ಲೋಕಸಭಾ ಚುನಾವಣೆ: ನೀತಿ ಸಂಹಿತೆ ಉಲ್ಲಂಘಿಸಿದರೆ ಕ್ರಮ

ಭಾನುವಾರ, ಮಾರ್ಚ್ 24, 2019
33 °C
ಲೋಕಸಭೆ ಚುನಾವಣೆ ಎದುರಿಸಲು ಸಕಲ ರೀತಿಯಲ್ಲಿ ಸಜ್ಜುಗೊಳ್ಳುತ್ತಿರುವ ಜಿಲ್ಲಾಡಳಿತ, ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣದ ಕ್ರಮದ ಎಚ್ಚರಿಕೆ

ಲೋಕಸಭಾ ಚುನಾವಣೆ: ನೀತಿ ಸಂಹಿತೆ ಉಲ್ಲಂಘಿಸಿದರೆ ಕ್ರಮ

Published:
Updated:
Prajavani

ಚಿಕ್ಕಬಳ್ಳಾಪುರ: ‘ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ನಡೆಸಲು ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಜಾರಿಗೆ ಬಂದಿರುವ ಮಾದರಿ ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ತ್ವರಿತವಾಗಿ, ಕಠಿಣ ಕ್ರಮ ಜರುಗಿಸಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತವಾಗಿ ಏಪ್ರಿಲ್‌ 18ರಂದು ನಡೆಯುವ ಮತದಾನದಲ್ಲಿ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರ ಕೂಡ ಸೇರಿದೆ. ಮೇ 23 ಫಲಿತಾಂಶ ಪ್ರಕಟವಾಗಲಿದೆ’ ಎಂದು ತಿಳಿಸಿದರು.

‘ಲೋಕಸಭೆ ಕ್ಷೇತ್ರ ವಿವಿಧ ಜಿಲ್ಲೆಗಳ ವಿಧಾನಸಭೆ ಕ್ಷೇತ್ರಗಳೊಂದಿಗೆ ಹಂಚಿಕೆಯಾಗಿರುವುದರಿಂದ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಮನ್ವಯದಿಂದ ಮಾದರಿ ನೀತಿ ಸಂಹಿತೆ ಜವಾಬ್ದಾರಿ ನಿಭಾಯಿಸಲಾಗುತ್ತದೆ. ಮಾದರಿ ನೀತಿ ಸಂಹಿತೆ ಪ್ರಯುಕ್ತ ಈಗಾಗಲೇ ಜಿಲ್ಲೆಯಾದ್ಯಂತ ಪೋಸ್ಟರ್‌, ಬ್ಯಾನರ್‌ ತೆರವುಗೊಳಿಸುವ ಕಾರ್ಯ ನಡೆದಿದೆ’ ಎಂದು ಹೇಳಿದರು.

‘ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿ ₹25 ಸಾವಿರ, ಪರಿಶಿಷ್ಟ ಜಾತಿ ಮತ್ತು ವರ್ಗದವರು ₹12,500 ಠೇವಣಿ ಸಲ್ಲಿಸಬೇಕು. ನಾಮಪತ್ರ ಸಲ್ಲಿಸಲು ಬರುವ ಅಭ್ಯರ್ಥಿಯ ಜತೆಗೆ ಕೇವಲ ನಾಲ್ಕು ಜನರಿಗೆ ಮಾತ್ರ ಸಹಾಯಕ ಚುನಾವಣಾಧಿಕಾರಿ ಕಚೇರಿ ಒಳಪ್ರವೇಶಿಸಲು ಅವಕಾಶವಿದೆ. ಅಭ್ಯರ್ಥಿಗಳು ತಲಾ ₹70 ಲಕ್ಷದವರೆಗೆ ಚುನಾವಣೆ ವೆಚ್ಚ ಮಾಡಬಹುದಾಗಿದೆ’ ಎಂದರು.

‘ಲೋಕಸಭೆ ಕ್ಷೇತ್ರದ ಒಟ್ಟು ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ 2,284 ಮತಗಟ್ಟೆಗಳಿವೆ. ಈ ಪೈಕಿ 486 ಅತಿಸೂಕ್ಷ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. 9,02,487 ಪುರುಷರು, 8,87,921 ಮಹಿಳೆಯರು ಸೇರಿದಂತೆ ಒಟ್ಟು 17,90,408 ಮತದಾರರಿದ್ದಾರೆ. ಇತರ ಕ್ಷೇತ್ರಗಳ ಚುನಾವಣಾಧಿಕಾರಿಗಳಿಂದ ಮಾಹಿತಿ ಕಲೆ ಹಾಕುತ್ತಿದ್ದು, ಶೀಘ್ರದಲ್ಲಿಯೇ ಸಿಬ್ಬಂದಿ ನಿಯೋಜನೆ ಅಂತಿಮ ಚಿತ್ರಣ ಗೊತ್ತಾಗಲಿದೆ’ ಎಂದು ತಿಳಿಸಿದರು.

‘ಜಿಲ್ಲೆಯ ವ್ಯಾಪ್ತಿಯಲ್ಲಿ ಐದು ವಿಧಾನಸಭೆ ಕ್ಷೇತ್ರಗಳಲ್ಲಿ 5,05,104 ಪುರುಷರು, 5,06,613 ಮಹಿಳೆಯರು ಸೇರಿದಂತೆ ಒಟ್ಟು 10,11,717 ಮತದಾರರಿದ್ದಾರೆ. ಮತದಾನಕ್ಕಾಗಿ 1,285 ಮತಗಟ್ಟೆಗಳನ್ನು ತೆರೆಯಾಗುತ್ತದೆ. ಈ ಪೈಕಿ 284 ಅತಿಸೂಕ್ಷ ಎಂದು ಗುರುತಿಸಲಾಗಿದೆ. ಅವುಗಳಲ್ಲಿ ಕೇಂದ್ರ ಸ್ವಾಮ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ವೀಕ್ಷಕರನ್ನಾಗಿ ನಿಯೋಜಿಸಲಾಗುತ್ತದೆ ಜತೆಗೆ ವೆಬ್‌ ಕಾಸ್ಟಿಂಗ್‌ ವ್ಯವಸ್ಥೆ ಮೂಲಕ ಮತಗಟ್ಟೆ ಮೇಲೆ ನಿಗಾ ಇಡಲಾಗುತ್ತದೆ’ ಎಂದರು.

‘ಮತಗಳ ಸಜ್ಜುಗೊಳಿಸಲು ಸೆಕ್ಟರ್‌ ಅಧಿಕಾರಿಗಳು ನೇಮಕ ಮಾಡಲಾಗಿದೆ. ಅವರು ಮತಗಟ್ಟೆಗಳ ಸಿದ್ಧತೆ ಮತ್ತು ಅವುಗಳಲ್ಲಿ ಅಗತ್ಯವಾಗಿ ಇರಬೇಕಾದ ಕುಡಿಯುವ ನೀರು, ವಿದ್ಯುತ್, ಪೀಠೋಪಕರಣ, ವಿಶ್ರಾಂತಿ ಕೊಠಡಿ, ಶೌಚಾಲಯ, ಅಂಗವಿಕಲರ ಅನುಕೂಲಕ್ಕಾಗಿ ರ್‌್ಯಾಂಪ್‌ನಂತಹ ಮೂಲಸೌಕರ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳುತ್ತಾರೆ’ ಎಂದು ಹೇಳಿದರು.

‘ಜಿಲ್ಲಾ ಮಟ್ಟದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಚುನಾವಣಾಧಿಕಾರಿಗೆ ಸಹಾಯಕ ಚುನಾವಣಾಧಿಕಾರಿಯಾಗಿ ಕೆಲಸ ಮಾಡುತ್ತಾರೆ. ಉಳಿದಂತೆ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಒಬ್ಬ ಸಹಾಯಕ ಚುನಾವಣಾಧಿಕಾರಿ ನೇಮಕ ಮಾಡಲಾಗಿದೆ. ಮಾದರಿ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರುತ್ತಿದ್ದಂತೆ ಚುನಾವಣೆ ಅಕ್ರಮಗಳ ನೀಗಾ ಇಡಲು 63 ಮಾದರಿ ನೀತಿ ಸಂಹಿತೆ (ಎಂಸಿಸಿ) ಕ್ಷೀಪ್ರ ಕಾರ್ಯಪಡೆ ರಚಿಸಲಾಗಿದೆ’ ಎಂದು ತಿಳಿಸಿದರು.

‘2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ76.06 ರಷ್ಟು ಮತದಾನವಾಗಿತ್ತು. 2018ರ ವಿಧಾನಸಭೆ ಚುನಾವಣೆಯಲ್ಲಿ ಶೇ 84.19 ರಷ್ಟು ಮತದಾನವಾಗಿತ್ತು. ಈ ಚುನಾವಣೆಯಲ್ಲಿ ಹಿಂದಿನ ಪ್ರಮಾಣಕ್ಕಿಂತಲೂ ಹೆಚ್ಚಿನ ಮತದಾನಕ್ಕೆ ಕ್ರಮಕೈಗೊಳ್ಳುತ್ತಿದ್ದೇವೆ’ ಎಂದರು.

ಜಿಲ್ಲಾ ಸ್ವಿಪ್ ಸಮಿತಿ ಅಧ್ಯಕ್ಷ ಗುರುದತ್ ಹೆಗಡೆ ಮಾತನಾಡಿ, ‘ಜಿಲ್ಲೆಯಲ್ಲಿ ದೈಹಿಕ, ದೃಷ್ಟಿ, ಮಾನಸಿಕ ಅಸ್ವಸ್ಥರು, ಬುದ್ದಿಮಾಂದ್ಯರು ಸೇರಿದಂತೆ 12,334 ಅಂಗವಿಕಲ ಮತದಾರರಿದ್ದಾರೆ. ಈ ಪೈಕಿ 2,006 ಮತದಾರರಿಗೆ ಪ್ರತಿ ಗ್ರಾಮ ಪಂಚಾಯಿತಿಗೆ ಮತ್ತು ಐದು ವಾರ್ಡ್‌ಗಳಿಗೆ ತಲಾ ಒಂದು ಆಟೊ ವ್ಯವಸ್ಥೆ ಮಾಡುವ ಮೂಲಕ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ’ ಎಂದು ಹೇಳಿದರು.

‘ವಿದ್ಯುನ್ಮಾನ ಮತಯಂತ್ರಗಳ ಬಳಕೆ ಬಗ್ಗೆ ಅರಿವು ಮೂಡಿಸಲು ವ್ಯಾಪಕ ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 1.23 ಲಕ್ಷ ಅಣಕು ಮತಗಳನ್ನು ಚಲಾವಣೆಗೊಂಡಿವೆ. ಮತದಾನ ಏರಿಕೆ ಮಾಡುವುದಷ್ಟೇ ನಮ್ಮ ಗುರಿಯಲ್ಲ, ಯಾವುದೇ ಆಮಿಷಕ್ಕೆ ಒಳಗಾಗದೆ ನೈತಿಕ ಮತದಾನ ಹೆಚ್ಚಳ ಮಾಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ’ ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್ ಹಾಜರಿದ್ದರು.

ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಮತದಾರರು ಮತ್ತು ಮತಗಟ್ಟೆ ವಿವರ

ಕ್ಷೇತ್ರ               ಪುರುಷ            ಮಹಿಳೆ         ಒಟ್ಟು ಮತಗಟ್ಟೆ
ಗೌರಿಬಿದನೂರು 1,01,006 1,01,559 2,02,565 261
ಬಾಗೇಪಲ್ಲಿ       97,871 99,145 1,97,016 263
ಚಿಕ್ಕಬಳ್ಳಾಪುರ 99,202 99,895 1,99,097 254
ಯಲಹಂಕ      1,94,641 1,84,187 3,78,828 376
ಹೊಸಕೋಟೆ   1,07,729 1,04,708 2,12,437 286
ದೇವನಹಳ್ಳಿ    1,00,522 98,784 2,99,306 292
ದೊಡ್ಡಬಳ್ಳಾಪುರ 1,00,644 99,472 2,00,116 276
ನೆಲಮಂಗಲ   1,00,872 1,00,171 2,01,043 276
ಒಟ್ಟು            9,02,487 8,87,921 17,90,408 2,284

ಚಿಕ್ಕಬಳ್ಳಾಪುರ ಕ್ಷೇತ್ರದ ಚುನಾವಣೆ ಚಿತ್ರಣ
ದಿನಾಂಕ     ಪ್ರಕ್ರಿಯೆ

ಮಾರ್ಚ್ 19 ಅಧಿಸೂಚನೆ
ಮಾರ್ಚ್‌ 26 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
ಮಾರ್ಚ್‌ 27 ನಾಮಪತ್ರಗಳ ಪರಿಶೀಲನೆ
ಮಾರ್ಚ್‌ 29 ನಾಮಪತ್ರ ವಾಪಸ್‌ಗೆ ಕೊನೆಯ ದಿನ
ಏಪ್ರಿಲ್‌ 18 ಮತದಾನ
ಮೇ 23 ಫಲಿತಾಂಶ ಪ್ರಕಟ

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !