನಿಮಾ ಶುರುವಾಗುತ್ತದೆ. ನಾಯಕಿ ನಿರೀಕ್ಷಿಸುತ್ತಿರುವ ವಕೀಲನಾಗಿ ಕಾಣಿಸಿಕೊಳ್ಳುವ ಅಮಿತಾಭ್ ಪಾತ್ರಕ್ಕೆ ಸಿನಿಮಾದಲ್ಲಿ ಹಲವು ಚಹರೆಗಳಿವೆ. ಅದೇನು ಎನ್ನುವುದು ಹಂತ ಹಂತವಾಗಿ ಅನಾವರಣಗೊಳ್ಳುತ್ತಾ ಹೋಗುತ್ತದೆ.

ಮನೆಯೊಂದರ ಡೈನಿಂಗ್‌ ಹಾಲ್‌ನಲ್ಲಿ ಕುಳಿತ ಅಮಿತಾಭ್‌ಗೆ ತಾಪ್ಸಿ ತಾನು ಸಿಲುಕಿರುವ ಅಪರಾಧ ಪ್ರಕರಣವೊಂದರ ಕಥೆಯನ್ನು ಹೇಳುತ್ತಾ ಹೋಗುತ್ತಾರೆ. ಅದು ನೋಡುಗರಾದ ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಕ್ಷಣ ಕ್ಷಣವೂ ಕುತೂಹಲವನ್ನು ಉಳಿಸಿಕೊಂಡೇ ಸಾಗುವ ಕಥೆಯಲ್ಲಿ ರೋಚಕ ತಿರುವುಗಳು, ತಣ್ಣಗಿನ ಉಪಕಥೆಗಳೂ ಇವೆ. ತಾಪ್ಸಿ, ಅಮಿತಾಭ್ ಇಬ್ಬರೂ ನಿರೂಪಕರಂತೆ ಭಾಸವಾಗುತ್ತಲೇ ಇಡೀ ಚಿತ್ರದ ಎರಡು ಅತಿ ಪ್ರಮುಖ ಪಾತ್ರಧಾರಿಗಳೂ ಆಗಿ ಕಾಡುವ ಕ್ರಮ ಆಸಕ್ತಿಕರ.

‘ಮರ್ಡರ್‌ ಮಿಸ್ಟರಿ’ಗಳಿಗೆ ಇರುವ ಅನುಕೂಲ ಅವಕ್ಕೆ ಸಹಜವಾಗಿಯೇ ಒದಗಿಬರುವ ಹಲವು ಆಯಾಮಗಳು. ಅದನ್ನು ನಿರ್ದೇಶಕರು ಸಶಕ್ತ ಥ್ರಿಲ್ಲರ್‌ ಆಗಿ ಕಟ್ಟಲು ಬೇಕಾದ ಸಿದ್ಧ ಸರಕನ್ನು ಒರಿಯೋಲ್ ಪಾಲೊ ದಯಪಾಲಿಸಿಬಿಟ್ಟಿದ್ದಾರೆ. ರಾಜ್ ವಸಂತ್ ಬರೆದಿರುವ ಗಟ್ಟಿ ಸಂಭಾಷಣೆಯಲ್ಲಿ ಮಹಾಭಾರತದ ಎಳೆಯನ್ನು ಸಮೀಕರಿಸಿಕೊಂಡಿರುವ ಬಗೆ ಗಮನಾರ್ಹ.

ರಂಗತಂತ್ರದಂತೆ ತೆರೆದುಕೊಳ್ಳುವ ಸಿನಿಮಾ ಆಮೇಲಾಮೇಲೆ ಸಿನಿಮೀಯ ತಿರುವುಗಳನ್ನು ಗಿಟ್ಟಿಸಿಕೊಳ್ಳುತ್ತಾ, ನೋಡುಗರ ಕಣ್ಣು ಕೀಲಿಸಿಕೊಳ್ಳುತ್ತದೆ. ಕ್ಲೈಮ್ಯಾಕ್ಸ್‌ ಅಂತೂ ಅತ್ಯನಿರೀಕ್ಷಿತ; ‘ಅಬ್ಬಾ’ ಎಂಬ ಉದ್ಗಾರ ಹೊರಡಿಸುವಷ್ಟು ಶಕ್ತ.

ಸಣ್ಣ ಸಣ್ಣ ವಿವರಗಳಲ್ಲೇ ಪ್ರಕರಣದ ಹಲವು ಮಗ್ಗಲುಗಳನ್ನು ತಡಕುತ್ತಾ, ಅನಿರೀಕ್ಷಿತ ತಿರುವುಗಳ ‘ದರ್ಶನ’ ಮಾಡಿಸುವ ಸಿನಿಮಾದ ಜೀವಾಳ ಅಮಿತಾಭ್ ಬಚ್ಚನ್ ನಯನಾಭಿನಯ. ಅವರೊಟ್ಟಿಗೆ ತಾಪ್ಸಿ ಅಭಿನಯದಲ್ಲಿ ಜುಗಲ್‌ಬಂದಿಗೆ ಇಳಿದಂತಿದೆ.

ಅವಿಕ್ ಮುಖ್ಯೋಪಾಧ್ಯಾಯ್ ಸಿನಿಮಾಟೊಗ್ರಫಿ ಅಲ್ಲಲ್ಲಿ ಕಣ್ಣಿಗೆ ‘ರಿಲೀಫ್’ ನೀಡಿದೆ. ಅವರ ಕೆಲಸ ಹಾಗೂ ಮೋನಿಷಾ ಸಂಕಲನದ ಔಚಿತ್ಯಪ್ರಜ್ಞೆಗೂ ಹೆಚ್ಚು ಅಂಕಗಳು ಸಲ್ಲಬೇಕು. ಶಾರುಖ್ ಖಾನ್ ಒಡೆತನದ ರೆಡ್‌ ಚಿಲ್ಲೀಸ್‌ ಸಂಸ್ಥೆ ನಿರ್ಮಾಣಕ್ಕಾಗಿ ಇಂಥ ಸಿನಿಮಾ ಆಯ್ಕೆ ಮಾಡಿಕೊಂಡಿರುವುದು ಕೂಡ ಉಲ್ಲೇಖನಾರ್ಹ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !