ಸಾಮಾಜಿಕ ಮಾಧ್ಯಮಗಳೂ ನೀತಿ ಸಂಹಿತೆ ವ್ಯಾಪ್ತಿಗೆ

ಮಂಗಳವಾರ, ಮಾರ್ಚ್ 19, 2019
21 °C
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಹೇಳಿಕೆ

ಸಾಮಾಜಿಕ ಮಾಧ್ಯಮಗಳೂ ನೀತಿ ಸಂಹಿತೆ ವ್ಯಾಪ್ತಿಗೆ

Published:
Updated:

ಮಂಗಳೂರು: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಮಗಳು ಮತ್ತು ಜಾಲತಾಣಗಳನ್ನೂ ಮಾಧ್ಯಮಗಳ ವ್ಯಾಪ್ತಿಯಲ್ಲೇ ಪರಿಗಣಿಸಲಾಗುವುದು. ಈ ಮಾಧ್ಯಮಗಳಲ್ಲಿನ ಪ್ರಚಾರದ ಮೇಲೆ ತೀವ್ರ ನಿಗಾ ಇರಿಸಲಾಗುವುದು ಎಂದು ಮಂಗಳೂರು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್ ತಿಳಿಸಿದರು.

ಮಂಗಳೂರು ನಗರ ಪೊಲೀಸ್ ಕಮಿಷನರ್‌ ಸಂದೀಪ್‌ ಪಾಟೀಲ್‌ ಮತ್ತು ದಕ್ಷಿಣ ಕನ್ನಡ ಎಸ್‌ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಬಾಬು ಅವರೊಂದಿಗೆ ಸೋಮವಾರ ಜಂಟಿ ‍ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಬಾರಿ ಸಾಮಾಜಿಕ ಮಾಧ್ಯಮಗಳು ಮತ್ತು ಜಾಲತಾಣಗಳಲ್ಲಿ ನಡೆಸುವ ಎಲ್ಲ ಚಟುವಟಿಕೆಗಳೂ ಚುನಾವಣಾ ನೀತಿ ಸಂಹಿತೆ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಯ ವ್ಯಾಪ್ತಿಯಲ್ಲಿ ಪರಿಶೀಲನೆಗೊಳಪಡುತ್ತವೆ’ ಎಂದರು.

ಸಾಮಾಜಿಕ ಮಾಧ್ಯಮಗಳಲ್ಲಿ ನಡೆಸುವ ಚುನಾವಣಾ ಪ್ರಚಾರದ ವೆಚ್ಚವನ್ನು ಅಭ್ಯರ್ಥಿಯ ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು. ಯಾವುದೇ ವ್ಯಕ್ತಿ ಅಭ್ಯರ್ಥಿಯ ಅನುಮತಿ ಪಡೆಯದೇ ಸಾಮಾಜಿಕ ಮಾಧ್ಯಮ ಮತ್ತು ಜಾಲತಾಣಗಳಲ್ಲಿ ಪ್ರಚಾರ ನಡೆಸಿದರೆ ಅದು ಪ್ರಜಾಪ್ರತಿನಿಧಿ ಕಾಯ್ದೆಯ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ. ಇದೇ ಮೊದಲ ಬಾರಿಗೆ ಕೇಂದ್ರ ಚುನಾವಣಾ ಆಯೋಗ ಸಾಮಾಜಿಕ ಮಾಧ್ಯಮಗಳು ಮತ್ತು ಜಾಲತಾಣಗಳ ವಿಚಾರದಲ್ಲಿ ಬಿಗಿಯಾದ ನಿಲುವು ತೆಗೆದುಕೊಂಡಿದೆ ಎಂದು ವಿವರಿಸಿದರು.

ಫ್ಲೆಕ್ಸ್‌, ಬ್ಯಾನರ್‌ ತೆರವು: ಭಾನುವಾರ ಸಂಜೆಯಿಂದಲೇ ಜಿಲ್ಲೆಯಾದ್ಯಂತ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿರುವ ಎಲ್ಲ ರಾಜಕೀಯ, ಧಾರ್ಮಿಕ ಮತ್ತು ಇತರೆ ವಿಚಾರಗಳಿಗೆ ಸಂಬಂಧಿಸಿದ ಫ್ಲೆಕ್ಸ್‌, ಬ್ಯಾನರ್‌ಗಳನ್ನು ತೆರವುಗೊಳಿಸಲಾಗುವುದು. ಸಾರ್ವಜನಿಕರು ತಾವಾಗಿಯೇ ತೆರವು ಮಾಡಿ ಸುರಕ್ಷಿತವಾಗಿ ಇರಿಸಿಕೊಳ್ಳಲೂಬಹುದು ಎಂದರು.

ಖಾಸಗಿ ಸ್ಥಳಗಳಲ್ಲಿ ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳನ್ನು ಅಳವಡಿಸಿಕೊಳ್ಳಬೇಕಾದರೆ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯುವುದು ಕಡ್ಡಾಯ. ಅವು ಚುನಾವಣೆ ಮೇಲೆ ಪ್ರಭಾವ ಬೀರುವಂತಿದ್ದರೆ ನೀತಿ ಸಂಹಿತೆಯ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

16.97 ಲಕ್ಷ ಮತದಾರರು: ಜನವರಿ 16ಕ್ಕೆ ಪ್ರಕಟಿಸಲಾದ ಮತದಾರರ ಪಟ್ಟಿಯ ಪ್ರಕಾರ ಜಿಲ್ಲೆಯಲ್ಲಿ 16,97,417 ಮತದಾರರಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ 15,64,114 ಮತದಾರರಿದ್ದರು. ಈಗ ಮತದಾರರ ಸಂಖ್ಯೆಯಲ್ಲಿ 1,33,303 ಹೆಚ್ಚಳವಾಗಿದೆ. 21,292 ಯುವ ಮತದಾರರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ವಿವರ ನೀಡಿದರು.

ಲೋಕಸಭಾ ಸದಸ್ಯರ ಆಯ್ಕೆಗೆ ಜಿಲ್ಲೆಯಾದ್ಯಂತ 1,861 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಇದಕ್ಕಾಗಿ ವಿದ್ಯುನ್ಮಾನ ಮತಯಂತ್ರ ಮತ್ತು ವಿವಿಪ್ಯಾಟ್‌ಗಳನ್ನು ಸಜ್ಜುಗೊಳಿಸಲಾಗಿದೆ. 2,698 ಬ್ಲಾಎಟ್‌ ಯೂನಿಟ್‌, 2,233 ಕಂಟ್ರೋಲ್‌ ಯೂನಿಟ್‌ ಮತ್ತು 2,419 ವಿವಿಪ್ಯಾಟ್‌ ಯಂತ್ರಗಳನ್ನು ಮೊದಲ ಹಂತದ ತಪಾಸಣೆ ಮುಗಿಸಿ ಭದ್ರತಾ ಕೊಠಡಿಗಳಲ್ಲಿ ಇರಿಸಲಾಗಿದೆ ಎಂದರು.

ಚುನಾವಣಾ ಅಕ್ರಮಗಳ ತಡೆಗೆ 73 ಫ್ಲೈಯಿಂಗ್‌ ಸ್ಕ್ವಾಡ್‌ ತಂಡ, 62 ಸ್ಥಿರ ನಿಗಾ ತಂಡ ಮತ್ತು 25 ವಿಡಿಯೊ ನಿಗಾ ತಂಡಗಳನ್ನು ರಚಿಸಲಾಗಿದೆ. ಚುನಾವಣಾ ಸಮಯದಲ್ಲಿ ವಶಕ್ಕೆ ಪಡೆಯುವ ನಗದನ್ನು ಮುಟ್ಟುಗೋಲು ಹಾಕಿಕೊಳ್ಳುವ ಮತ್ತು ಬಿಡುಗಡೆ ಮಾಡುವುದಕ್ಕೆ ಚುನಾವಣಾ ಆಯೋಗ ಸ್ಪಷ್ಟವಾದ ಮಾರ್ಗಸೂಚಿಗಳನ್ನು ನೀಡಿದೆ. ಅದರಂತೆ ತ್ವರಿತವಾಗಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಚುನಾವಣೆಯ ಅವಧಿಯಲ್ಲಿ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಕೆ ನಿಷೇಧಿಸಲಾಗಿದೆ. ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ‘ಸೀ ವಿಜಿಲ್‌’ ಮೊಬೈಲ್‌ ಅಪ್ಲಿಕೇಷನ್‌ ಮೂಲಕವೂ ದೂರು ಸಲ್ಲಿಸಬಹುದು ಎಂದರು.

ಕೇಂದ್ರ ಪಡೆ ನಿಯೋಜನೆ:

ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ಮಾತನಾಡಿ, ‘ಚುನಾವಣಾ ಪೂರ್ವ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಪರಾಧ ಹಿನ್ನೆಲೆಯ 500 ಜನರನ್ನು ಗುರುತಿಸಿದ್ದು, ಭದ್ರತಾ ಪ್ರಕರಣ ದಾಖಲಿಸಿ ಬಾಂಡ್‌ ಪಡೆಯಲಾಗುತ್ತಿದೆ. ಮೂರು ರೌಡಿಗಳನ್ನು ಗಡೀಪಾರು ಮಾಡಲು ಆದೇಶ ಹೊರಡಿಸಲಾಗಿದೆ. ಆರು ಸ್ಥಳಗಳಲ್ಲಿ ಅಂತರರಾಜ್ಯ ತನಿಖಾ ಠಾಣೆ ಆರಂಭಿಸಲಾಗಿದೆ. ಕೇಂದ್ರ ಪಡೆಯ ಒಂದು ಕಂಪನಿ ಬಂದಿದ್ದು, ಸೂಕ್ಷ್ಮ ಸ್ಥಳಗಳಲ್ಲಿ ನಿಯೋಜಿಸಲಾಗುವುದು’ ಎಂದರು.

ಕಮಿಷನರೇಟ್‌ ವ್ಯಾಪ್ತಿಯಲ್ಲಿ 2,010 ಪರವಾನಗಿ ಪಡೆದ ಶಸ್ತ್ರಾಸ್ತ್ರಗಳಿವೆ. ಅವುಗಳನ್ನು ಠೇವಣಿ ಇರಿಸುವಂತೆ ನೋಟಿಸ್‌ ನೀಡಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳು ಮತ್ತು ಅಪರಾಧಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಕೆಲಸ ಚುರುಕಾಗಿದೆ ಎಂದು ತಿಳಿಸಿದರು.

ಎಸ್‌ಪಿ ಲಕ್ಷ್ಮೀಪ್ರಸಾದ್ ಬಾಬು ಮಾತನಾಡಿ, ‘ಜಿಲ್ಲೆಯ 46 ಮತಗಟ್ಟೆಗಳು ನಕ್ಸಲ್‌ ಪೀಡಿತ ಪ್ರದೇಶದಲ್ಲಿವೆ. ಅಲ್ಲಿಗೆ ಕೇಂದ್ರದ ಭದ್ರತಾ ಪಡೆಗಳನ್ನು ನಿಯೋಜಿಸಲಾಗುವುದು. ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ 9,621 ಪರವಾನಗಿ ಪಡೆದ ಶಸ್ತ್ರಾಸ್ತ್ರಗಳಿದ್ದು, ಅವುಗಳನ್ನು ಪೊಲೀಸ್‌ ಠಾಣೆ ಅಥವಾ ಬಂದೂಕು ಅಂಗಡಿಗಳಲ್ಲಿ ಠೇವಣಿ ಇರಿಸಲು ಸೂಚಿಸಲಾಗಿದೆ. 300 ಜನರ ವಿರುದ್ಧ ಭದ್ರತಾ ಪ್ರಕರಣ ದಾಖಲಿಸಲಾಗಿದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ವೆಂಕಟಾಚಲಪತಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !