ನನ್ನ ಜೀವನ ವಿಭಿನ್ನ; ನಾನು ಟೀಕೆಗಳಿಗೆ ಪ್ರತಿಕ್ರಿಯಿಸಲ್ಲ: ಶಿಖರ್ ಧವನ್ ಅಭಿಮತ

ಶನಿವಾರ, ಮಾರ್ಚ್ 23, 2019
24 °C

ನನ್ನ ಜೀವನ ವಿಭಿನ್ನ; ನಾನು ಟೀಕೆಗಳಿಗೆ ಪ್ರತಿಕ್ರಿಯಿಸಲ್ಲ: ಶಿಖರ್ ಧವನ್ ಅಭಿಮತ

Published:
Updated:
Prajavani

ಮೊಹಾಲಿ (ಪಂಜಾಬ್): ‘ನಾನು ಜೀವನವನ್ನು ಅನುಭವಿಸುವ ರೀತಿಯು ವಿಭಿನ್ನ. ಟೀಕೆಗಳಿಗೆ ಚಿಂತಿಸುವುದೂ ಇಲ್ಲ, ಪ್ರತಿಕ್ರಿಯಿಸುವುದೂ ಇಲ್ಲ. ಆಟದ ಮೂಲವೇ ಉತ್ತರಿಸುತ್ತೇನೆ’–

ಭಾನುವಾರ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ಎದುರಿನ ಏಕದಿನ ಪಂದ್ಯದಲ್ಲಿ ಶತಕ ಗಳಿಸಿದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರ ಮಾತುಗಳಿವು.

ದೆಹಲಿಯ ಎಡಗೈ ಬ್ಯಾಟ್ಸ್‌ಮನ್ ಬ್ಯಾಟ್‌ನಿಂದ ಆರು ತಿಂಗಳ ನಂತರ ದಾಖಲಾದ ಶತಕ ಇದು. ಹೋದ ವರ್ಷ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ  ಪಾಕಿಸ್ತಾನ ತಂಡದ ಎದುರು ಶತಕ ಹೊಡೆದಿದ್ದರು. ಅದರ ನಂತರ ಆಡಿದ ಪಂದ್ಯಗಳಲ್ಲಿ ಫಾರ್ಮ್‌ನಲ್ಲಿ ಅಸ್ಥಿರತೆ ಎದುರಿಸಿದ್ದರು. ಈಗ ನಡೆಯುತ್ತಿರುವ ಆಸ್ಟ್ರೇಲಿಯಾ ಎದುರಿನ ಸರಣಿಯ ಮೊದಲ ಮೂರು ಪಂದ್ಯಗಳಿಂದ ಅವರು ಗಳಿಸಿದ್ದು ಕೇವಲ 21 ರನ್‌ಗಳನ್ನು ಮಾತ್ರ. ಆದ್ದರಿಂದ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಆದರೆ, ಅವರು ತಮ್ಮ ಪದಾರ್ಪಣೆ ಟೆಸ್ಟ್‌ ಪಂದ್ಯದಲ್ಲಿ ಶತಕ ಹೊಡೆದಿದ್ದ ಮೊಹಾಲಿಯಲ್ಲಿಯೇ ಏಕದಿನ ಕ್ರಿಕೆಟ್‌ನಲ್ಲಿ ಮರಳಿ ಅರಳಿರುವುದು ವಿಶೇಶ. 143 ರನ್‌ಗಳನ್ನು ಗಳಿಸಿದರು. ಆದರೆ, ಭಾರತವು ಈ ಪಂದ್ಯದಲ್ಲಿ ಸೋತಿತು.

‘ಮೊದಲನೇಯದಾಗಿ ನಾನು ಸುದ್ದಿಪತ್ರಿಕೆಗಳನ್ನು ಓದುವುದಿಲ್ಲ. ಎರಡನೇಯದಾಗಿ ನನಗೆ ಬೇಡವಾದ  ಮಾಹಿತಿಗಳನ್ನು ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಆದ್ದರಿಂದ ನನ್ನ ಸುತ್ತಮುತ್ತ ಏನು ನಡೆಯುತ್ತದೆ ಎಂದು ಗೋತ್ತಾಗುವುದಿಲ್ಲ. ನನ್ನದೇ ಆದ ಜಗತ್ತಿನಲ್ಲಿ ಜೀವಿಸುತ್ತೇನೆ. ಯೋಚನೆಗಳು ಯಾವ ನಿಟ್ಟಿನಲ್ಲಿ ಇರಬೇಕು ಎಂಬುದನ್ನು ನಿರ್ಧರಿಸಿ ಅದೇ ರೀತಿ ನಡೆದುಕೊಳ್ಳುತ್ತೇನೆ’ ಎಂದು ಹೇಳಿದರು.

‘ಶಾಂತಚಿತ್ತ ಮತ್ತು ಉಲ್ಲಸಿತನಾಗಿರುವಾಗ ಮಾತ್ರ ಒಳ್ಳೆಯ ಆಟವಾಡಲು ಸಾಧ್ಯವಾಗುತ್ತದೆ. ಆಗಿ ಹೋಗಿದ್ದರ ಕುರಿತು ಚಿಂತಿಸುವ ಅಥವಾ ದುಃಖಪಡುವುದರಿಂದ ಅಲ್ಲ. ಮನಸ್ಸಿಗೆ ಬೇಜಾರಾದಾಗ ಆ ವಿಷಯದಿಂದ ಕೂಡಲೇ ವಿಮುಖನಾಗುತ್ತೇನೆ. ನನ್ನ ಬಗ್ಗೆ ಯಾರು ಏನು ಮಾತಾಡುತ್ತಾರೆ, ಏನು ಬರೆಯುತ್ತಾರೆ ಎಂದು ತಲೆಕೆಡಿಸಿಕೊಳ್ಳುವುದಿಲ್ಲ. ಸಕಾರಾತ್ಮಕ ಮನೋಭಾವದಿಂದ ಮುಂದಿನ ಗುರಿಯತ್ತ ಚಲಿಸುತ್ತೇನೆ’ ಎಂದು 33 ವರ್ಷದ ಶಿಖರ್ ಹೇಳಿದರು.

‘ವಾಸ್ತವ ಸಂಗತಿಯನ್ನು ಒಪ್ಪಿಕೊಳ್ಳುತ್ತೇನೆ. ಆಗುತ್ತಿರುವುದನ್ನು ವಿರೋಧಿಸುವುದಿಲ್ಲ. ಎಲ್ಲವನ್ನೂ ಒಪ್ಪಿಕೊಂಡು ಮುಂದೆ ಸಾಗುತ್ತೇನೆ. ಒಳ್ಳೆಯದಾಗುತ್ತದೆ. ನನ್ನ ಕೌಶಲಗಳ ಸುಧಾರಣೆ, ಫಿಟ್‌ನೆಸ್ ಮತ್ತು ಸರಿಯಾದ ಯೋಚನಾಲಹರಿ  ಇದ್ದಾಗ ಬೇರೆ ಯಾವ ಯೋಚನೆಯನ್ನೂ ಮಾಡುವುದಿಲ್ಲ. ಜೀವನವನ್ನು ಎಂಜಾಯ್ ಮಾಡುತ್ತೇನೆ ’ ಎಂದರು. 

ಶಿಖರ್ ಅಂಕಿ ಅಂಶ (ಏಕದಿನ ಕ್ರಿಕೆಟ್)
ಪಂದ್ಯ: 127
ಇನಿಂಗ್ಸ್: 126
ರನ್: 5343
ಶ್ರೇಷ್ಠ: 143
ಸ್ಟ್ರೈಕ್‌ರೇಟ್ : 93.83
ಶತಕ: 16
ಅರ್ಧಶತಕ: 27
ಬೌಂಡರಿ: 664
ಸಿಕ್ಸರ್‌: 67

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !